ನವದೆಹಲಿ: ರಾಜಧಾನಿಯಲ್ಲಿ ತೀವ್ರಗೊಳ್ಳುತ್ತಿರುವ ವಾಯು ಮಾಲಿನ್ಯ (Delhi Air Pulsion) ಮತ್ತು ಪಟಾಕಿ ಬಳಕೆ ನಿಯಂತ್ರಣದ ಕುರಿತಾದ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಡೆಸಿತು. ವಿಚಾರಣೆ ವೇಳೆ, ಪಟಾಕಿಗಳ ಮೇಲೆ ಸಂಪೂರ್ಣ ನಿಷೇಧ ಹೇರುವ ಬದಲು, ಜಾಗೃತಿ ಮೂಡಿಸಲು ಸ್ಟಾರ್ ಕ್ರಿಕೆಟರ್ ವಿರಾಟ್ ಕೊಹ್ಲಿ ಅವರಂತಹ ದೇಶದ ಪ್ರಭಾವಿ ವ್ಯಕ್ತಿಗಳ ನೆರವು ಪಡೆಯುವುದು ಸೂಕ್ತ ಎಂದು ಸುಪ್ರೀಂ ಕೋರ್ಟ್ ಸೂಚಿಸಿದೆ.
ದೀಪಾವಳಿಯಂತಹ ಹಬ್ಬದ ಸಂದರ್ಭದಲ್ಲಿ ಸಾರ್ವಜನಿಕರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವುದು ಸೂಕ್ತವಲ್ಲ ಎಂದು ತಿಳಿಸಿರುವ ನ್ಯಾಯಪೀಠ, ಹಬ್ಬ ಸಕಾರಾತ್ಮಕ ವಾತಾವರಣವನ್ನು ಸೃಷ್ಟಿಸುವುದರಿಂದ ಮಾಲಿನ್ಯ ನಿಯಂತ್ರಣದ ಜೊತೆಗೆ ಹಬ್ಬದ ಆಚರಣೆಯಗೂ ಪ್ರಾಮುಖ್ಯತೆ ನೀಡಬೇಕು ಎಂದಿದೆ. ಜೊತೆಗೆ ಮಾಲಿನ್ಯ ತಡೆಗಟ್ಟಲು ಪ್ರಸ್ತುತ ಚಾಲ್ತಿಯಲ್ಲಿರುವ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶಿಸಿದೆ.
ವಿಶೇಷವಾಗಿ ದೀಪಾವಳಿ ಹಬ್ಬದ ಆಸುಪಾಸಿನ ಎರಡು ದಿನಗಳಲ್ಲಿ ಮಾಲಿನ್ಯ ಮಟ್ಟವು ಅಪಾಯಕಾರಿ ಹಂತ ತಲುಪದಂತೆ ತಡೆಯಲು ಆಡಳಿತ ವರ್ಗವು ಹೆಚ್ಚಿನ ಜಾಗರೂಕತೆ ವಹಿಸಬೇಕು ಎಂದು ಸೂಚಿಸಿದೆ.
ಸಾರ್ವಜನಿಕರ ಹವ್ಯಾಸ ಹಾಗೂ ಅವರ ಮನಸ್ಥಿತಿಯನ್ನು ರಾತ್ರೋರಾತ್ರಿ ಬದಲಾಯಿಸಲು ಸಾಧ್ಯವಿಲ್ಲ, ಅದಕ್ಕೆ ನಿರಂತರ ಪ್ರಯತ್ನದ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ. ಈ ನಿಟ್ಟಿನಲ್ಲಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಸ್ಟಾರ್ ಕ್ರಿಕೆಟರ್ ವಿರಾಟ್ ಕೊಹ್ಲಿ ಅವರಂತಹ ದೇಶದ ಪ್ರಭಾವಿ ವ್ಯಕ್ತಿಗಳ ನೆರವನ್ನು ಏಕೆ ಪಡೆದುಕೊಳ್ಳುತ್ತಿಲ್ಲ ಎಂದು ದೆಹಲಿ ಸರ್ಕಾರವನ್ನು ನ್ಯಾಯಾಲಯ ಪ್ರಶ್ನಿಸಿದೆ.
ಸಾರ್ವಜನಿಕರು ಗೌರವಿಸುವ ವ್ಯಕ್ತಿಗಳು ಸಂದೇಶ ನೀಡಿದಾಗ ಅದು ಜನರ ನಡವಳಿಕೆಯ ಮೇಲೆ ಹೆಚ್ಚಿನ ಪ್ರಭಾವ ಬೀರುತ್ತದೆ ಎಂದು ನ್ಯಾಯಪೀಠ ಹೇಳಿದೆ. ಇದೇ ವೇಳೆ, ಅಪಾಯಕಾರಿ ಮಾಲಿನ್ಯದಿಂದಾಗಿ ಮಕ್ಕಳು, ವೃದ್ಧರು ಹಾಗೂ ಅಂಗವಿಕಲರು ಎದುರಿಸುತ್ತಿರುವ ಆರೋಗ್ಯ ಸಮಸ್ಯೆಗಳ ಬಗ್ಗೆ ಕೋರ್ಟ್ ಕಳವಳ ವ್ಯಕ್ತಪಡಿಸಿದೆ.ಇದನ್ನೂ ಓದಿ: ನವೆಂಬರ್ ಮೊದಲ ವಾರದಲ್ಲಿ ಬಸ್ ಪ್ರಯಾಣ ದರ ಏರಿಕೆಗೆ ನಿರ್ಧಾರ: ಬೈರತಿ ಸುರೇಶ್
ಕೇವಲ ನಿರ್ಬಂಧಗಳನ್ನು ವಿಧಿಸುವುದರಿಂದಲೇ ಮಾಲಿನ್ಯ ಮುಕ್ತ ವಾತಾವರಣ ನಿರ್ಮಿಸಲು ಸಾಧ್ಯವಿಲ್ಲ. ಅಧಿಕಾರಿಗಳು ಗ್ರೌಂಡ್ ಲೆವೆಲ್ನಲ್ಲಿ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವುದರ ಜೊತೆಗೆ, ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದಾಗ ಮಾತ್ರ ದೀರ್ಘಾವಧಿಯ ಪರಿಹಾರ ಸಾಧ್ಯ ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.ಇದನ್ನೂ ಓದಿ: ಬಳ್ಳಾರಿ | ಎರಡು ತಿಂಗಳ ಮಗುವಿನ ಹೊಟ್ಟೆಯೊಳಗೆ ಭ್ರೂಣ ಪತ್ತೆ
