ಢಾಕಾ: ಬಾಂಗ್ಲಾದೇಶ (Bangladesh) ವಾಯುಪಡೆಯ ಮಾಜಿ ಅಧಿಕಾರಿಯೊಬ್ಬರು ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಕೆ.ಎಂ.ತಹಸಿಫ್ ಸೌರಿ ಅವರ ಮೃತದೇಹವು ನಾಪತ್ತೆಯಾದ ಮರುದಿನವೇ ತುರಾಗ್ ನದಿಯಲ್ಲಿ ಪತ್ತೆಯಾಗಿದೆ. ಢಾಕಾದ ಉತ್ತರ್ಖಾನ್ ಪ್ರದೇಶದಲ್ಲಿರುವ ರಾಜಬಾರಿ ಘಾಟ್ ಬಳಿ, ರಾಷ್ಟ್ರೀಯ ತುರ್ತು ಸಹಾಯವಾಣಿಗೆ ಬಂದ ಕರೆಯ ಮೇರೆಗೆ ನದಿಯಲ್ಲಿ ಮೃತದೇಹವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
2024ರಲ್ಲಿ ಪದಚ್ಯುತಗೊಂಡಿದ್ದ ಪ್ರಧಾನಿ ಶೇಖ್ ಹಸೀನಾ ಅವರು ದೇಶ ತೊರೆಯುತ್ತಿರುವ ದೃಶ್ಯವಿದ್ದ ವೀಡಿಯೊವನ್ನು ಅಪ್ಲೋಡ್ ಮಾಡಿದ್ದ ಆರೋಪ ಇವರ ಮೇಲಿತ್ತು.
ತಹಸಿಫ್ನ ಸಾವಿನ ಘಟನೆಯು ಬಾಂಗ್ಲಾದೇಶದಲ್ಲಿ ಜನರ ಸುರಕ್ಷತೆಯ ಬಗ್ಗೆ ಕಳವಳವನ್ನು ಹುಟ್ಟುಹಾಕಿದೆ. ಮಾಜಿ ಪ್ರಧಾನ ಮಂತ್ರಿಯೊಬ್ಬರಿಗೆ ಸಂಬಂಧಿಸಿದ ವೀಡಿಯೊವೊಂದನ್ನು ಪೋಸ್ಟ್ ಮಾಡಿದಾಗಿನಿಂದ ತಹಸಿಫ್ಗೆ ಕಿರುಕುಳ ನೀಡಲಾಗುತ್ತಿತ್ತು. ಆ ಕಾರಣಕ್ಕಾಗಿಯೇ ಅವರನ್ನು ಕೊಲೆ ಮಾಡಲಾಗಿದೆ ಎಂದು ಕುಟುಂಬವು ಆರೋಪಿಸಿದೆ.
2024ರ ಆ.5 ರಂದು ಶೇಖ್ ಹಸೀನಾ ಅವರು ಮಿಲಿಟರಿ ಹೆಲಿಕಾಪ್ಟರ್ನಲ್ಲಿ ಬಾಂಗ್ಲಾದೇಶದಿಂದ ಪಲಾಯನ ಮಾಡುತ್ತಿದ್ದ ದೃಶ್ಯವನ್ನು ತಹಸಿಫ್ ಎಂದು ನಂಬಲಾಗಿದೆ. ಆದರೆ, ಅವನು ಕೇವಲ ಒಬ್ಬ ಸಾಮಾನ್ಯ ನಾಗರಿಕನಾಗಿ ಆ ವೀಡಿಯೊ ಪೋಸ್ಟ್ ಮಾಡಿದ್ದ ಅಷ್ಟೇ ಎಂದು ಕುಟುಂಬದವರು ಹೇಳಿದ್ದಾರೆ.
