– ಫಾರ್ಮ್-6 ತಿದ್ದುಪಡಿ ಅಧಿಕಾರ ಕೇಂದ್ರಕ್ಕೆ ಮಾತ್ರ ಇದೆ
– ಜ್ಞಾನೇಶ್ ಕುಮಾರ್ ವಿರುದ್ಧದ ಅರ್ಜಿಗೆ ಆಯೋಗ ಕೌಂಟರ್ ಅಫಿಡವಿಟ್
ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ (Gyanesh Kumar) ಅವರ ಕಾರ್ಯನಿರ್ವಹಣೆಯನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ಗೆ (Supreme Court) ಸಲ್ಲಿಸಿದ್ದ ಅರ್ಜಿಗೆ ಕೇಂದ್ರ ಚುನಾವಣಾ ಆಯೋಗ ಕೌಂಟರ್ ಅಫಿಡವಿಟ್ ಸಲ್ಲಿಸಿದೆ. ಇಬ್ಬರು ಚುನಾವಣಾ ಆಯುಕ್ತರು ಮತ್ತು ಮುಕ್ತ ಆಯುಕ್ತರು ಈ ಅಫಿಡವಿಟ್ ಅನ್ನು ಸರ್ವಾನುಮತದಿಂದ ಅನುಮೋದಿಸಿದ್ದಾರೆ ಎಂದು ಚುನಾವಣಾ ಸಂಸ್ಥೆ ಹೇಳಿದೆ.
ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR) ಗೆ ಸಂಬಂಧಿಸಿದಂತೆ 2025ರ ಜೂನ್, ಅಕ್ಟೋಬರ್ ಮತ್ತು 2026 ರ ಮೇ ತಿಂಗಳಲ್ಲಿ ಹೊರಡಿಸಲಾದ ಮೂರು ಆದೇಶಗಳು ಸರ್ವಾನುಮತದ ಕೂಡಿದ ನಿರ್ಧಾರಗಳಾಗಿವೆ ಎಂದು ಆಯೋಗ ಈ ಅಫಿಡವಿಟ್ನಲ್ಲಿ ಸಮರ್ಥಿಸಿಕೊಂಡಿದೆ.
SIR ಕುರಿತು ಆಯೋಗದೊಳಗಿನ ಆಂತರಿಕ ಭಿನ್ನಾಭಿಪ್ರಾಯಗಳನ್ನ ಎತ್ತಿ ತೋರಿಸಿದ ಇಂಡಿಯನ್ ಎಕ್ಸ್ಪ್ರೆಸ್ ವರದಿಯ ನಂತರ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನ ಪದಚ್ಯುತಗೊಳಿಸಬೇಕೆಂಬ ವಿಪಕ್ಷದ ಬೇಡಿಕೆಗಳ ನಡುವೆ EC ಪ್ರತಿಕ್ರಿಯೆ ಬಂದಿದೆ.
ಫೈಲ್ಗಳ ಪರಿಶೀಲನೆ ನಡೆಯುವ ಸಂದರ್ಭದಲ್ಲಿ ಮುಖ್ಯ ಚುನಾವಣಾ ಆಯುಕ್ತರು (CEC) ಅಥವಾ ಚುನಾವಣಾ ಆಯುಕ್ತರು ಮಾಡುವ ಟಿಪ್ಪಣಿಗಳು, ಪ್ರಶ್ನೆಗಳು ಅಥವಾ ಸಲಹೆಗಳನ್ನು ಚುನಾವಣಾ ಆಯೋಗದ ನಿರ್ಧಾರಗಳೆಂದು ಪರಿಗಣಿಸಬಾರದು ಎಂದು ಚುನಾವಣಾ ಆಯೋಗ (EC) ಸ್ಪಷ್ಟಪಡಿಸಿದೆ.
ಆಯೋಗ ಸಲ್ಲಿಸಿರುವ ಕೌಂಟರ್ ಅಫಿಡವಿಟ್ ಪ್ರಕಾರ, ಯಾವುದೇ ಕಡತವನ್ನು ಮುಖ್ಯ ಚುನಾವಣಾ ಆಯುಕ್ತರ (CEC) ಮುಂದೆ ಮಂಡಿಸುವ ಮೊದಲು ಒಬ್ಬ ಚುನಾವಣಾ ಆಯುಕ್ತರು ಪರಿಶೀಲಿಸುತ್ತಾರೆ, ನಂತರ ಮತ್ತೊಬ್ಬ ಚುನಾವಣಾ ಆಯುಕ್ತರು ಪರಿಶೀಲನೆ ನಡೆಸುತ್ತಾರೆ. ತುರ್ತು ಸಂದರ್ಭಗಳಲ್ಲಿ ಎಲೆಕ್ಟ್ರಾನಿಕ್ ಮೂಲಕ ಅನುಮೋದನೆ ಪಡೆಯಲಾಗುತ್ತದೆ ಹಾಗೂ ನಂತರ ಅದನ್ನು ಕಡತದಲ್ಲಿ ದಾಖಲಿಸಲಾಗುತ್ತದೆ. ತಮ್ಮ ನಿಯೋಜಿತ ಅಧಿಕಾರದ ವ್ಯಾಪ್ತಿಯನ್ನು ಮೀರಿ ಆದೇಶಗಳನ್ನು ಹೊರಡಿಸುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಆಯೋಗ ಎಚ್ಚರಿಕೆ ನೀಡಿದೆ.
ಕೇಂದ್ರ ಸರ್ಕಾರ ಮಾತ್ರ ಫಾರ್ಮ್-6 ತಿದ್ದುಪಡಿ ಮಾಡಬಹುದು
ಫಾರ್ಮ್ 6 ಮತ್ತು SIR ಘೋಷಣೆಗೆ ಸಂಬಂಧಿಸಿದಂತೆ, ಫಾರ್ಮ್ 6ರಲ್ಲಿ ಯಾವುದೇ ತಿದ್ದುಪಡಿ ಮಾಡಲಾಗಿಲ್ಲ. ಫಾರ್ಮ್ 6ಕ್ಕೆ ತಿದ್ದುಪಡಿ ಮಾಡುವ ಅಧಿಕಾರ ಕೇಂದ್ರ ಸರ್ಕಾರಕ್ಕೆ ಮಾತ್ರ ಇದೆ. SIR ಘೋಷಣೆಯು ಫಾರ್ಮ್ 6ಕ್ಕಿಂತ ಪ್ರತ್ಯೇಕವಾದ ದಾಖಲೆಯಾಗಿದೆ ಎಂದು ಆಯೋಗ ಸಮರ್ಥಿಸಿಕೊಂಡಿದೆ. ಆದರೆ, ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸುವ ಪ್ರಕ್ರಿಯೆಯ ವಿನ್ಯಾಸವನ್ನು ನೋಡಿದಾಗ, ಫಾರ್ಮ್ 6ಕ್ಕೆ ತಿದ್ದುಪಡಿ ಮಾಡಲಾಗಿದೆ ಎಂಬಂತೆ ಅರ್ಥೈಸಿಕೊಳ್ಳುವ ಸಾಧ್ಯತೆಯಿದೆ ಎಂಬುದನ್ನು ಆಯೋಗ ಒಪ್ಪಿಕೊಂಡಿದೆ.
ಹೀಗಾಗಿ, ಅಕ್ಟೋಬರ್ 21ರಿಂದ ಆನ್ಲೈನ್ ಅರ್ಜಿ ಸಲ್ಲಿಕೆ ಪ್ರಕ್ರಿಯೆಯಲ್ಲಿ ಫಾರ್ಮ್ 6 ಮತ್ತು ಘೋಷಣಾ ಪತ್ರವನ್ನು ಪ್ರತ್ಯೇಕವಾಗಿ ವಿಂಗಡಿಸಲಾಗುವುದು. ಇದರಿಂದ ಆನ್ಲೈನ್ ಪ್ರಕ್ರಿಯೆಯು ಭೌತಿಕ ಅರ್ಜಿ ನಮೂನೆಯ ಮಾದರಿಗೆ ಅನುಗುಣವಾಗಿರಲಿದೆ ಎಂದು ತಿಳಿಸಿದೆ.
SIR ಪ್ರಕ್ರಿಯೆಯ ಸಂದರ್ಭದಲ್ಲಿ ಮತದಾರರ ವಿವರಗಳನ್ನ ಮ್ಯಾಪಿಂಗ್ ಮಾಡಲು ಸಾಧ್ಯವಾಗದಿದ್ದರೆ, ಅಂತಹ ಮತದಾರರು ವಿಚಾರಣೆಗೆ ಖುದ್ದಾಗಿ ಹಾಜರಾಗಲೇಬೇಕೆಂದಿಲ್ಲ. ಬೂತ್ ಮಟ್ಟದ ಅಧಿಕಾರಿಗಳು (BLO) ಅಂತಹ ಮತದಾರರ ಮನೆಗಳಿಗೆ ತೆರಳಿ ಅಗತ್ಯ ದಾಖಲೆಗಳನ್ನ ಸಂಗ್ರಹಿಸಲಿದ್ದಾರೆ. ಅಪರೂಪದ ಸಂದರ್ಭಗಳಲ್ಲಿ ಮಾತ್ರ ವಿಚಾರಣೆ ನಡೆಸಲಾಗುವುದು. ಸಾಧ್ಯವಾದಷ್ಟು ವಿಚಾರಣೆಯನ್ನ ಆನ್ಲೈನ್ ಮೂಲಕ ನಡೆಸಲು ಆದ್ಯತೆ ನೀಡಲಾಗುವುದು ಎಂದು ಆಯೋಗ ಹೇಳಿದೆ. ಚುನಾವಣಾ ಆಯುಕ್ತರು ಮತ್ತು ಸಂಪುಟ ಕಾರ್ಯದರ್ಶಿ ನಡುವಿನ ಪತ್ರವ್ಯವಹಾರವನ್ನ ಆಧರಿಸಿ ಮಾಡಲಾಗಿರುವ ಆರೋಪಗಳು ತಪ್ಪು ತಿಳುವಳಿಕೆಯಿಂದ ಕೂಡಿವೆ ಎಂದೂ ಆಯೋಗ ಹೇಳಿದೆ.
ECINet ವ್ಯವಸ್ಥೆಗೆ ಸಂಬಂಧಿಸಿದಂತೆ, ಚುನಾವಣಾ ನೋಂದಣಾಧಿಕಾರಿಯ (ERO) ಆದೇಶವಿಲ್ಲದೆ ಯಾವುದೇ ಮತದಾರರ ಹೆಸರನ್ನು ಮತದಾರರ ಪಟ್ಟಿಗೆ ಸೇರಿಸಲು ಅಥವಾ ಪಟ್ಟಿಯಿಂದ ತೆಗೆದುಹಾಕಲು ಸಾಧ್ಯವಿಲ್ಲ. ಅಲ್ಲದೆ, ECINet ವ್ಯವಸ್ಥೆಯು ನಿಯಮಗಳ ಪಾಲನೆ ಮಾಡುತ್ತಿದೆಯೇ ಎಂಬುದನ್ನು ಪರಿಶೀಲಿಸಲು ಭಾರತೀಯ ತಂತ್ರಜ್ಞಾನ ಸಂಸ್ಥೆಗಳ (IITs) ಹಾಗೂ ಭಾರತೀಯ ವಿಜ್ಞಾನ ಸಂಸ್ಥೆಯ (IISc) ತಜ್ಞರನ್ನು ಒಳಗೊಂಡ ಸಮಿತಿಯನ್ನು ರಚಿಸಲಾಗಿದೆ ಎಂದು ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ.
ಗೋವಾ ಮತದಾರರ ಡೇಟಾ ನೀಡಲಿದೆ
ಇನ್ನೂ ಗೋವಾ ಚುನಾವಣಾ ಅಂಕಿ ಅಂಶಗಳ ಬಗ್ಗೆ ಉಲ್ಲೇಖಿಸಿ, ಆಯೋಗವು ಹೊರಗಿಡಲಾಗಿದೆ ವಿವರಿಸಲಾದ 97 ಮತದಾರರಲ್ಲಿ 88 ಜನರು ಈಗಾಗಲೇ ದಾಖಲಾಗಿದ್ದಾರೆ, 6 ಜನರು ವಿದೇಶದಲ್ಲಿದ್ದಾರೆ. ಮೂವರು ಪೋರ್ಚುಗೀಸ್ ಪಾಸ್ಪೋರ್ಟ್ಗಳನ್ನ ಹೊಂದಿದ್ದಾರೆ ಎಂದು ಹೇಳಿದೆ.
ಪಶ್ಚಿಮ ಬಂಗಾಳದಲ್ಲಿ ಮತದಾರರನ್ನು ಸೇರಿಸುವುದರ ವಿರುದ್ಧದ ಮೇಲ್ಮನವಿಗಳಲ್ಲಿ, ಸುಪ್ರೀಂ ಕೋರ್ಟ್ ಆದೇಶಗಳನ್ನು ಅನುಸರಿಸಿ ಪಶ್ಚಿಮ ಬಂಗಾಳದ ಮುಖ್ಯ ಚುನಾವಣಾ ಅಧಿಕಾರಿ (CEO) ಕಚೇರಿಯ ಅಧಿಕಾರಿಗಳು ಪ್ರಕರಣಗಳನ್ನು ದಾಖಲಿಸಿದ್ದಾರೆ ಎಂದು EC ಹೇಳಿದೆ. “ಈ ವಿಷಯಗಳನ್ನು ಆಯೋಗಕ್ಕೆ ತರಲಾಗಿಲ್ಲ” ಎಂದು ಅದು ಹೇಳಿದೆ.


