ಚಾಮರಾಜನಗರ: ಸಿದ್ದರಾಮಯ್ಯ ವಿರುದ್ಧ ಸ್ಟಿಂಗ್ ಆಪರೇಷನ್ ಕುಮಾರಸ್ವಾಮಿಯೇ ಮಾಡಿಸಿರೋದು ಎಂದು ಸಚಿವ ಪುಟ್ಟರಂಗಶೆಟ್ಟಿ (Puttaranga Shetty) ಗಂಭೀರ ಆರೋಪ ಮಾಡಿದರು.
ನಗರದಲ್ಲಿ ಮಾತನಾಡಿದ ಅವರು, ಸ್ಟಿಂಗ್ ಆಪರೇಷನ್ ನೂರಕ್ಕೆ ನೂರು ಕುಮಾರಸ್ವಾಮಿಯೇ ಮಾಡಿಸಿರೋದು. ಈಗಾಗಲೇ ಮಾಹಿತಿ ಸಿಕ್ಕಿದೆ. ಮೊದಲಿನಿಂದಲೂ ಇಂತಹ ಕೆಲಸ ಮಾಡೋದು ಕುಮಾರಸ್ವಾಮಿ ಮಾತ್ರ. ಬೇರೆ ಯಾರು ಮಾಡಿಲ್ಲ. ಕುಮಾರಸ್ವಾಮಿಗೆ ಮೊದಲಿನಿಂದಲೂ ಇದೇ ಕೆಲಸ. ತನ್ನ ಹತ್ತಿರ ಪೆನ್ಡ್ರೈವ್ ಇದೆ ಅಂತ ಅವರೇ ಹೇಳ್ತಿದ್ದರು ಕುಮಾರಸ್ವಾಮಿಗೆ ಡಿಕೆಶಿ ಸಿಎಂ ಆಗಿರೋದು ಸಹಿಸಿಕೊಳ್ಳಲು ಆಗ್ತಿಲ್ಲ. ಪಕ್ಷದ ವಿರುದ್ಧ ಮಾತನಾಡಿದರು ಅಂತ ಕೃಪಾ ಆಳ್ವಾ ಅವರನ್ನು ಅಮಾನತು ಮಾಡಲಾಗಿದೆ. ಸ್ಟಿಂಗ್ನಲ್ಲಿ ಕೃಪಾ ಆಳ್ವಾ ಭಾಗಿಯಾಗಿದ್ದರಾ ಇಲ್ವಾ ಎಂಬ ಬಗ್ಗೆ ಮಾಹಿತಿ ಇಲ್ಲ ಎಂದು ತಿಳಿಸಿದರು.
ನಂದಿನಿ ಹಾಲು, ಮೊಸರು ದರ ಏರಿಕೆ ವಿಚಾರವಾಗಿ ಮಾತನಾಡಿ, ಒಂದು ರೂಪಾಯಿ ಹೊರತುಪಡಿಸಿ ರೈತರಿಗೆ ಪ್ರೋತ್ಸಾಹ ಧನ ಹೋಗುತ್ತದೆ. ನಿಗಮ ಹಾಗೂ ಫೆಡರೇಷನ್ಗೆ ಒಂದು ರೂಪಾಯಿ ಹೋಗುತ್ತದೆ. ಅವುಗಳು ನಷ್ಟದಲ್ಲಿವೆ. ಯುದ್ಧದ ಪರಿಣಾಮ ಪೆಟ್ರೋಲ್, ಡಿಸೇಲ್ ಸೇರಿ ಎಲ್ಲಾ ಬೆಲೆ ಏರಿಕೆಯಾಗಿದೆ. ರೈತರು ಕಷ್ಟದಲ್ಲಿದ್ದರು. ಇದೀಗಾ ಸರ್ಕಾರ ಒಳ್ಳೆಯದು ಮಾಡಿದ್ದಾರೆ ಅಂತಿದ್ದಾರೆ. ಎಲ್ಲದಕ್ಕೂ ಕೂಡ ವಿರೋಧ ಇರುತ್ತದೆ. ಪ್ರೋತ್ಸಾಹ ಧನ ಎಲ್ಲವನ್ನೂ ಸರ್ಕಾರ ಕೊಡಲು ಆಗುತ್ತದಾ? ಯಾವುದಕ್ಕೆ ಕೊಡಬೇಕು ಅಂತಾ ಯೋಚಿಸಿ ಕೊಡ್ತೀವಿ. ನೇಗಿಲ ಯೋಗಿ, ಬರ ಪರಿಹಾರ ಸರ್ಕಾರವೇ ಕೊಡ್ತಿದೆ. ಲೆಕ್ಕಾಚಾರ ಹಾಕಿ ಹಾಲು, ಮೊಸರಿನ ದರ ಏರಿಕೆ ಮಾಡಿದ್ದಾರೆ ಎಂದರು.
