ಬೆಂಗಳೂರು: ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ(Soujanya Rape and Murder Case) ವಿಶೇಷ ತನಿಖಾ ತಂಡದ (SIT) ಮುಖ್ಯಸ್ಥ ಸ್ಥಾನದಿಂದ ತಮ್ಮನ್ನು ಮುಕ್ತಗೊಳಿಸುವಂತೆ ಹಿರಿಯ ಐಪಿಎಸ್ ಅಧಿಕಾರಿ, ಐಜಿಪಿ ಶಶಿಕುಮಾರ್(Shashi Kumar) ಅವರು ರಾಜ್ಯ ಪೊಲೀಸ್ ಮಹಾನಿರ್ದೇಶಕ (ಡಿಜಿ-ಐಜಿಪಿ) ಎಂ.ಎ. ಸಲೀಂ ಅವರಿಗೆ ಲಿಖಿತ ಮನವಿ ಸಲ್ಲಿಸಿದ್ದಾರೆ.
ಸೌಜನ್ಯ ಸಾವಿಗೆ ನ್ಯಾಯ ಕೋರಿ ಬೀದಿಗಿಳಿದಿರುವ ಸೌಜನ್ಯ ಪರ ಹೋರಾಟಗಾರರು ಹಾಗೂ ಕುಟುಂಬಸ್ಥರು ಎಸ್ಐಟಿ ನೇತೃತ್ವ ವಹಿಸಿರುವ ಐಜಿಪಿ ಶಶಿಕುಮಾರ್ ಅವರ ವಿರುದ್ಧ ಗಂಭೀರ ಆಕ್ಷೇಪ ವ್ಯಕ್ತಪಡಿಸಿದ್ದರು.
ಶಶಿಕುಮಾರ್ ಈ ಹಿಂದೆ ಮಂಗಳೂರು ಕಮಿಷನರ್ ಆಗಿ ಕೆಲಸ ಮಾಡಿದ್ದರು. ಈ ವೇಳೆ ಧರ್ಮಸ್ಥಳದ ಜೊತೆಗೆ ಶಶಿಕುಮಾರ್ ಅವರಿಗೆ ಸಾಕಷ್ಟು ಒಡನಾಟ ಇತ್ತು. ಈ ವಿಚಾರ ಇಟ್ಟುಕೊಂಡು ಸೌಜನ್ಯ ಪರ ಹೋರಾಟಗಾರರು ಶಶಿಕುಮಾರ್ ನೇಮಕಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಈ ತನಿಖೆಯಿಂದ ನ್ಯಾಯ ಸಿಗುವ ಬಗ್ಗೆ ಅಪಸ್ವರ ಎತ್ತಿದ್ದ ಹೋರಾಟಗಾರರು, ಅವರ ಕಾರ್ಯವೈಖರಿಯ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು.
ಈ ವಿವಾದಗಳು ತನಿಖೆಯ ಪಾರದರ್ಶಕತೆಯ ಮೇಲೆ ಪರಿಣಾಮ ಬೀರಬಾರದು ಎಂಬ ಉದ್ದೇಶದಿಂದ, ಶಶಿಕುಮಾರ್ ಅವರೇ ಸ್ವಯಂಪ್ರೇರಿತರಾಗಿ ಪ್ರಕರಣದ ತನಿಖಾ ಹೊಣೆಯಿಂದ ತಮ್ಮನ್ನು ಕೈಬಿಡುವಂತೆ ಡಿಜಿಪಿಯವರಿಗೆ ವಿನಂತಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಕರ್ನಾಟಕ ಸರ್ಕಾರಕ್ಕೆ ಸುಪ್ರೀಂ ಶಾಕ್ – 362 ಗೆಜೆಟೆಡ್ ಪ್ರೊಬೇಷನರಿ ನೇಮಕಾತಿ ರಕ್ಷಿಸಿದ್ದ ಕಾಯ್ದೆಯೇ ರದ್ದು
ತನಿಖೆಯನ್ನು ಅತ್ಯಂತ ನಿಷ್ಪಕ್ಷಪಾತವಾಗಿ ಹಾಗೂ ಚುರುಕಾಗಿ ಮುನ್ನಡೆಸಬಲ್ಲ ದಕ್ಷ ಅಧಿಕಾರಿಗೆ ಈ ಮಹತ್ವದ ಹೊಣೆಗಾರಿಕೆಯನ್ನು ವಹಿಸಲು ಸರ್ಕಾರ ಗಂಭೀರ ಚಿಂತನೆ ನಡೆಸುತ್ತಿದ್ದು, ಶೀಘ್ರದಲ್ಲೇ ಅಧಿಕೃತ ಆದೇಶ ಹೊರಬೀಳುವ ಸಾಧ್ಯತೆಯಿದೆ. ಐಜಿಪಿಗಳಾದ ಲಾಭೂರಾಮ್, ಚೇತನ್ ಸಿಂಗ್ ರಾಥೋಡ್, ಡಾ. ಬೋರಲಿಂಗಯ್ಯ ಪೈಕಿ ಒಬ್ಬರಿಗೆ ಮುಖ್ಯಸ್ಥ ಸ್ಥಾನ ಸಿಗುವ ಸಾಧ್ಯತೆಯಿದೆ.
