ಝಗಮಗಿಸುವ ವೇದಿಕೆ, ವರ್ಣರಂಜಿತ ನೃತ್ಯಗಳ ಮಧ್ಯೆ ಉಪೇಂದ್ರ, ರಮೇಶ್ ಅರವಿಂದ್, ಹಂಸಲೇಖ, ಸುಧಾರಾಣಿ, ವಿಜಯ ಪ್ರಕಾಶ್, ಯೋಗರಾಜ್ ಭಟ್, ಡಿಜಿಪಿ ದಯಾನಂದ್ ಬಿ., ಅಯ್ಯೋ ಶ್ರದ್ಧಾ ಸೇರಿದಂತೆ ಕರುನಾಡಿನ ವಿವಿಧ ಕ್ಷೇತ್ರಗಳ ಸಾಧಕರನ್ನು ಗೌರವಿಸಿದ ʻಉದಯ ಕನ್ನಡಿಗ-2026ʼ (Udaya Kannadiga Award) ಪುರಸ್ಕಾರ ಇದೇ ಶನಿವಾರ ಮತ್ತು ಭಾನುವಾರ ಸಂಜೆ 6 ಗಂಟೆಗೆ ಸನ್ ಉದಯದಲ್ಲಿ ಪ್ರಸಾರವಾಗಲಿದೆ. ಕಾಮನ್ ವೆಲ್ತ್ ಗೇಮ್ಸ್, ಪ್ಯಾರಾಲಂಪಿಕ್ ಪದಕ ವಿಜೇತೆ ಕೆ.ಎಸ್.ಶಿಲ್ಪಾ, ಅನಾಥ ಶವಸಂಸ್ಕಾರ ಮಾಡುವ ಜುಬೇದಾ, ರಾಮೇಶ್ವರಂ ಕೆಫೆಯ ರಾಘವೇಂದ್ರ ರಾವ್-ದಿವ್ಯಾ, ನಿರ್ಮಾಪಕ ರಾಕ್ಲೈನ್ ವೆಂಕಟೇಶ್, ಪರಿಸರವಾದಿ ಸದಾಶಿವ ಹೈದ್ರಾ, ಪಾರ್ಶ್ವವಾಯು ಚಿಕಿತ್ಸಕ ವೈದ್ಯ ಹನುಮಂತ ಬೊಮ್ಮು ಗೌಡ ʻಉದಯ ಕನ್ನಡಿಗʼ ಪುರಸ್ಕಾರ ಸ್ವೀಕರಿಸಿದ ಇತರ ಸಾಧಕರು.
ದತ್ತಣ್ಣ, ಅದಿತಿ ಪ್ರಭುದೇವ, ನಾಗೇಂದ್ರ ಪ್ರಸಾದ್, ಲಹರಿ ವೇಲು, ವಿನಯ್ ಗುರೂಜಿ ಮುಂತಾದ ಮಹನೀಯರು ಸಾಧಕರಿಗೆ ʻಉದಯ ಕನ್ನಡಿಗʼ ಟ್ರೋಫಿ ನೀಡಿ ಗೌರವಿಸಿದರು. ಪುರಸ್ಕಾರ ಸ್ವೀಕರಿಸಿದ ನಟ, ನಿರ್ದೇಶಕ ಉಪೇಂದ್ರ ಮಾತನಾಡಿ, 90 ವರ್ಷ ದಾಟಿದರೂ ನಿರ್ದೇಶನ ಮಾಡುತ್ತಲೇ ಇರುವ ಹುಮ್ಮಸ್ಸನ್ನು ʻಉದಯ ಕನ್ನಡಿಗʼ ಪುರಸ್ಕಾರ ನೀಡಿದೆ ಎಂದರು. ನಟ ರಮೇಶ್ ಅರವಿಂದ್ ʻಉದಯ ಕನ್ನಡಿಗʼ ಪುರಸ್ಕಾರ ಕನ್ನಡಿಗ, ಕನ್ನಡತನವನ್ನು ಹೆಮ್ಮೆಯಿಂದ ಎತ್ತಿ ಹಿಡಿಯತ್ತದೆ ಎಂದು ಹೇಳಿದರೆ ಅಭಿನೇತ್ರಿ ಸುಧಾರಾಣಿ, ʻಉದಯ ನನ್ನ ಸೀರಿಯಲ್ ತವರುಮನೆʼ ಎಂದು ಮೆಲುಕು ಹಾಕಿದರು. ನಿರ್ದೇಶಕ ಯೋಗರಾಜ ಭಟ್ – ಎಲ್ಲೋ ಇರುವ ಸಾಧಕರನ್ನು ಗುರುತಿಸೋದು ಅವರಲ್ಲಿ ಚೈತನ್ಯ ತುಂಬುತ್ತದೆ ಎಂದರೆ, ಐಜಿಪಿ ದಯಾನಂದ್ ಬಿ. – ಎಲೆಮರೆಯ ಕಾಯಿಯಂತಿರುವ ಸಾಧಕರನ್ನು ಗುರುತಿಸುತ್ತಿರುವ ಕಾರ್ಯ ಶ್ಲಾಘನೀಯ ಎಂದರು. ಗಾಯಕ ವಿಜಯ ಪ್ರಕಾಶ್ ಉದಯ ಟಿವಿಯೊಂದಿಗಿನ ಬಾಲ್ಯದ ನಂಟು ಹಂಚಿಕೊಂಡರು.
ರಮೇಶ್ ಅರವಿಂದ್, ಸುಧಾರಾಣಿ ʻಕಾಡಿಸುವ ಹುಡುಗಿಯರ ಎಂದು ಪ್ರೀತಿಸಬಾರದುʼ ಹಾಡಿಗೆ ಹೆಜ್ಜೆ ಹಾಕಿ ಸಂಭ್ರಮಿಸಿದರು. ನಿರೂಪಕಿ ಅಂಕಿತಾ ಅಮರ್, ಸನ್ ಉದಯ ತಾರೆಯರಾದ ʻಶಾಂತಿ ನಿವಾಸʼದ ನಿತ್ಯಾರಾಮ್, ʻಗೆಳತಿ ಗಾಯತ್ರಿʼಯ ವೈಷ್ಣವಿ, ʻಭಾಗ್ಯವಂತರುʼ ನಾಯಕಿ ತನ್ವಿ ರಾವ್, ʻಮೂಗುತಿ ಮಲ್ಲಿʼ ನಾಯಕ ಚಂದನ್ ಮುಂತಾದವರ ನೃತ್ಯಸಂಭ್ರಮ ಕಾರ್ಯಕ್ರಮಕ್ಕೆ ಹೊಸ ರಂಗು ನೀಡಿತು. ಕಲೆ, ಸಾಹಿತ್ಯ, ಶಿಕ್ಷಣ, ಮಾಧ್ಯಮ, ಉದ್ಯಮ, ಸಮಾಜ ಸೇವೆ ಮತ್ತಿತರ ಕ್ಷೇತ್ರಗಳಲ್ಲಿ ಕರುನಾಡಿನ ಸಾಧಕರನ್ನು ಗುರುತಿಸಿ ಗೌರವಿಸುವ ಪುಟ್ಟ ಪ್ರಯತ್ನ ವಾಹಿನಿಯದಾಗಿದೆ. ಸನ್ ಉದಯ ಬಳಗದಿಂದ ಕನ್ನಡಿಗರಿಗೆ ಕೃತಜ್ಞತೆಯ ಸಂಕೇತ ʻಉದಯ ಕನ್ನಡಿಗ-2026ʼ ಪುರಸ್ಕಾರ. ʻಉದಯ ಕನ್ನಡಿಗʼ ಪುರಸ್ಕಾರ ಸಮಾರಂಭ ಇದೇ ಶನಿವಾರ ಮತ್ತು ಭಾನುವಾರ ಸಂಜೆ 6 ಗಂಟೆಗೆ ಸನ್ ಉದಯದಲ್ಲಿ ಪ್ರಸಾರವಾಗಲಿದೆ.
