– ಮುಂದೆ ಹೀಗೆ ಮಾಡಲ್ಲ ಅಂತ ಕ್ಷಮೆಯಾಚನೆ
– ಖಾಸಗಿ ಕಂಪನಿಗಳು ಕನ್ನಡಿಗರನ್ನು ಕಡೆಗಣಿಸುತ್ತಿವೆ ಅಂತ ಟೀಕಿಸಿದ್ದ ಯುವತಿ
ಬೆಂಗಳೂರು: ರೆಸ್ಯೂಮ್ನಲ್ಲಿ ಕನ್ನಡ ಇದೆ ಅನ್ನೋ ಕಾರಣಕ್ಕೆ ಕೆಲಸ ನೀಡದೇ ಉದ್ಧಟತನ ತೋರಿದ್ದ ಸಂಸ್ಥೆ ವಿರುದ್ಧ ಕನ್ನಡಿಗರು ತಿರುಗಿ ಬಿದ್ದ ಬೆನ್ನಲ್ಲೇ, ಕೊನೆಗೂ ಖಾಸಗಿ ಸಂಸ್ಥೆ ಬಹಿರಂಗವಾಗಿ ಕನ್ನಡಿಗರ ಕ್ಷಮೆಯಾಚಿಸಿದೆ.
ಕರ್ನಾಟಕದಲ್ಲಿ ಕಾರ್ಯನಿರ್ವಹಿಸುತ್ತಿದ್ದರು, ಕನ್ನಡಿಗರಿಗೆ ಕೆಲಸ ನೀಡದೇ, ರೆಸ್ಯೂಮ್ನಲ್ಲಿ ಕನ್ನಡ ಮಾತೃಭಾಷೆ ಇದೆ ಅನ್ನೋ ಕಾರಣಕ್ಕೆ ಕೆಲಸ ನೀಡದೇ ಉದ್ಧಟತನ ತೋರಿದ್ದ ಖಾಸಗಿ ಸಂಸ್ಥೆಗೆ ಕೊನೆಗೂ ಕನ್ನಡಿಗರು ಪಾಠ ಕಲಿಸಿದ್ದಾರೆ. ಖಾಸಗಿ ಸಂಸ್ಥೆಯ ಮೊಂಡಾಟಕ್ಕೆ ಪಾಠ ಕಲಿಸುವ ಮೂಲಕ ಕನ್ನಡಿಗರಿಗೆ ಬಹಿರಂಗ ಕ್ಷಮೆಯಾಚಿಸುವಂತೆ ಮಾಡಿದ್ದಾರೆ. ಇದನ್ನೂ ಓದಿ: ಐಟಿ ಕಂಪನಿ ಸೇರಬೇಕು ಅಂದ್ರೆ ಕನ್ನಡ ಬೇಡ್ವಂತೆ: ವೀಡಿಯೊ ಮೂಲಕ ನೋವು ಹೇಳಿಕೊಂಡ ಯುವತಿ
ಕಳೆದ ಕೆಲ ದಿನಗಳ ಹಿಂದೆ ಕನ್ನಡಿಗರಿಗೆ ಖಾಸಗಿ ಸಂಸ್ಥೆಗಳ ಕೆಲಸ ನೀಡುವ ವಿಚಾರದಲ್ಲಿ ತಾರತಮ್ಯ ಮಾಡುತ್ತಿವೆ ಎನ್ನುವ ಆರೋಪಗಳು ಕೇಳಿ ಬಂದಿದ್ದವು. ಆ ಬೆನ್ನಲ್ಲೇ ಕೆಲಸದಿಂದ ವಂಚಿತಳಾಗಿದ್ದ ಯುವತಿಯೊಬ್ಬಳ ನೋವಿನ ವೀಡಿಯೊ ಕೂಡ ವೈರಲ್ ಆಗಿ, ಖಾಸಗಿ ಸಂಸ್ಥೆಗಳ ವಿರುದ್ಧ ದೊಡ್ಡಮಟ್ಟದ ಆಕ್ರೋಶ ವ್ಯಕ್ತವಾಗಿತ್ತು. ಈ ಬೆನ್ನಲ್ಲೇ ಆಕ್ಟೀವ್ ಆದ ಕನ್ನಡ ಸಂಘಟನೆಗಳು ಉದ್ಧಟತನ ತೋರಿದ್ದ ಸಾಫ್ಟ್ವೇರ್ ಸಂಸ್ಥೆಗೆ ತೆರಳಿ ಆಕ್ರೋಶ ವ್ಯಕ್ತಪಡಿಸಿವೆ. ಇಂದಿರಾನಗರದಲ್ಲಿದ್ದ ಕಂಪನಿಯನ್ನ ಹುಡುಕಿ ಕ್ಷಮೆಯಾಚಿಸುವಂತೆ ಮಾಡಿವೆ.
ಕನ್ನಡವನ್ನು ಉದ್ದೇಶಪೂರ್ವಕವಾಗಿ ಅವಮಾನಿಸಿಲ್ಲ. ನಮ್ಮ ಕಂಪನಿಯ ಬ್ರ್ಯಾಂಚ್ಗಳು ಕೆಲ ರಾಜ್ಯಗಳಲ್ಲಿವೆ. ಆಯಾ ರಾಜ್ಯಗಳಿಗೆ ಸಂಬಂಧಿಸಿದಂತೆ ತೆಲುಗು, ತಮಿಳು ಕಡ್ಡಾಯ ಅಂತ ಹಾಕಲಾಗಿತ್ತು. ಇನ್ಮುಂದೆ ಯಾವುದೇ ತಪ್ಪು ಆಗದಂತೆ ನೋಡಿಕೊಳ್ಳುತ್ತೇವೆ. ಕನ್ನಡಿಗರಿಗೆ ಆದ್ಯತೆಯನ್ನ ನೀಡುತ್ತೇವೆ ಎಂದ ಕಂಪನಿಯ ಪ್ರತಿನಿಧಿ ಭರವಸೆ ನೀಡಿದ್ದಾರೆ. ಇದನ್ನೂ ಓದಿ: ಕನ್ನಡಿಗರನ್ನು ಕಡೆಗಣಿಸಿದ್ರೆ ಸೂಕ್ತ ಕ್ರಮ – ಖಾಸಗಿ ಕಂಪನಿಗಳಿಗೆ ಡಿಕೆಶಿ ಖಡಕ್ ಎಚ್ಚರಿಕೆ
ಈ ರೀತಿಯ ಘಟನೆಗಳು ಪದೇ ಪದೇ ಮರುಕಳಿಸುತ್ತಿರುವ ಹಿನ್ನೆಲೆ, ಇತ್ತ ರಾಜ್ಯೋತ್ಸವ ಸಂಭ್ರಮದ ಹೊತ್ತಲ್ಲೇ ಸರ್ಕಾರಕ್ಕೆ ಕರವೇ ನಾರಾಯಣಗೌಡರ ಸವಾಲು ಹಾಕಿದ್ದಾರೆ. ರಾಜ್ಯದ ಜಲ, ನೆಲದ ರಕ್ಷಣೆಯಲ್ಲಿ ಸರ್ಕಾರಗಳು ವಿಫಲವಾಗಿವೆ. ಸರ್ಕಾರಕ್ಕೆ ಕನ್ನಡಿಗರ ಹಿತಕ್ಕಿಂತ ರಾಜಕೀಯವೇ ಮುಖ್ಯವಾಯ್ತಾ? ರಾಜ್ಯದಲ್ಲಿ ವಲಸೆ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ನೀತಿ ಜಾರಿ ಆಗಬೇಕು. ದೊಡ್ಡ ಅನಾಹುತ ನಡೆಯುವ ದಿನಗಳು ದೂರವಿಲ್ಲ. ಅನಾಹುತ ಸಂಭವಿಸಿದರೆ ಸರ್ಕಾರವೇ ನೇರ ಹೊಣೆಯಾಗಲಿದೆ. ಸರ್ಕಾರ ರಾಜ್ಯೋತ್ಸವದ ಧ್ವಜಾರೋಹಣಕ್ಕೂ ಮುನ್ನವೇ ಸೂಕ್ತ ನಿರ್ಧಾರ ಕೈಗೊಳ್ಳಬೇಕು. ಕಾರ್ಪೊರೇಟ್ ಶಕ್ತಿಗಳ ಬ್ಲ್ಯಾಕ್ಮೇಲ್ಗೆ ಸರ್ಕಾರ ಮಣಿಯಬೇಕಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
