ಚಂಡೀಗಢ: ರಾಹುಲ್ ಗಾಂಧಿಗೆ(Rahul Gandhi) ಪ್ರಧಾನಿಯಾಗುವ ಆಸೆಯಿದೆ. ಅದಕ್ಕಾಗಿಯೇ ಅವರು ಮಾಕ್ ಸಂಸತ್ತು ನಡೆಸಿ ತಮ್ಮ ಆಸೆಯನ್ನು ತೀರಿಸಿಕೊಳ್ಳುವ ಹೊಸ ದಾರಿ ಕಂಡುಕೊಂಡಿದ್ದಾರೆ. ರಾಹುಲ್ ಅವರೇ, ನೀವು ನಿಮ್ಮ ಮಾಕ್ ಸಂಸತ್ತಿನಲ್ಲೇ ಪ್ರಧಾನಿಯಾಗಿ ಮುಂದುವರಿಯಿರಿ. ಆದರೆ ಭಾರತದ ಪ್ರಧಾನಿಯಾಗುವ ನಿಮ್ಮ ಆಸೆ ಮಾತ್ರ ಎಂದಿಗೂ ಈಡೇರುವುದಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ(Amit Shaha) ವ್ಯಂಗ್ಯವಾಡಿದ್ದಾರೆ.
ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ನಾಯಕತ್ವ, ರಾಜಕೀಯ ಮಹತ್ವಾಕಾಂಕ್ಷೆ ಹಾಗೂ ಕಾಂಗ್ರೆಸ್ ಪಕ್ಷದ ಭವಿಷ್ಯವನ್ನು ತೀವ್ರವಾಗಿ ಪ್ರಶ್ನಿಸಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ಮುಂಬರುವ 2027ರ ಪಂಜಾಬ್ ವಿಧಾನಸಭಾ ಚುನಾವಣೆಗೆ (Punjab Election) ರಾಜಕೀಯ ಕಹಳೆ ಊದಿದ್ದಾರೆ.
ಚಂಡೀಗಢದಲ್ಲಿ ಆಯೋಜಿಸಲಾಗಿದ್ದ ಸಾರ್ವಜನಿಕ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅಮಿತ್ ಶಾ, ರಾಹುಲ್ ಗಾಂಧಿ ಅವರ ‘ಮೊಹಬ್ಬತ್ ಕಿ ದುಕಾನ್’ (ಪ್ರೀತಿಯ ಅಂಗಡಿ) ಘೋಷಣೆಯನ್ನು ಪ್ರಸ್ತಾಪಿಸಿ ಕಟುವಾಗಿ ತಿವಿದರು. ರಾಹುಲ್ ಅವರೇ, ನಿಮ್ಮ ಪ್ರೀತಿಯ ಅಂಗಡಿಯಲ್ಲಿ ಹುಡುಕಿದರೆ ದ್ವೇಷ ಬಿಟ್ಟು ಬೇರೇನೂ ಸಿಗುವುದಿಲ್ಲ ಎಂದು ಲೇವಡಿ ಮಾಡಿದರು.
ಕಾಂಗ್ರೆಸ್ ಪಕ್ಷದ ಚುನಾವಣಾ ಸೋಲುಗಳನ್ನು ಪ್ರಸ್ತಾಪಿಸಿದ ಗೃಹ ಸಚಿವರು, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕಾಂಗ್ರೆಸ್ ಸಾಧನೆಯನ್ನು ಲೇವಡಿ ಮಾಡಿದರು. ಕಳೆದ ಮೂರು ದೆಹಲಿ ವಿಧಾನಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷ ಕನಿಷ್ಠ ಒಂದೇ ಒಂದು ಸ್ಥಾನವನ್ನೂ ಗೆಲ್ಲಲು ಸಾಧ್ಯವಾಗಿಲ್ಲ, ಖಾತೆ ತೆರೆಯಲು ವಿಫಲವಾಗಿದೆ. ಮುಂದಿನ ಮೂರು ಚುನಾವಣೆಗಳಲ್ಲೂ ಕಾಂಗ್ರೆಸ್ಗೆ ಇದೇ ಗತಿ ಒದಗಲಿದೆ, ಅಲ್ಲಿಯೂ ಖಾತೆ ತೆರೆಯಲು ಸಾಧ್ಯವಿಲ್ಲ. ಹೀಗಾಗಿ ಮತ್ತೆ ಪ್ರತಿಪಕ್ಷದಲ್ಲೇ ಕೂರಲು ನೀವು ಸಿದ್ಧರಾಗಿ ಎಂದು ಭವಿಷ್ಯ ನುಡಿದರು.
2027ರ ಪಂಜಾಬ್ ವಿಧಾನಸಭಾ ಚುನಾವಣೆಗೆ ರಾಜಕೀಯ ಚಟುವಟಿಕೆಗಳು ಗರಿಗೆದರುತ್ತಿರುವ ಹೊತ್ತಿನಲ್ಲೇ ಅಮಿತ್ ಶಾ ಅವರ ಈ ವಾಗ್ದಾಳಿ ಮಹತ್ವ ಪಡೆದುಕೊಂಡಿದೆ. ಪಂಜಾಬ್ನಲ್ಲಿ ಈ ಬಾರಿ ಯಾವುದೇ ಸಣ್ಣ ಮೈತ್ರಿಕೂಟದ ಪಾಲುದಾರನಾಗಿ ಉಳಿಯದೆ, ಸ್ವಂತ ಬಲದ ಮೇಲೆ ಪೂರ್ಣ ಪ್ರಮಾಣದ ಸರ್ಕಾರ ರಚಿಸುವ ಗುರಿಯನ್ನು ಬಿಜೆಪಿ ಹೊಂದಿದೆ ಎಂದು ಶಾ ಪ್ರತಿಪಾದಿಸಿದರು.
ರಾಜ್ಯದಲ್ಲಿನ ಮಾದಕ ವಸ್ತುಗಳ (ಡ್ರಗ್ಸ್) ಹಾವಳಿಯನ್ನು ಬಿಜೆಪಿ ತನ್ನ ಪ್ರಮುಖ ಚುನಾವಣಾ ವಿಷಯವನ್ನಾಗಿ ಮಾಡಿಕೊಂಡಿದ್ದು, 2029ರ ಡಿಸೆಂಬರ್ 31ರ ವೇಳೆಗೆ ಪಂಜಾಬ್ ಸೇರಿದಂತೆ ಇಡೀ ದೇಶವನ್ನು ಮಾದಕ ಮುಕ್ತವನ್ನಾಗಿಸುವ ಭರವಸೆಯನ್ನು ಶಾ ಪುನರುಚ್ಚರಿಸಿದರು.
ಆಮ್ ಆದ್ಮಿ ಪಕ್ಷ (ಎಎಪಿ) ಈಗಾಗಲೇ ತನ್ನ 40 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಪ್ರಕಟಿಸಿದ್ದು, ಪಂಜಾಬ್ ರಾಜಕೀಯ ಕಣ ರಂಗೇರಿದೆ. ಅಮಿತ್ ಶಾ ಅವರ ಈ ಭಾಷಣವು ಮುಂಬರುವ ದಿನಗಳಲ್ಲಿ ಕಾಂಗ್ರೆಸ್ ಮತ್ತು ಆಪ್ ಎರಡೂ ಪಕ್ಷಗಳ ವಿರುದ್ಧ ಬಿಜೆಪಿ ಆಕ್ರಮಣಕಾರಿ ಹೋರಾಟ ನಡೆಸಲಿದೆ ಎಂಬುದಕ್ಕೆ ಸ್ಪಷ್ಟ ಮುನ್ಸೂಚನೆ ನೀಡಿದೆ.
