ಬೆಂಗಳೂರು: ಕರ್ನಾಟಕ ವಿಧಾನ ಪರಿಷತ್ತಿನ(Karnataka Legislative Council) ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣಾ ಫಲಿತಾಂಶ ಹೊರಬಿದ್ದಿದ್ದು, ಬಿಜೆಪಿ ಅಭ್ಯರ್ಥಿ ಕೆ.ಎಂ. ಸುರೇಶ್(KM Suresh) ಭರ್ಜರಿ ಜಯಭೇರಿ ಬಾರಿಸಿದ್ದಾರೆ.
ತೀವ್ರ ಕುತೂಹಲ ಕೆರಳಿಸಿದ್ದ ಈ ಹಣಾಹಣಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶಶಿ ಹುಲಿಕುಂಟೆ(Shashi Hulikunte) ಅವರನ್ನು ಬರೋಬ್ಬರಿ 23,098 ಮತಗಳ ಬೃಹತ್ ಅಂತರದಿಂದ ಪರಾಭವಗೊಳಿಸಿದರು. ಕೆ.ಎಂ. ಸುರೇಶ್ 66,020 ಮತ ಪಡೆದರೆ ಶಶಿ ಹುಲಿಕುಂಟೆ ಅವರಿಗೆ 42,922 ಮತಗಳು ಬಿದ್ದವು. 20,076 ಮತಗಳನ್ನು ತಿರಸ್ಕೃತಗೊಳಿಸಲಾಗಿದೆ. ಇದನ್ನೂ ಓದಿ: ಪಶ್ಚಿಮ ಪದವೀಧರ ಕ್ಷೇತ್ರದಲ್ಲಿ ಬಿಜೆಪಿಯ ಎಸ್.ವಿ. ಸಂಕನೂರಗೆ ಭರ್ಜರಿ ಗೆಲುವು; 3ನೇ ಬಾರಿಗೆ ಪ್ರವೇಶ
ಬೆಂಗಳೂರಿನ ಸರ್ಕಾರಿ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ನಡೆದ ಮತ ಎಣಿಕೆಯ ಆರಂಭಿಕ ಸುತ್ತುಗಳಿಂದಲೇ ನಿರಂತರ ಮುನ್ನಡೆ ಕಾಯ್ದುಕೊಂಡಿದ್ದ ಕೆ.ಎಂ. ಸುರೇಶ್ ಅವರು ಅಂತಿಮವಾಗಿ ಸ್ಪಷ್ಟ ಬಹುಮತದೊಂದಿಗೆ ವಿಜಯಶಾಲಿಯಾದರು. ಈ ಬಾರಿಯ ಚುನಾವಣೆಯಲ್ಲಿ ಬರೋಬ್ಬರಿ 20,076 ಮತಗಳು ಅಸಿಂಧುಗೊಂಡಿರುವುದು ಗಮನಾರ್ಹವಾಗಿದೆ. ಎನ್ಡಿಎ ಅಭ್ಯರ್ಥಿಯ ಗೆಲುವು ಅಧಿಕೃತವಾಗುತ್ತಿದ್ದಂತೆ ಬಿಜೆಪಿ ಹಾಗೂ ಮೈತ್ರಿ ಪಕ್ಷದ ಕಾರ್ಯಕರ್ತರು ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು. ಇದನ್ನೂ ಓದಿ: MLC Elections Results: ಈಶಾನ್ಯ ಶಿಕ್ಷಕರ ಕ್ಷೇತ್ರದಲ್ಲಿ ಬಿಜೆಪಿಯ ಶಶೀಲ್ ನಮೋಶಿ ಜಯಭೇರಿ
ನೆನ್ನೆ ಪ್ರಾರಂಭವಾದ ಒಟ್ಟು 10 ಸುತ್ತುಗಳ ಮತ ಎಣಿಕೆ ಕಾರ್ಯ ಇಂದು ಬೆಳಿಗ್ಗೆ ಪೂರ್ಣಗೊಂಡಿತು. ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಶಶಿ ಹುಲಿಕುಂಟೆ ಅವರು 42,922 ಮತಗಳನ್ನು ಪಡೆದರೆ, ಸರ್ವ ಜನತಾ ಪಾರ್ಟಿ ಅಭ್ಯರ್ಥಿಯಾದ ಸಿ.ಜಿ. ಪಾಟೀಲ್ 162 ಮತ, ಪಕ್ಷೇತರ ಅಭ್ಯರ್ಥಿಗಳಾದ ಕಪನಿಗೌಡ 156, ಚಿಕ್ಕರಾಜು ಎಸ್. ವೈ ಯಾದವ್ 377, ಲಕ್ಷ್ಮಯ್ಯ. ಆರ್ 387, ಲಕ್ಷ್ಮಿಕಾಂತ ಎಸ್. ಯಾದವ್ 369, ಶಶಿ ಹುಲಿಕಟ್ಟಿ 449, ಸೈಯದ್ ಅಫಕ್ ಅಹ್ಮದ್ 113 ಹಾಗೂ ಅಡ್ವಕೇಟ್ ಬಾರಿದ್ ಅವರು 1,107 ಮತಗಳನ್ನು ಪಡೆದರು.
ಮತ ಎಣಿಕೆ ಪ್ರಕ್ರಿಯೆಯಲ್ಲಿ ಒಟ್ಟು 1,12,062 ಮತಗಳು ಮಾನ್ಯವಾಗಿದ್ದು, 20,076 ಮತಗಳು ಅಮಾನ್ಯ ಎಂದು ತಿರಸ್ಕೃತಗೊಂಡಿದೆ. ಅಕ್ಟೋಬರ್ 23 ರಂದು ನಡೆದ ಕರ್ನಾಟಕ ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆಯ ಮತದಾನದಲ್ಲಿ ಒಟ್ಟು 1,83,888 ಮತದಾರರ ಪೈಕಿ 1,35,321 ಮಂದಿ ಮತ ಚಲಾಯಿಸಿದ್ದು, ಶೇ.73.58 ರಷ್ಟು ಮತದಾನವಾಗಿತ್ತು. ಮತ ಚಲಾಯಿಸಿದವರಲ್ಲಿ 78,070 ಪುರುಷರು ಹಾಗೂ 57,251 ಮಹಿಳೆಯರು ಇದ್ದರು.
ಎನ್ಡಿಎಗೆ ಗೆಲುವು
ಕಾಂಗ್ರೆಸ್ ಅಧಿಕಾರದಲ್ಲಿದ್ದರೂ 4 ಕ್ಷೇತ್ರಗಳಲ್ಲಿ ಎನ್ಡಿಎ ಅಭ್ಯರ್ಥಿಗಳು ಜಯ ಸಾಧಿಸಿದ್ದಾರೆ. ಪಶ್ಚಿಮ ಪದವೀಧರ ಕ್ಷೇತ್ರದಿಂದ ಬಿಜೆಪಿಯ ಎಸ್ವಿ ಸಂಕನೂರು, ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ಜೆಡಿಎಸ್ನ ಎಂ.ಪಿ.ರಂಗನಾಥ್, ಈಶಾನ್ಯ ಶಿಕ್ಷಕರ ಕ್ಷೇತ್ರದಿಂದ ಶಶಿಲ್ ನಮೋಶಿ ಗೆಲುವಿನ ನಗೆ ಬೀರಿದ್ದಾರೆ.
