ನವದೆಹಲಿ: ಕರ್ನಾಟಕಕ್ಕೆ ದೊಡ್ಡ ಮಟ್ಟದ ಹೂಡಿಕೆದಾರರು (Investors) ಬರುತ್ತಿಲ್ಲ. ಬೇರೆ ರಾಜ್ಯಗಳಿಗೆ ಹೂಡಿಕೆದಾರರು ಹೋಗುತ್ತಿದ್ದಾರೆ. ಹಾಗಾದರೆ ಕರ್ನಾಟಕಕ್ಕೆ ಹೂಡಿಕೆದಾರರನ್ನು ಕರೆತರುವಲ್ಲಿ ರಾಜ್ಯದ ನಿರುದ್ಯೋಗ ಸಚಿವರು ಏನು ಮಾಡಿದ್ದಾರೆ ಎಂದು ಗೃಹ ಸಚಿವ ಪ್ರಿಯಾಂಖ್ ಖರ್ಗೆ (Priyank Kharge) ವಿರುದ್ಧ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ (HD Kumaraswamy) ಕಿಡಿಕಾರಿದ್ದಾರೆ.
ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕುಮಾರಸ್ವಾಮಿ, ಕರ್ನಾಟಕದಲ್ಲಿ ಕೈಗಾರಿಕೆಗಳ ಸ್ಥಿತಿ, ಹೂಡಿಕೆ ಮತ್ತು ಉದ್ಯೋಗ ಸೃಷ್ಟಿ ವಿಚಾರವಾಗಿ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಗೃಹ ಸಚಿವರು ತಮ್ಮನ್ನು ನಿರುದ್ಯೋಗಿ ಸಚಿವ ಎಂದು ಕರೆದಿದ್ದಾರೆ. ಕರ್ನಾಟಕಕ್ಕೆ ಬಂಡವಾಳ ತಂದಿಲ್ಲ ಎಂದು ಟೀಕಿಸಿದ್ದಾರೆ. ಆದರೆ, ಕೇಂದ್ರ ಸರ್ಕಾರದ ಬೃಹತ್ ಕೈಗಾರಿಕಾ ಇಲಾಖೆಯ ಕಾರ್ಯವೈಖರಿ ಏನು ಎಂಬ ಮಾಹಿತಿಯೇ ಅವರಿಗೆ ಇಲ್ಲ ಎಂದು ತಿರುಗೇಟು ನೀಡಿದರು. ಇದನ್ನೂ ಓದಿ: ಕೇಂದ್ರೀಯ ಗೃಹಮಂತ್ರಿಯವರ ದಕ್ಷತಾ ಪದಕ 2026 – ರಾಜ್ಯದ ಏಳು ಅಧಿಕಾರಿಗಳು/ಸಿಬ್ಬಂದಿಗೆ ಗೌರವ
ಎಲೆಕ್ಟ್ರಿಕ್ ವಾಹನಗಳಿಗೆ ಉತ್ತೇಜನ ನೀಡಲು 2019ರಲ್ಲಿ ಫೇಮ್-1 ಮತ್ತು ಫೇಮ್-2 ಯೋಜನೆಗಳನ್ನು ಜಾರಿಗೆ ತರಲಾಗಿತ್ತು. ಇತ್ತೀಚೆಗೆ ಪಿಎಂ ಇ-ಡ್ರೈವ್ ಯೋಜನೆಯೂ ಜಾರಿಯಲ್ಲಿದೆ. ಎಲೆಕ್ಟ್ರಿಕ್ ವಾಹನಗಳ ಕಂಪನಿಗಳಿಗೆ ಸಬ್ಸಿಡಿ ನೀಡುವುದು ಮತ್ತು ಮಾಲಿನ್ಯ ನಿಯಂತ್ರಣಕ್ಕೆ ಉತ್ತೇಜನ ನೀಡುವುದು ನಮ್ಮ ಇಲಾಖೆಯ ಕೆಲಸ. ಕರ್ನಾಟಕದಲ್ಲಿ ಕಾರ್ಖಾನೆಗಳನ್ನು ಸ್ಥಾಪಿಸುವುದು ನಮ್ಮ ಇಲಾಖೆಯ ಕೆಲಸವಲ್ಲ ಎಂದು ಸ್ಪಷ್ಟಪಡಿಸಿದರು.
ಚೀನಾ ಭಾರತಕ್ಕೆ ಮ್ಯಾಗ್ನೆಟ್ ಪೂರೈಕೆ ಮಾಡುತ್ತಿಲ್ಲ. ಹೀಗಾಗಿ ದೇಶದಲ್ಲೇ ಮ್ಯಾಗ್ನೆಟ್ ಉತ್ಪಾದಿಸುವ ಉದ್ದೇಶದಿಂದ ನಮ್ಮ ಇಲಾಖೆಯಲ್ಲಿ ಹಲವು ಸಭೆಗಳನ್ನು ನಡೆಸಿ ಪ್ರಕ್ರಿಯೆ ಆರಂಭಿಸಲಾಗಿದೆ. ಆದರೆ, ಈ ವಿಚಾರದಲ್ಲಿ ಕರ್ನಾಟಕ ಆಸಕ್ತಿ ತೋರಿಸಿಲ್ಲ ಎಂದು ಆರೋಪಿಸಿದರು.
ನನ್ನಂತಹ ಐಟಿ-ಬಿಟಿ ಸಚಿವರು ಯಾರೂ ಇಲ್ಲ ಎಂದು ಅವರು ಅಂದುಕೊಂಡಿದ್ದಾರೆ. ಆದರೆ, ಎಂಜಿನಿಯರಿಂಗ್ ಪದವೀಧರರಿಗೆ ನಿಮ್ಮ ಇಲಾಖೆಯಿಂದ ಎಷ್ಟು ಉದ್ಯೋಗ ನೀಡಿದ್ದೀರಿ? ನಿಮ್ಮ ಸಾಧನೆ ಏನು? ಕರ್ನಾಟಕಕ್ಕೆ ಎಷ್ಟು ಹೂಡಿಕೆದಾರರನ್ನು ಕರೆತಂದಿದ್ದೀರಿ? ಬೇರೆ ಬೇರೆ ರಾಜ್ಯಗಳಲ್ಲಿ ಹೂಡಿಕೆ ಹೆಚ್ಚಾಗುತ್ತಿದೆ. ಆದರೆ, ಕರ್ನಾಟಕಕ್ಕೆ ದೊಡ್ಡ ಹೂಡಿಕೆದಾರರು ಬರುತ್ತಿಲ್ಲ. ಮ್ಯಾಗ್ನೆಟ್ ಉತ್ಪಾದನಾ ಕಂಪನಿಗಳು ಕರ್ನಾಟಕಕ್ಕೆ ಬಾರದೆ ಒಡಿಶಾ, ಆಂಧ್ರಪ್ರದೇಶ, ಗುಜರಾತ್ ಮತ್ತು ತಮಿಳುನಾಡಿಗೆ ಏಕೆ ಹೋಗುತ್ತಿವೆ ಎಂದು ಪ್ರಶ್ನಿಸಿದರು.
ಮುಖ್ಯಮಂತ್ರಿ ವಿಕಸಿತ ಕರ್ನಾಟಕ 2047 ಯೋಜನೆ ಆರಂಭಿಸಿರುವುದನ್ನು ಶ್ಲಾಘಿಸಿದ ಕುಮಾರಸ್ವಾಮಿ, ಐದು ಕರ್ನಾಟಕ ಎಂಬ ಹೆಸರಿನಲ್ಲಿ ಕೆಲವು ಯೋಜನೆಗಳನ್ನು ರೂಪಿಸಿದ್ದಾರೆ. ಆದರೆ ಸ್ಟಿಂಗ್ ಕರ್ನಾಟಕ ಎಂಬುದನ್ನು ಮರೆತಿದ್ದಾರೆ. ತಾವು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಒಂಬತ್ತು ಜಿಲ್ಲೆಗಳಲ್ಲಿ ಕೈಗಾರಿಕೆಗಳಿಗೆ ಪ್ರೋತ್ಸಾಹ ನೀಡಿದ್ದಾಗಿ ತಿಳಿಸಿದ ಅವರು, ಕಲಬುರಗಿಯಲ್ಲಿ ಸೋಲಾರ್ ಉತ್ಪಾದನೆಗೆ ಹಾಗೂ ಬೀದರ್ನಲ್ಲಿ ಕೃಷಿ ಉತ್ಪನ್ನಗಳ ಉತ್ಪಾದನೆಗೆ ಆದ್ಯತೆ ನೀಡಿದ್ದೆವು. ಈಗ ಸರ್ಕಾರ ಹಲವು ಯೋಜನೆಗಳ ಬಗ್ಗೆ ಮಾತನಾಡುತ್ತಿದೆ. ಆದರೆ, ಇವೆಲ್ಲವನ್ನೂ ಜಾರಿಗೆ ತರಲು ಹಣ ಎಲ್ಲಿದೆ ಎಂದು ಪ್ರಶ್ನಿಸಿದರು.
ಕೋಲಾರದಲ್ಲಿ ಹೋಂಡಾ ಫ್ಯಾಕ್ಟರಿ ಮುಚ್ಚುವ ಹಂತದಲ್ಲಿದೆ. ಕಾರ್ಖಾನೆಯನ್ನು ಉಳಿಸುವ ಬಗ್ಗೆ ನಾನು ಮಾತನಾಡಿದ್ದೇನೆ. ಆದರೆ, ನಿಮ್ಮ ಸರ್ಕಾರ ಬಂದಾಗ ಈ ಬಗ್ಗೆ ಯೋಚನೆ ಮಾಡೋಣ ಎಂದು ಹೇಳಿದ್ದಾರೆ. ಪ್ರಿಯಾಂಕ್ ಖರ್ಗೆ ಅವರೇ, ನೀವು ಏನು ಮಾಡುತ್ತಿದ್ದೀರಿ ಎಂದು ವಾಗ್ದಾಳಿ ನಡೆಸಿದರು.
ಇನ್ನು ಟನಲ್ ಬೋರಿಂಗ್ ಮಿಷನ್ ತಯಾರಿಸುವ ಹೊಸ ಯೋಜನೆಯನ್ನೂ ರೂಪಿಸಲಾಗುತ್ತಿದೆ. ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ ಈ ಅವಧಿಯಲ್ಲಿ ಸುಮಾರು 4,500ರಿಂದ 5,000 ಕೋಟಿ ರೂ. ಲಾಭ ಗಳಿಸುವ ಹಂತಕ್ಕೆ ಬಂದಿದೆ. ಈ ಹಿಂದೆ ಸುಮಾರು 1,000 ಕೋಟಿ ರೂ. ಆದಾಯವಿತ್ತು. ಇದು ನಿರುದ್ಯೋಗಿ ಸಚಿವ ಮಾಡುತ್ತಿರುವ ಕೆಲಸ. ಕರ್ನಾಟಕಕ್ಕೆ ಬಂದರೆ ಇಲ್ಲಿಗೇಕೆ ಬಂದಿರಿ ಎನ್ನುತ್ತಾರೆ. ದೆಹಲಿಗೆ ಹೋದರೆ ಅಲ್ಲೇನು ಕೆಲಸ ಎಂದು ಪ್ರಶ್ನಿಸುತ್ತಾರೆ. ಹೀಗಾಗಿ ಎಲ್ಲ ವಿಚಾರಗಳಲ್ಲೂ ಟೀಕೆ ಮಾಡಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇದೇ ವೇಳೆ ತಮ್ಮ ವಿರುದ್ಧ ನಡೆಯುತ್ತಿರುವ ತನಿಖೆ ವಿಚಾರವಾಗಿಯೂ ಪ್ರತಿಕ್ರಿಯಿಸಿದ ಅವರು, ನಮ್ಮ ಮನೆಯ ಮಾದರಿಯ ಸೆಟ್ ಹಾಕಿ ಶೂಟಿಂಗ್ ಮಾಡಿರಬೇಕು. ಸೆಟ್ ಹಾಕಿ ತನಿಖೆ ನಡೆಸಿರಬಹುದು. ಮಹಜರು ಮಾಡಿ ತನಿಖೆ ನಡೆಸಿರಬಹುದು. ಕುಮಾರಸ್ವಾಮಿ ಅವರನ್ನು ಹೇಗೆ ಬಂಧಿಸಬೇಕು ಎಂಬುದರ ಬಗ್ಗೆಯೂ ಚಿಂತನೆ ನಡೆಸಿರಬಹುದು ಎಂದು ವ್ಯಂಗ್ಯವಾಡಿದರು. ದೆಹಲಿಯಲ್ಲಿ ಈ ಹಿಂದೆ ಏನೆಲ್ಲ ಮಾತನಾಡಿದ್ದಾರೋ, ಆ ಎಲ್ಲ ವಿಚಾರಗಳ ಬಗ್ಗೆ ಮತ್ತೊಮ್ಮೆ ಮಾತನಾಡುತ್ತೇನೆ ಎಂದರು.
ಹೆಲಿಕಾಪ್ಟರ್ ದುರಂತದಲ್ಲಿ ಐವರು ಕನ್ನಡಿಗರು ಮೃತಪಟ್ಟಿರುವ ವಿಚಾರವಾಗಿಯೂ ಮಾತನಾಡಿದ ಅವರು, ಅಲ್ಲಿರುವ ಕನ್ನಡಿಗ ಅಧಿಕಾರಿಯೊಂದಿಗೆ ಮಾತನಾಡಿದ್ದೇನೆ. ಮೃತರ ಕುಟುಂಬದ ಒಬ್ಬ ಸದಸ್ಯರು ಅಲ್ಲಿಗೆ ಬರಲು ತಿಳಿಸಿದ್ದಾರೆ. ಮೃತದೇಹಗಳ ಗುರುತು ಪತ್ತೆಯಾದ ಬಳಿಕ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗುವುದು. ಮೃತರ ಕುಟುಂಬಗಳಿಗೆ ದುಃಖ ಭರಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಸಂತಾಪ ಸೂಚಿಸಿದರು.
ಇನ್ನು 2011ರ ಕೆಪಿಎಸ್ಸಿ ನೇಮಕಾತಿ ಅಕ್ರಮ ಆರೋಪಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ನಾನು ಯಾವುದೇ ತನಿಖೆಗೂ ಸಿದ್ಧನಿದ್ದೇನೆ. ಈ ವ್ಯವಸ್ಥೆಯನ್ನು ಹಾಳು ಮಾಡಿದವರು ಯಾರು ಎಂಬುದನ್ನು ಮೊದಲು ತಿಳಿದುಕೊಳ್ಳಬೇಕು. ಸುಮ್ಮನೆ ಗೊಂದಲ ಸೃಷ್ಟಿಸುವುದು ಬೇಡ. ಹೊಸದಾಗಿ ಪರೀಕ್ಷೆಯ ದಿನಾಂಕ ನಿಗದಿಯಾಗಿದೆ. ಆದರೆ, ಈ ಸಮಸ್ಯೆ ಬಗೆಹರಿಯುವವರೆಗೆ ಹೊಸ ಪರೀಕ್ಷೆ ನಡೆಸಬಾರದು ಎಂಬ ಅಭಿಪ್ರಾಯವೂ ಕೆಲವರಲ್ಲಿದೆ. ಹೀಗಾಗಿ ರಾಜ್ಯ ಸರ್ಕಾರ ಈ ವಿಚಾರವನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು. ಇದನ್ನೂ ಓದಿ:ರಾತ್ರಿ 8ರಿಂದ 10ರವರೆಗೆ ಬೆಂಗಳೂರಲ್ಲಿ ಪಟಾಕಿ ಸಿಡಿಸಲು ಅವಕಾಶ – ದೀಪಾವಳಿಗೆ ಟಫ್ ರೂಲ್ಸ್
