– ವಿಶ್ವದಲ್ಲೇ ಅತ್ಯಂತ ವೇಗದ ಬಡತನ ಇಳಿಕೆ
ನವದೆಹಲಿ: ಕಳೆದ ಹನ್ನೆರಡು ವರ್ಷಗಳಲ್ಲಿ ಭಾರತವು(India) ಬಡತನ ನಿರ್ಮೂಲನೆಯಲ್ಲಿ ಐತಿಹಾಸಿಕ ಸಾಧನೆ ಮಾಡಿದ್ದು, ಬರೋಬ್ಬರಿ 49.6 ಕೋಟಿ ಜನರನ್ನು ತೀವ್ರ ಬಡತನದ ರೇಖೆಯಿಂದ ಮೇಲೆತ್ತಿದೆ. ಇದರೊಂದಿಗೆ ದೇಶದಲ್ಲಿ ತೀವ್ರ ಬಡತನದ(Poverty) ಪ್ರಮಾಣವು ಶೇ. 27.1 ರಿಂದ ಕೇವಲ ಶೇ. 2.6ಕ್ಕೆ ಗಣನೀಯವಾಗಿ ಇಳಿಕೆಯಾಗಿದೆ ಎಂದು ವಿಶ್ವಬ್ಯಾಂಕ್ನ(World Bank) ನೂತನ ವರದಿ ತಿಳಿಸಿದೆ.
ವಿಶ್ವಬ್ಯಾಂಕ್ ಬಿಡುಗಡೆ ಮಾಡಿರುವ ‘ಪಾವರ್ಟಿ ಅಂಡ್ ಈಕ್ವಿಟಿ ಬ್ರೀಫ್’ ವರದಿಯಲ್ಲಿ ಈ ಮಹತ್ವದ ಬೆಳವಣಿಗೆಯನ್ನು “ವಿಶ್ವದಲ್ಲೇ ಅತ್ಯಂತ ವೇಗದ ಬಡತನ ಇಳಿಕೆಯ ಸಾಧನೆಗಳಲ್ಲಿ ಒಂದು” ಎಂದು ಮುಕ್ತಕಂಠದಿಂದ ಶ್ಲಾಘಿಸಿದೆ.
2011 ರಿಂದ 2023 ರ ನಡುವಿನ ಅವಧಿಯಲ್ಲಿ ತೀವ್ರ ಬಡತನ ಶೇ. 27.1 ರಿಂದ ಶೇ. 2.6 ಕ್ಕೆ ಕುಸಿದಿದೆ. ಇದೇ ವೇಳೆ, ದಿನಕ್ಕೆ 4.20 ಅಮೆರಿಕನ್ ಡಾಲರ್ ಆದಾಯ ಮಿತಿಯ (ಕೆಳ-ಮಧ್ಯಮ ಆದಾಯ ರೇಖೆ) ಕೆಳಗಿದ್ದ ಜನರ ಪ್ರಮಾಣವೂ ಶೇ. 57.7 ರಿಂದ ಶೇ. 16.1 ಕ್ಕೆ ಇಳಿಕೆಯಾಗಿದೆ.
ಗ್ರಾಹಕರ ಬಲವಾದ ಖರೀದಿ ಸಾಮರ್ಥ್ಯ ಮತ್ತು ಅನುಭೋಗದ ಬೆಳವಣಿಗೆ, ಉದ್ಯೋಗಾವಕಾಶಗಳ ಹೆಚ್ಚಳ,ವಿಶೇಷವಾಗಿ ಮಹಿಳಾ ಉದ್ಯೋಗಿಗಳ ಪ್ರಮಾಣ ವೃದ್ಧಿ, ಸರ್ಕಾರದ ಆಹಾರ ಸಬ್ಸಿಡಿ ಸೇರಿದಂತೆ ವಿಸ್ತೃತ ಸಮಾಜ ಕಲ್ಯಾಣ ಯೋಜನೆಗಳು ಈ ಪ್ರಗತಿಗೆ ಪ್ರಮುಖ ಕಾರಣಗಳಾಗಿವೆ.
ಕೇವಲ ಆದಾಯ ಮಾತ್ರವಲ್ಲದೆ ಶಿಕ್ಷಣ, ಆರೋಗ್ಯ ಮತ್ತು ಜೀವನಮಟ್ಟವನ್ನೊಳಗೊಂಡ ಬಹುಆಯಾಮದ ಬಡತನ ಸೂಚ್ಯಂಕದಲ್ಲೂ (MPI) ದೇಶ ಭಾರಿ ಸುಧಾರಣೆ ಕಂಡಿದ್ದು, 2005-06 ರಲ್ಲಿ ಶೇ. 53.8 ರಷ್ಟಿದ್ದ ಬಹುಆಯಾಮದ ಬಡತನವು ಇತ್ತೀಚಿನ ವರ್ಷಗಳಲ್ಲಿ ಶೇ. 15.5 ಕ್ಕೆ ಇಳಿಕೆಯಾಗಿದೆ.
ಭಾರತದಲ್ಲಿ ಬಡತನ ಪ್ರಮಾಣ ಇನ್ನಷ್ಟು ಇಳಿಕೆಯಾಗುವ ನಿರೀಕ್ಷೆಯಿದ್ದು, 2028ರ ವೇಳೆಗೆ ದಿನಕ್ಕೆ 4.20 ಡಾಲರ್ ಆದಾಯ ಮಿತಿಯ ಬಡತನ ಪ್ರಮಾಣವು ಶೇ. 12.1 ಕ್ಕೆ ತಗ್ಗಲಿದೆ ಎಂದು ಅಂದಾಜಿಸಲಾಗಿದೆ.
ದೇಶದ ಒಟ್ಟು ಬಡವರ ಪೈಕಿ ಶೇ. 57 ರಷ್ಟು ಮಂದಿ ಉತ್ತರ ಪ್ರದೇಶದಿಂದ ಹಿಡಿದು ಪಶ್ಚಿಮ ಬಂಗಾಳದವರೆಗಿನ ವಲಯದಲ್ಲೇ ಕೇಂದ್ರೀಕೃತರಾಗಿದ್ದಾರೆ. ಹೀಗಾಗಿ ಈ ರಾಜ್ಯಗಳಲ್ಲಿ ಗುಣಮಟ್ಟದ ಹಾಗೂ ಉತ್ಪಾದಕ ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದು ಮುಂದಿನ ದಿನಗಳಲ್ಲಿ ಅತ್ಯಂತ ನಿರ್ಣಾಯಕವಾಗಿದೆ.
2017 ರಿಂದ 2023 ರ ನಡುವೆ ದೇಶದಲ್ಲಿ ಉದ್ಯೋಗಸ್ಥರ ಸಂಖ್ಯೆ ಸುಮಾರು 13.4 ಕೋಟಿ ಹೆಚ್ಚಾಗಿದೆ. ಇದು ದುಡಿಯುವ ವಯೋಮಾನದ ಜನಸಂಖ್ಯೆಯ ಬೆಳವಣಿಗೆಗಿಂತ ದುಪ್ಪಟ್ಟಾಗಿದ್ದು, ಗ್ರಾಮೀಣ ಮಹಿಳೆಯರು ವೇತನ ಪಡೆಯುವ ಉದ್ಯೋಗಗಳಿಗೆ ಪ್ರವೇಶ ಪಡೆದಿರುವುದೇ ಇದಕ್ಕೆ ಪ್ರಮುಖ ಕಾರಣವಾಗಿದೆ.
ಗ್ರಾಮೀಣ ಭಾಗದಲ್ಲಿ ಮಹಿಳೆಯರ ಉದ್ಯೋಗ ಪ್ರಮಾಣ ಹೆಚ್ಚಾಗಿದ್ದರೂ, ಯುವಜನರಲ್ಲಿ ನಿರುದ್ಯೋಗ ಪ್ರಮಾಣ ಶೇ.14.6 ರಿಂದ ಶೇ. 15.9 ಕ್ಕೆ ಏರಿಕೆಯಾಗಿದೆ. ಜೊತೆಗೆ ನೈಜ ವೇತನ ಮಟ್ಟದಲ್ಲಿ ಹೆಚ್ಚಿನ ಏರಿಕೆಯಾಗದಿರುವುದು ಹಾಗೂ ಕಡಿಮೆ ಉತ್ಪಾದಕತೆಯ ವಲಯಗಳಲ್ಲೇ ಉದ್ಯೋಗಗಳು ಸೃಷ್ಟಿಯಾಗುತ್ತಿರುವುದು ಸವಾಲಾಗಿ ಉಳಿದಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
