ನವದೆಹಲಿ: ಚುನಾವಣಾ ಅಕ್ರಮ ಹಾಗೂ ಮತಗಳ ಕಳ್ಳತನ ಆರೋಪಗಳನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ನೇತೃತ್ವದ ಇಂಡಿ(INDIA) ಮೈತ್ರಿಕೂಟ ನವೆಂಬರ್ 1ರಂದು ನವದೆಹಲಿಯ ಐತಿಹಾಸಿಕ ರಾಮಲೀಲಾ ಮೈದಾನದಲ್ಲಿ(Ramalila Maidana) ಆಯೋಜಿಸಿರುವ ಬೃಹತ್ ಪ್ರತಿಭಟನೆಗೆ ದೆಹಲಿ ಪೊಲೀಸರು (Delhi Police) ಹಲವು ಷರತ್ತು ವಿಧಿಸಿ ನಿರಾಕ್ಷೇಪಣಾ ಪತ್ರ (NOC) ನೀಡಿದ್ದಾರೆ.
ಚುನಾವಣಾ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುವುದು ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ವಿರೋಧ ಪಕ್ಷಗಳು ಈ ಪ್ರತಿಭಟನಾ ಸಮಾವೇಶ ಹಮ್ಮಿಕೊಂಡಿವೆ. ಈ ರ್ಯಾಲಿಗೆ ದೇಶಾದ್ಯಂತ ಕಾರ್ಯಕರ್ತರನ್ನು ಒಗ್ಗೂಡಿಸಿ ಬರೋಬ್ಬರಿ 10 ಲಕ್ಷ ಜನರನ್ನು ಸೇರಿಸುವ ಗುರಿಯನ್ನು ಕಾಂಗ್ರೆಸ್ ಹಾಕಿಕೊಂಡಿದೆ.
ಪೊಲೀಸರ ಷರತ್ತು ಏನು?
ನವೆಂಬರ್ 1ರಂದು ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ಮಾತ್ರ ಸಮಾವೇಶಕ್ಕೆ ಅವಕಾಶ ನೀಡಲಾಗಿದೆ. ಯಾವುದೇ ಕಾರಣಕ್ಕೂ ಸಂಜೆ 5 ಗಂಟೆಯ ಬಳಿಕ ಕಾರ್ಯಕ್ರಮ ಮುಂದುವರಿಸುವಂತಿಲ್ಲ ಮತ್ತು ನಿಗದಿತ ಸಮಯದ ನಂತರ ಜನರು ಸ್ಥಳದಿಂದ ತೆರಳಬೇಕು
ರ್ಯಾಲಿಗೂ ಮುನ್ನವಾಗಲಿ ಅಥವಾ ಮುಗಿದ ನಂತರವಾಗಲಿ ಕಾರ್ಯಕರ್ತರು ರಾಮಲೀಲಾ ಮೈದಾನದಲ್ಲಿ ರಾತ್ರಿ ತಂಗಲು ಅವಕಾಶವಿಲ್ಲ. ಇದನ್ನೂ ಓದಿ: 10 ಸಾವಿರ ಕೋಟಿ ನಷ್ಟ, 20 ಲಕ್ಷ ವ್ಯಾಪಾರಿಗಳಿಗೆ ಸಂಕಷ್ಟ – ದೆಹಲಿ ಪ್ರತಿಭಟನೆ ಮುಂದೂಡುವಂತೆ ರಾಗಾಗೆ ಮತ್ತೊಂದು ಮನವಿ
ಪ್ರವೇಶ ಮತ್ತು ನಿರ್ಗಮನ ದ್ವಾರಗಳು, ಮುಖ್ಯ ವೇದಿಕೆ, ಮೈದಾನದ ಸುತ್ತಮುತ್ತಲಿನ ಪ್ರದೇಶಗಳು ಹಾಗೂ ಆಸನಗಳ ಬಳಿ ಹೈ-ಡೆಫಿನಿಷನ್ (HD) ಕ್ಯಾಮೆರಾಗಳನ್ನು ಅಳವಡಿಸಬೇಕು. ಕನಿಷ್ಠ 5 ಪರದೆಗಳನ್ನು ಹೊಂದಿರುವ ಪ್ರತ್ಯೇಕ ಸಿಸಿಟಿವಿ ಕಂಟ್ರೋಲ್ ರೂಮ್ ಹಾಗೂ ರೆಕಾರ್ಡಿಂಗ್ ವ್ಯವಸ್ಥೆ ಕಡ್ಡಾಯ.
ಕುಡಿಯುವ ನೀರಿನ ಟ್ಯಾಂಕರ್ಗಳು ಮತ್ತು ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯ ವ್ಯವಸ್ಥೆ ಕಲ್ಪಿಸಬೇಕು. ಜನದಟ್ಟಣೆ ನಿರ್ವಹಿಸಲು ನಿಯೋಜಿಸಲಾಗುವ ಸ್ವಯಂಸೇವಕರು ಗುರುತಿನ ಬ್ಯಾಡ್ಜ್ ಅಥವಾ ಒಂದೇ ರೀತಿಯ ಸಮವಸ್ತ್ರ ಧರಿಸಿರಬೇಕು.
ಸಂಚಾರ ಪೊಲೀಸರು ಗೊತ್ತುಪಡಿಸಿದ ಸ್ಥಳಗಳಲ್ಲೇ ವಾಹನಗಳನ್ನು ಪಾರ್ಕ್ ಮಾಡಬೇಕು. ರಾಮಲೀಲಾ ಮೈದಾನ ಹೊರತುಪಡಿಸಿ ನಗರದ ಇನ್ಯಾವುದೇ ಕಡೆ ಮೆರವಣಿಗೆ ನಡೆಸುವಂತಿಲ್ಲ.
ಪ್ರತಿಭಟನಾ ಸಭೆಯ ಸಿದ್ಧತೆಗಳ ಕುರಿತು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರು ಮಂಗಳವಾರ ಇಂದಿರಾ ಭವನದಲ್ಲಿ ಪಕ್ಷದ ವಿವಿಧ ಘಟಕಗಳ ಮುಖ್ಯಸ್ಥರು ಹಾಗೂ ದೆಹಲಿ ಪ್ರದೇಶ ಕಾಂಗ್ರೆಸ್ ಪದಾಧಿಕಾರಿಗಳೊಂದಿಗೆ ಸಭೆ ನಡೆಸಿ ಚರ್ಚಿಸಿದರು. ಸಭೆಯಲ್ಲಿ ಎಐಸಿಸಿ ಖಜಾಂಚಿ ಅಜಯ್ ಮಾಕನ್ ಉಪಸ್ಥಿತರಿದ್ದರು.
