– ಯತೀಂದ್ರಗೆ ಇತಿಹಾಸದ ಅರಿವಿಲ್ಲ; ಮೈಸೂರು ಸಂಸ್ಥಾನದ ಗೌರವಕ್ಕೆ ಧಕ್ಕೆ ತರಬೇಡಿ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ತಂದೆಯ ಬಗ್ಗೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೀಡಿದ ಹೇಳಿಕೆಗೆ ಬಿಜೆಪಿ ವಿಧಾನ ಪರಿಷತ್ ಸದಸ್ಯ ಸಿಟಿ ರವಿ (CT Ravi) ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ನ ಮೊಹಬ್ಬತ್ ಇದೇನಾ? ಪ್ರಧಾನಮಂತ್ರಿಗಳ ತಂದೆಯ ಬಗ್ಗೆ ಮಾತನಾಡುವುದು ಪ್ರೀತಿಯ ರಾಜಕಾರಣವೇ ಎಂದು ಪ್ರಶ್ನಿಸುವ ಮೂಲಕ ಖರ್ಗೆ ಅವರಿಗೆ ತಿರುಗೇಟು ನೀಡಿದ್ದಾರೆ.
ದೆಹಲಿಯಲ್ಲಿ ಪ್ರತಿಕ್ರಿಯಿಸಿದ ಸಿಟಿ ರವಿ, ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರಿಗೆ ಆರು ದಶಕಗಳ ರಾಜಕೀಯ ಅಧಿಕಾರದ ಅನುಭವವಿದೆ. ಇಷ್ಟೊಂದು ದೀರ್ಘ ರಾಜಕೀಯ ಅನುಭವ ಹೊಂದಿರುವವರು ಇಂತಹ ಹೇಳಿಕೆಗಳನ್ನು ನೀಡುವುದು ಸರಿಯಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರೇ ಅಂತಿಮ. ಜನರು ನಾಯಕರನ್ನು ಅಧಿಕಾರದಲ್ಲಿ ಕೂರಿಸುತ್ತಾರೆ, ಅವರೇ ಅಧಿಕಾರದಿಂದ ಕೆಳಗಿಳಿಸುತ್ತಾರೆ. ಕಾಂಗ್ರೆಸ್ನಿಂದ ದೇಶದ ಉದ್ಧಾರ ಸಾಧ್ಯವಿಲ್ಲ ಎಂಬ ಕಾರಣಕ್ಕೆ ಜನರು ನರೇಂದ್ರ ಮೋದಿ ಅವರನ್ನ ಪ್ರಧಾನಿಯಾಗಿ ಆಯ್ಕೆ ಮಾಡಿದ್ದಾರೆ ಎಂದು ಹೇಳಿದ್ದಾರೆ.

ಬಿಜೆಪಿ ಕಾಂಗ್ರೆಸ್ನ ಭಿಕ್ಷೆಯಿಂದ ಅಧಿಕಾರಕ್ಕೆ ಬಂದಿಲ್ಲ. ಕಾಂಗ್ರೆಸ್ ನಾಯಕರು (Congress Leaders) ಸತತ ಸೋಲಿನ ಹತಾಶೆಯಿಂದ ಇಂತಹ ಹೇಳಿಕೆಗಳನ್ನ ನೀಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ ಅವರು, ಬ್ಯಾಲೆಟ್ ಪೇಪರ್ ಅಥವಾ ಇವಿಎಂ ಮೂಲಕ ಯಾವುದೇ ಚುನಾವಣೆ ನಡೆದರೂ ಬಿಜೆಪಿ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ನ ಸ್ಟಿಂಗ್ ಆಪರೇಷನ್ ವಿಚಾರವಾಗಿಯೂ ಪ್ರತಿಕ್ರಿಯಿಸಿದ ಸಿಟಿ ರವಿ, ಇದರಲ್ಲಿ ಬಿಜೆಪಿಯ ಪಾತ್ರವಿಲ್ಲ. ನಟರು, ನಿರ್ದೇಶಕರು ಮತ್ತು ನಿರ್ಮಾಪಕರು ಎಲ್ಲರೂ ಕಾಂಗ್ರೆಸ್ನವರೇ ಆಗಿದ್ದಾರೆ. ಹೀಗಾಗಿ ನಾವು ಕೇವಲ ವೀಕ್ಷಕರಾಗಿದ್ದೇವೆ ಎಂದು ವ್ಯಂಗ್ಯವಾಡಿದ್ದಾರೆ.
ಬಿಜೆಪಿಯಲ್ಲಿ ಸ್ಟಿಂಗ್ ಆಪರೇಷನ್ ನಡೆಸುವ ಪ್ರತ್ಯೇಕ ವ್ಯವಸ್ಥೆ ಇದೆಯೇ ಎಂಬುದು ತಮಗೆ ತಿಳಿದಿಲ್ಲ. ರಾಜಕೀಯದಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ ಅವರ ಸಮಕಾಲೀನರಾಗಿರುವ ತಮ್ಮ ಅನುಭವಕ್ಕೆ ಇಂತಹ ಸಂಗತಿ ಬಂದಿಲ್ಲ. ವಿಡಿಯೊ ಸಿದ್ಧಪಡಿಸಿದವರನ್ನ ಬಿಟ್ಟು, ಅದನ್ನು ಅಪ್ಲೋಡ್ ಮಾಡಿದವರು ಹಾಗೂ ಅದರ ಬಗ್ಗೆ ಕಾಮೆಂಟ್ ಮಾಡಿದವರನ್ನ ಗುರಿಯಾಗಿಸಲಾಗುತ್ತಿದೆ ಎಂದರು.
ಮೈಸೂರು ಸಂಸ್ಥಾನದ ಗೌರವಕ್ಕೆ ಧಕ್ಕೆ ತರಬೇಡಿ
ಮೈಸೂರು ಸಂಸ್ಥಾನದ ಬಗ್ಗೆ ಕರ್ನಾಟಕದ ಜನರಿಗೆ ವಿಶೇಷ ಗೌರವವಿದೆ. ಮೈಸೂರು ಮಹಾರಾಜರು ತಮ್ಮ ಪ್ರಜೆಗಳನ್ನು ಮಕ್ಕಳಂತೆ ಕಂಡು ಪ್ರೀತಿಯಿಂದ ನಡೆಸಿಕೊಳ್ಳುತ್ತಿದ್ದರು. ಆದರೆ ಇಂದಿನ ರಾಜಕಾರಣಿಗಳು ತಮ್ಮ ಮಕ್ಕಳನ್ನು ಮಾತ್ರ ಪ್ರಜೆಗಳಂತೆ ಕಾಣುತ್ತಿದ್ದಾರೆ ಎಂದು ಕುಟುಕಿದ್ದಾರೆ.

ಯತೀಂದ್ರಗೆ ಇತಿಹಾಸದ ಅರಿವಿಲ್ಲ
ಯತೀಂದ್ರ ಸಿದ್ದರಾಮಯ್ಯ (Yathindra Siddaramaiah) ಅವರಿಗೆ ಇತಿಹಾಸದ ಅರಿವಿಲ್ಲ ಎಂದು ತಮಗೆ ಅನಿಸುತ್ತದೆ ಎಂದು ಹೇಳಿದ ಅವರು, ಭಾರತದ ಸುಮಾರು 500 ಸಂಸ್ಥಾನಗಳೊಂದಿಗೆ ಒಪ್ಪಂದಗಳನ್ನ ಮಾಡಿಕೊಳ್ಳಲಾಗಿತ್ತು. ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ನೇತೃತ್ವದಲ್ಲಿ ನಡೆದ ಸಂಸ್ಥಾನಗಳ ವಿಲೀನ ಪ್ರಕ್ರಿಯೆಯ ಸಂದರ್ಭದಲ್ಲಿ ರಾಜಮನೆತನಗಳನ್ನು ಗೌರವದಿಂದ ನಡೆಸಿಕೊಳ್ಳುವುದು, ಅವರ ಆಸ್ತಿಗಳಿಗೆ ಸಂಬಂಧಿಸಿದ ಹಕ್ಕುಗಳನ್ನು ಪರಿಗಣಿಸುವುದು ಹಾಗೂ ರಾಜಧನ ನೀಡುವಂತಹ ವ್ಯವಸ್ಥೆಗಳ ಕುರಿತು ಒಪ್ಪಂದಗಳಾಗಿದ್ದವು ಎಂದು ಹೇಳಿದ್ದಾರೆ.
ಮೈಸೂರು ಮಹಾರಾಜರು ತಮ್ಮ ಖಾಸಗಿ ವಿಮಾನವನ್ನು ಸರ್ದಾರ್ ಪಟೇಲ್ ಅವರಿಗೆ ನೀಡಿದ್ದ ವಿಚಾರವನ್ನೂ ಸ್ಮರಿಸಿದ ಸಿಟಿ ರವಿ, ಇತಿಹಾಸವನ್ನ ಮರೆತು ಮಾತನಾಡಬಾರದು. ರಾಜಕೀಯ ಅಧಿಕಾರ ಸಿಕ್ಕಿದೆ ಎಂಬ ಕಾರಣಕ್ಕೆ ಅದನ್ನು ದುರ್ಬಳಕೆ ಮಾಡಿಕೊಳ್ಳಬಾರದು. ರಾಜಮನೆತನದವರನ್ನ ಗೌರವದಿಂದ ನಡೆಸಿಕೊಳ್ಳಬೇಕು, ಅವರ ಮಾತುಗಳನ್ನು ಸಹಾನುಭೂತಿಯಿಂದ ಪರಿಗಣಿಸಬೇಕು. ತಾವೇ ಮರಿ ರಾಜರು ಎಂಬಂತೆ ರಾಜಕಾರಣಿಗಳು ವರ್ತಿಸಬಾರದು ಎಂದು ಹೇಳಿದ್ದಾರೆ.
