ಶಿಲ್ಲಾಂಗ್: ‘ಯುನೈಟೆಡ್ ಡೆಮಾಕ್ರಟಿಕ್ ಪಾರ್ಟಿ’ (UDP)ಯ 12 ಶಾಸಕರ ಪೈಕಿ 11 ಮಂದಿ ಬಿಜೆಪಿ ಸೇರ್ಪಡೆಗೊಂಡ ಬೆನ್ನಲ್ಲೇ ಮೇಘಾಲಯದ ಸಚಿವರೊಬ್ಬರು ರಾಜೀನಾಮೆ ನೀಡಿದ್ದಾರೆ.
ಮೇಘಾಲಯದ ಸಚಿವ ಮತ್ತು ಯುನೈಟೆಡ್ ಡೆಮಾಕ್ರಟಿಕ್ ಪಾರ್ಟಿ (ಯುಡಿಪಿ) ಅಧ್ಯಕ್ಷ ಮೆತ್ಬಾ ಲಿಂಗ್ಡೋ (Metbah Lyngdoh) ಅವರು ರಾಜ್ಯ ಸಚಿವ ಸಂಪುಟಕ್ಕೆ ರಾಜೀನಾಮೆ ನೀಡಿದ್ದಾರೆ. ಪಕ್ಷದ ಒಟ್ಟು 12 ಶಾಸಕರ ಪೈಕಿ 11 ಮಂದಿ ಬಿಜೆಪಿ ಮತ್ತು ಆಡಳಿತಾರೂಢ ನ್ಯಾಷನಲ್ ಪೀಪಲ್ಸ್ ಪಾರ್ಟಿ (ಎನ್ಪಿಪಿ) ಸೇರ್ಪಡೆಗೊಂಡ ಕೆಲವೇ ದಿನಗಳಲ್ಲಿ ಅವರು ಈ ನಿರ್ಧಾರ ಕೈಗೊಂಡಿದ್ದಾರೆ. ಈ ಪಕ್ಷಾಂತರಗಳ ನಂತರ, ರಾಜ್ಯ ವಿಧಾನಸಭೆಯಲ್ಲಿ ಯುಡಿಪಿಯಿಂದ ಉಳಿದಿರುವ ಏಕೈಕ ಶಾಸಕರು ಇವರೊಬ್ಬರೇ ಆಗಿದ್ದಾರೆ.
ಮುಖ್ಯಮಂತ್ರಿ ಕಾನ್ರಾಡ್ ಕೆ. ಸಂಗ್ಮಾ ಅವರ ನೇತೃತ್ವದ ಮೇಘಾಲಯ ಡೆಮಾಕ್ರಟಿಕ್ ಅಲೈಯನ್ಸ್ (MDA) ನಲ್ಲಿ, ಬಿಜೆಪಿ ಜೊತೆಗೆ ಯುಡಿಪಿ (UDP) ಮತ್ತು ಎನ್ಪಿಪಿ (NPP) ಕೂಡ ಭಾಗವಾಗಿವೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಲಿಂಗ್ದೋ, ರಾಜಕೀಯ ಪರಿಸ್ಥಿತಿ ಹಾಗೂ ಪಕ್ಷದೊಳಗಿನ ಇತ್ತೀಚಿನ ಬೆಳವಣಿಗೆಗಳನ್ನು ಅವಲೋಕಿಸಿದ ನಂತರ ತಾವು ಸಂಗ್ಮಾ ಅವರಿಗೆ ತಮ್ಮ ರಾಜೀನಾಮೆಯನ್ನು ಸಲ್ಲಿಸಿರುವುದಾಗಿ ತಿಳಿಸಿದ್ದಾರೆ. ಅವರು ವಿದ್ಯುತ್, ಜವಳಿ, ಜಲಸಂಪನ್ಮೂಲ ಮತ್ತು ತೆರಿಗೆ ಇಲಾಖೆಗಳ ಜವಾಬ್ದಾರಿಯನ್ನು ಹೊಂದಿದ್ದರು.
ಯುಡಿಪಿಯ ಕೇಂದ್ರ ಕಾರ್ಯಕಾರಿ ಸಮಿತಿಯು ಈ ಬೆಳವಣಿಗೆಗಳ ಕುರಿತು ಚರ್ಚಿಸಲಿದ್ದು, ಪಕ್ಷದ ನಾಯಕರು ಹಾಗೂ ಪದಾಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ಮುಂದಿನ ಕ್ರಮಗಳ ಬಗ್ಗೆ ನಿರ್ಧಾರ ಕೈಗೊಳ್ಳಲಿದೆ ಎಂದು ಲಿಂಗ್ಡೋ ತಿಳಿಸಿದ್ದಾರೆ.
