– 4,411 ವಜ್ರಗಳಿಂದ ಅಲಂಕರಿಸಿದ ಐಷಾರಾಮಿ ಬ್ರಾ; ಫ್ಯಾಷನ್ ಲೋಕದಲ್ಲಿ ಸಂಚಲನ
ಫ್ಯಾಷನ್ ಜಗತ್ತಿನ ಅತ್ಯಂತ ಜನಪ್ರಿಯ ಕಾರ್ಯಕ್ರಮಗಳಲ್ಲಿ ಒಂದಾದ ವಿಕ್ಟೋರಿಯಾ ಸೀಕ್ರೆಟ್ ಫ್ಯಾಷನ್ ಶೋ 2026ರಲ್ಲಿ ಅಮೆರಿಕದ ಖ್ಯಾತ ಉದ್ಯಮಿ ಹಾಗೂ ರಿಯಾಲಿಟಿ ಶೋ ತಾರೆ ಕೈಲಿ ಜೆನ್ನರ್ (Kylie Jenner) ಎಲ್ಲರ ಗಮನ ಸೆಳೆದಿದ್ದಾರೆ. ಅಕ್ಟೋಬರ್ 18ರಂದು ನಡೆದ ಈ ಫ್ಯಾಷನ್ ಶೋನಲ್ಲಿ ಬರೋಬ್ಬರಿ 50 ಮಿಲಿಯನ್ ಅಮೆರಿಕನ್ ಡಾಲರ್ (ಸುಮಾರು 450 ಕೋಟಿ ) ಮೌಲ್ಯದ ಐಷಾರಾಮಿ ಫ್ಯಾಂಟಸಿ ಬ್ರಾ ಧರಿಸಿ ಅವರು ರ್ಯಾಂಪ್ ಮೇಲೆ ಹೆಜ್ಜೆ ಹಾಕಿದ್ದಾರೆ.

8 ವರ್ಷಗಳ ಬಳಿಕ ಈ ವಿಶೇಷ ವಿನ್ಯಾಸದ ಒಳಉಡುಪು ಮತ್ತೆ ರ್ಯಾಂಪ್ಗೆ ಮರಳಿದ್ದು, ಅದನ್ನ ಧರಿಸಿದ ಮೊದಲ ರೂಪದರ್ಶಿ ಎಂಬ ಹೆಗ್ಗಳಿಕೆಗೂ ಕೈಲಿ ಜೆನ್ನರ್ ಪಾತ್ರರಾಗಿದ್ದಾರೆ.
ಕೈಲಿ ಜೆನ್ನರ್ ಆಯ್ಕೆಯ ಹಿಂದಿನ ಕಾರಣವೇನು?
ವಿಕ್ಟೋರಿಯಾ ಸೀಕ್ರೆಟ್ ಸಂಸ್ಥೆಯ ಮುಖ್ಯ ಕ್ರಿಯೇಟಿವ್ ಅಧಿಕಾರಿ ಆಡಮ್ ಸೆಲ್ಮನ್, ಕೈಲಿ ಜೆನ್ನರ್ ಅವರನ್ನು ಈ ವಿಶೇಷ ಪ್ರದರ್ಶನಕ್ಕೆ ಆಯ್ಕೆ ಮಾಡಿದ ಹಿಂದಿನ ಕಾರಣವನ್ನ ವಿವರಿಸಿದ್ದಾರೆ. ಫ್ಯಾಷನ್ ಕ್ಷೇತ್ರವನ್ನು ಮೀರಿ ಜನಪ್ರಿಯ ಸಂಸ್ಕೃತಿ, ದೂರದರ್ಶನ ಹಾಗೂ ಮನರಂಜನಾ ಜಗತ್ತಿನಲ್ಲೂ ಕೈಲಿ ಜೆನ್ನರ್ ದೊಡ್ಡ ಪ್ರಭಾವ ಹೊಂದಿದ್ದಾರೆ ಎಂದು ಹೇಳಿದ್ದಾರೆ.

ವೋಗ್ ನಿಯತಕಾಲಿಕದೊಂದಿಗಿನ ಸಂದರ್ಶನದಲ್ಲಿ ಮಾತನಾಡಿದ ಸೆಲ್ಮನ್, ಕೈಲಿ ಜೆನ್ನರ್ ಅವರ ಜನಪ್ರಿಯತೆ ಒಂದೇ ಕ್ಷೇತ್ರಕ್ಕೆ ಸೀಮಿತವಾಗಿಲ್ಲ. ವಿಕ್ಟೋರಿಯಾ ಸೀಕ್ರೆಟ್ ಶೋ ಕೂಡ ಕೇವಲ ಫ್ಯಾಷನ್ ಪ್ರದರ್ಶನವಲ್ಲ, ಅದೊಂದು ದೊಡ್ಡ ಮನರಂಜನಾ ಕಾರ್ಯಕ್ರಮ. ಹೀಗಾಗಿ ಈ ಕಾರ್ಯಕ್ರಮಕ್ಕೆ ಕೈಲಿ ಜೆನ್ನರ್ ಸೂಕ್ತ ಆಯ್ಕೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಕೈಲಿ ಜೆನ್ನರ್ ತಮ್ಮದೇ ಆದ ವಿಶಿಷ್ಟ ಅಭಿಮಾನಿ ಬಳಗ ಮತ್ತು ಸಾಂಸ್ಕೃತಿಕ ಪ್ರಭಾವ ರೂಪಿಸಿಕೊಂಡಿದ್ದಾರೆ. ಇಂತಹ ಜನಪ್ರಿಯ ವ್ಯಕ್ತಿಯ ಮೂಲಕ ಅಭಿಮಾನಿಗಳಿಗೆ ಅವರು ನಿರೀಕ್ಷಿಸುವ ವಿಶೇಷ ಫ್ಯಾಷನ್ ಅನುಭವ ನೀಡುವುದು ಸಂಸ್ಥೆಯ ಉದ್ದೇಶವಾಗಿದೆ ಎಂದು ಸೆಲ್ಮನ್ ವಿವರಿಸಿದ್ದಾರೆ.

ಈ ಹಿಂದೆ ಗಿಸೆಲ್ ಬುಂಡ್ಚೆನ್, ಹೈಡಿ ಕ್ಲುಮ್, ಟೈರಾ ಬ್ಯಾಂಕ್ಸ್, ಆಡ್ರಿಯಾನಾ ಲಿಮಾ, ಅಲೆಸ್ಸಾಂಡ್ರಾ ಅಂಬ್ರೋಸಿಯೊ ಮತ್ತು ಕ್ಯಾಂಡಿಸ್ ಸ್ವಾನ್ಪೋಯೆಲ್ ಅವರಂತಹ ಖ್ಯಾತ ರೂಪದರ್ಶಿಗಳು ಫ್ಯಾಂಟಸಿ ಬ್ರಾ ಧರಿಸಿ ಗಮನ ಸೆಳೆದಿದ್ದರು. ಇದೀಗ ಈ ಪಟ್ಟಿಗೆ ಕೈಲಿ ಜೆನ್ನರ್ ಕೂಡ ಸೇರ್ಪಡೆಯಾಗಿದ್ದಾರೆ.
4,411 ನೈಸರ್ಗಿಕ ವಜ್ರಗಳಿಂದ ಸಿದ್ಧವಾದ ಬ್ರಾ!
ಈ ಫ್ಯಾಂಟಸಿ ಬ್ರಾ ದ ವಿಶೇಷತೆ ಅದರ ವಿನ್ಯಾಸ ಮತ್ತು ಅದರಲ್ಲಿ ಬಳಸಿರುವ ಅಮೂಲ್ಯ ಆಭರಣಗಳು. ಬರೋಬ್ಬರಿ 4,411 ನೈಸರ್ಗಿಕ ವಜ್ರಗಳಿಂದ ಈ ಬ್ರಾವನ್ನು ಅಲಂಕರಿಸಲಾಗಿದೆ. ಇದರ ಮಧ್ಯಭಾಗದಲ್ಲಿ ಅಳವಡಿಸಿರುವ ಹಳದಿ ವಜ್ರವೊಂದರ ಮೌಲ್ಯವೇ 22 ಮಿಲಿಯನ್ ಅಮೆರಿಕನ್ ಡಾಲರ್ ಸುಮಾರು 198 ಕೋಟಿ ಎಂದು ಅಂದಾಜಿಸಲಾಗಿದೆ.
ಈ ಅಪರೂಪದ ವಿನ್ಯಾಸವನ್ನು ರೂಪಿಸಲು ಜೇಕಬ್ ಆ್ಯಂಡ್ ಕೋ ಸಂಸ್ಥೆಯ 15 ಪರಿಣತ ಕುಶಲಕರ್ಮಿಗಳು ಶ್ರಮಿಸಿದ್ದಾರೆ. ಸಂಪೂರ್ಣ ಬ್ರಾ ತಯಾರಿಕೆಗೆ 1,000 ಗಂಟೆಗಳಿಗಿಂತ ಹೆಚ್ಚು ಸಮಯ ತೆಗೆದುಕೊಳ್ಳಲಾಗಿದೆ. ಇದರ ತೂಕ 4 ಕೆಜಿಗಿಂತ ಸ್ವಲ್ಪ ಕಡಿಮೆಯಿದ್ದು, ಸುಮಾರು 1.8 ಕೆ.ಜಿ. ಇದೆ.
