ಬಳ್ಳಾರಿ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ(Siddaramaiah) ಅವರ ತೇಜೋವಧೆಗೆ ನಡೆದಿದೆ ಎನ್ನಲಾದ ಸ್ಟಿಂಗ್ ಆಪರೇಷನ್ (Sting Operation) ಪ್ರಕರಣದಲ್ಲಿ ಕಾಂಗ್ರೆಸ್ ನಾಯಕಿ ಕೃಪಾ ಆಳ್ವಾ(Kripa Alva) ಅವರ ಕೈವಾಡ ಹಾಗೂ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ(HD Kumaraswamy) ಅವರ ಪಾತ್ರದ ಕುರಿತು ಕೆಪಿಸಿಸಿ ಉಪಾಧ್ಯಕ್ಷ ಎಂ.ಆರ್.ಎಂ ಹುಸೇನ್ ಗಂಭೀರ ಆರೋಪಗಳನ್ನು ಮಾಡಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಬಳ್ಳಾರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಎಂ.ಆರ್.ಎಂ ಹುಸೇನ್, ಸ್ಟಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕೃಪಾ ಆಳ್ವಾ ಅವರಿಗೆ ಈಗಾಗಲೇ ಪಕ್ಷದಿಂದ ನೋಟಿಸ್ ನೀಡಲಾಗಿದ್ದು, ಪೊಲೀಸರು ವಿಚಾರಣೆ ಕೂಡ ನಡೆಸಿದ್ದಾರೆ. ನೋಟಿಸ್ಗೆ ಅವರು ಸೂಕ್ತ ಸಮಜಾಯಿಷಿ ನೀಡದಿದ್ದರೆ ಯಾವುದೇ ಮುಲಾಜಿಲ್ಲದೆ ಕಠಿಣ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.
ಪಕ್ಷದಲ್ಲಿ ಯಾರೋ ಒಬ್ಬರು ಮಾಡಿದ ತಪ್ಪಿಗೆ ಇಡೀ ಕಾಂಗ್ರೆಸ್ ಪಕ್ಷ ಹೊಣೆಯಾಗಲು ಸಾಧ್ಯವಿಲ್ಲ. ಕೃಪಾ ಆಳ್ವಾ ಅವರ ಹಿನ್ನೆಲೆ ಏನು ಎಂಬುದು ಎಲ್ಲರಿಗೂ ಗೊತ್ತಿದೆ, ಹಿಂದೆ ಮಾಧ್ಯಮಗಳಲ್ಲೂ ಅವರ ಇತಿಹಾಸ ಪ್ರಕಟವಾಗಿದೆ. ಚುನಾವಣಾ ಟಿಕೆಟ್ ಪಡೆಯುವ ದುರುದ್ದೇಶದಿಂದಲೇ ಅವರು ಇಂತಹ ಹೀನ ಷಡ್ಯಂತ್ರ ರೂಪಿಸಿದ್ದು, ಈಗ ಅವರ ಅಸಲಿಯತ್ತು ಸಂಪೂರ್ಣವಾಗಿ ಬಯಲಾಗಿದೆಎಂದು ಗುಡುಗಿದರು.
ಇದೇ ವೇಳೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಹಾಗೂ ಬಿಜೆಪಿ ಮೈತ್ರಿ ವಿರುದ್ಧ ಆಕ್ರೋಶ ಹೊರಹಾಕಿದ ಹುಸೇನ್, ಸಿದ್ದರಾಮಯ್ಯನವರು ಇಡೀ ರಾಜಕೀಯ ಜೀವನದಲ್ಲಿ ಒಂದೂ ಕಪ್ಪುಚುಕ್ಕೆ ಇಲ್ಲದಂತೆ ಜನಸೇವೆ ಮಾಡಿದ ಮಹಾನ್ ನಾಯಕ. ಅಂತಹ ನಾಯಕನಿಗೆ ಮಸಿ ಬಳಿಯಲು ಕುಮಾರಸ್ವಾಮಿ ಅವರು ಬಿಜೆಪಿಯವರ ಜೊತೆ ಸೇರಿ ಈ ಪಿತೂರಿ ರೂಪಿಸಿದ್ದಾರೆ. ಯಾವಾಗ ಕುಮಾರಸ್ವಾಮಿ ಅವರು ಹಠಾತ್ತಾಗಿ ಸಿದ್ದರಾಮಯ್ಯನವರನ್ನು ಹೊಗಳಲು ಪ್ರಾರಂಭಿಸಿದರೋ, ಆಗಲೇ ಇದರ ಹಿಂದೆ ಯಾವುದೋ ದೊಡ್ಡ ಹುನ್ನಾರವಿದೆ ಎಂಬುದು ನಮಗೆ ಸ್ಪಷ್ಟವಾಗಿತ್ತು. ಈ ಇಡೀ ಷಡ್ಯಂತ್ರದ ಮೂಲ ಸೂತ್ರಧಾರಿಯೇ ಕುಮಾರಸ್ವಾಮಿ ಎಂದು ಆರೋಪಿಸಿದರು.
2011ರಿಂದಲೇ ಟಿಕೆಟ್ಗಾಗಿ ಲಾಬಿ ನಡೆಸುತ್ತಿದ್ದ ಕೃಪಾ ಆಳ್ವಾ ಅವರ ವಿಚಾರಣೆ ಈಗ ನಡೆಯುತ್ತಿದೆ. ಆದರೆ, ಆ ಸ್ಟಿಂಗ್ ವಿಡಿಯೋ ಕುಮಾರಸ್ವಾಮಿ ಅವರ ಕೈಗೆ ತಲುಪಿದ್ದು ಹೇಗೆ? ಸಿದ್ದರಾಮಯ್ಯನವರ ಗೌರವಕ್ಕೆ ಧಕ್ಕೆ ತರಲು ಆ ವಿಡಿಯೋವನ್ನು ಅವರೇಕೆ ಬಿಡುಗಡೆ ಮಾಡಿದರು? ಸಿದ್ದರಾಮಯ್ಯನವರು ಯಾವುದೇ ತಪ್ಪು ಮಾಡಿಲ್ಲ ಎಂಬುದು ಈಗಾಗಲೇ ಸಾಬೀತಾಗಿದ್ದು, ಅವರು ಇದರಿಂದ ಸಂಪೂರ್ಣ ನಿರಾಳರಾಗಿ ಹೊರಬಂದಿದ್ದಾರೆ. ದೆಹಲಿಯಲ್ಲಿ ಪ್ರತಿಭಟನೆ ಮುಗಿದ ಬಳಿಕ ಸಿದ್ದರಾಮಯ್ಯನವರು ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿ ಸಮಾಲೋಚನೆ ನಡೆಸಲಿದ್ದಾರೆ ಎಂದು ತಿಳಿಸಿದರು.
