ನವದೆಹಲಿ: ಸತತ ಚುನಾವಣಾ(Election) ಸೋಲುಗಳನ್ನು ಮುಚ್ಚಿಹಾಕಲು ಮತ್ತು ನುಸುಳುಕೋರರ(Infiltrators) ವೋಟ್ಬ್ಯಾಂಕ್ ಅನ್ನು ರಕ್ಷಿಸಿಕೊಳ್ಳಲು ಕಾಂಗ್ರೆಸ್ ವೋಟ್ ಚೋರಿಯಂತಹ ಹುಸಿ ನೆಪಗಳನ್ನು ಹುಡುಕುತ್ತಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ(Amit Shah) ಆರೋಪಿಸಿದ್ದಾರೆ.
ಚುನಾವಣಾ ಆಯೋಗ ಮತ್ತು ಬಿಜೆಪಿಯ ನಡುವೆ ಒಳಒಪ್ಪಂದವಿದೆ ಹಾಗೂ ಮತಗಳ ಕಳ್ಳತನ ನಡೆಯುತ್ತಿದೆ ಎಂಬ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ(Rahul Gandhi) ಅವರ ಆರೋಪಗಳಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಗುರುವಾರ ತಿರುಗೇಟು ನೀಡಿದರು.
ತಮ್ಮ ಜನ್ಮದಿನದ ಅಂಗವಾಗಿ ನವದೆಹಲಿಯ ದ್ವಾರಕಾದಲ್ಲಿ ಯಮುನಾ ನದಿ ಸ್ವಚ್ಛತೆ ಮತ್ತು ಕುಡಿಯುವ ನೀರು ಪೂರೈಕೆಗೆ ಸಂಬಂಧಿಸಿದ 8,941 ಕೋಟಿ ರೂ. ಮೌಲ್ಯದ 43 ದೆಹಲಿ ಜಲ ಮಂಡಳಿ ಯೋಜನೆಗಳಿಗೆ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಕಾಂಗ್ರೆಸ್ ಜೊತೆಗೆ ಆಮ್ ಆದ್ಮಿ ಪಕ್ಷ (AAP) ಮತ್ತು ಅರವಿಂದ್ ಕೇಜ್ರಿವಾಲ್ ವಿರುದ್ಧವೂ ವಾಗ್ದಾಳಿ ನಡೆಸಿದರು.
#WATCH | Delhi: Union Home Minister Amit Shah says, “… Your turn won’t come for the next 30 years. From booth workers to PM Narendra Modi, BJP workers stay connected with the people and work tirelessly to address their problems.” https://t.co/tNlRVX3mco
— ANI (@ANI) October 22, 2026
ಬಿಜೆಪಿ ಸತತವಾಗಿ ಚುನಾವಣೆಗಳನ್ನು ಗೆಲ್ಲುತ್ತಿರುವುದು ವಿಪಕ್ಷಗಳಿಗೆ ನುಂಗಲಾರದ ತುತ್ತಾಗಿದೆ. ಅದಕ್ಕಾಗಿಯೇ ಅವರು ‘ವೋಟ್ ಚೋರಿ’ ಎಂಬ ಹೊಸ ನೆಪವನ್ನು ಮುನ್ನೆಲೆಗೆ ತಂದಿದ್ದಾರೆ. ರಾಹುಲ್ ಅವರೇ, ನೀವು ಮತಗಳ್ಳತನದ ಬಗ್ಗೆ ಮಾತನಾಡುತ್ತಿರುವುದು ನುಸುಳುಕೋರರ ಮತಗಳನ್ನು ರಕ್ಷಿಸುವ ಉದ್ದೇಶದಿಂದ ಮಾತ್ರ ಎಂದು ನೇರವಾಗಿ ಆರೋಪಿಸಿದರು.
ಪ್ರಜಾಸತ್ತಾತ್ಮಕ ಸಂಸ್ಥೆಗಳ ವಿಶ್ವಾಸಾರ್ಹತೆಯನ್ನು ಪ್ರಶ್ನಿಸುವ ಕಾಂಗ್ರೆಸ್ ಚಾಳಿಯನ್ನು ತರಾಟೆಗೆ ತೆಗೆದುಕೊಂಡ ಶಾ, “ನಿಮಗೆ ನ್ಯಾಯಾಲಯಗಳ ತೀರ್ಪುಗಳು ಪರವಾಗಿ ಬಂದಾಗ ನ್ಯಾಯಯುತ ಎನ್ನುತ್ತೀರಿ. ವಿರುದ್ಧವಾಗಿ ಬಂದಾಗ ಪ್ರಶ್ನಿಸುತ್ತೀರಿ. ನೀವು ಗೆದ್ದಾಗ ಚುನಾವಣಾ ಆಯೋಗ ಸರಿಯಾಗಿರುತ್ತದೆ. ಸೋತಾಗ ದೋಷಪೂರಿತವಾಗುತ್ತದೆ. ಈ ಇಬ್ಬಗೆಯ ನೀತಿ ನಡೆಯುವುದಿಲ್ಲ ರಾಹುಲ್ ಅವರೇ. ಋಣಾತ್ಮಕ ರಾಜಕೀಯದಿಂದಾಗಿ 2030ರವರೆಗೂ ಕಾಂಗ್ರೆಸ್ ಚುನಾವಣೆ ಗೆಲ್ಲಲು ಸಾಧ್ಯವಿಲ್ಲ. ಮುಂದಿನ 30 ವರ್ಷಗಳವರೆಗೆ ನಿಮ್ಮ ಸರದಿ ಬರುವುದಿಲ್ಲ ಎಂದರು.
ತೆಲಂಗಾಣ, ಕೇರಳ, ಹಿಮಾಚಲ ಪ್ರದೇಶ ಚುನಾವಣೆಯಲ್ಲಿ ನೀವು ಗೆದ್ದಿದ್ದೀರಿ. ತಮಿಳುನಾಡಿನಲ್ಲಿ ಗೆದ್ದ ಪಕ್ಷದ ಜೊತೆ ಸೇರಿ ನೀವು ಸರ್ಕಾರ ಮಾಡಿದ್ದೀರಿ. ಈ ರಾಜ್ಯಗಳಲ್ಲಿ ಅದೇ ಇವಿಎಂನಲ್ಲಿ ಮತದಾನ ನಡೆದಿದೆ. ಇಲ್ಲಿ ಗೆದ್ದಾಗ ವೋಟ್ ಚೋರ್ ಬಗ್ಗೆ ಯಾವುದೇ ಮಾತಿಲ್ಲ. ಆದರೆ ಸೋತಾಗ ಮಾತ್ರ ಮತಗಳ್ಳತನದ ಬಗ್ಗೆ ವಿರೋಧ ಮಾಡುತ್ತೀರಿ ಎಂದು ವ್ಯಂಗ್ಯವಾಡಿದರು.
ಬಿಜೆಪಿ ಮುಂದಿನ 30 ವರ್ಷ ಅಧಿಕಾರದಲ್ಲಿರುತ್ತದೆ ಎಂದು ನಾನು ಹೇಳಿದಾಗ, ಅಮಿತ್ ಶಾಗೆ ಫಲಿತಾಂಶ ಮೊದಲೇ ಹೇಗೆ ತಿಳಿಯುತ್ತದೆ ಎಂದು ಕೇಳುತ್ತಾರೆ. ನಾನು ಇಲ್ಲೇ ಹುಟ್ಟಿದ್ದೇನೆ, ಇಲ್ಲೇ ಬದುಕುತ್ತಿದ್ದೇನೆ, ಇಲ್ಲೇ ಸಾಯುತ್ತೇನೆ. ಆರು ತಿಂಗಳಿಗೊಮ್ಮೆ ವಿದೇಶಕ್ಕೆ ತೆರಳುವ ಅಗತ್ಯ ನನಗಿಲ್ಲ, ಜನರ ಮಧ್ಯೆಯೇ ಇರುತ್ತೇನೆ. ಪ್ರತಿಭಟನೆಗಳು, ಬೀದಿಗಿಳಿದು ಗಲಾಟೆ ಮಾಡುವುದರಿಂದ ಅಥವಾ ಗುಂಪುಗಾರಿಕೆಯ ಒತ್ತಡದಿಂದ ಜನಾದೇಶವನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದು ಚಾಟಿ ಬೀಸಿದರು.
ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Aravind Kejriwal) ವಿರುದ್ಧ ಗುಡುಗಿದ ಅಮಿತ್ ಶಾ, “ಕೇಜ್ರಿವಾಲ್ ಕೇವಲ ಪ್ರತಿಭಟನೆ ಮತ್ತು ಆಂದೋಲನಗಳ ಮೂಲಕವೇ ರಾಜಕೀಯ ಮಾಡಿಕೊಂಡು ಬಂದಿದ್ದಾರೆ ಹೊರತು ದೆಹಲಿಯ ಮೂಲಸೌಕರ್ಯಗಳನ್ನು ಸಂಪೂರ್ಣ ಕಡೆಗಣಿಸಿದ್ದಾರೆ. ದೆಹಲಿಯಲ್ಲಿ ಎತ್ತರಕ್ಕೆ ಬೆಳೆದು ನಿಂತಿರುವ ಕಸದ ಬೆಟ್ಟಗಳನ್ನು ತೆರವುಗೊಳಿಸಲು ಅವರು ಏನನ್ನೂ ಮಾಡಲಿಲ್ಲ. ಮುಂಬರುವ ದಿನಗಳಲ್ಲಿ ಪಂಜಾಬ್ನ ಜನರು ಆಪ್ ಸರ್ಕಾರವನ್ನು ಅಧಿಕಾರದಿಂದ ಕಿತ್ತೊಗೆಯುವ ಮೂಲಕ ಕೇಜ್ರಿವಾಲ್ಗೆ ತಕ್ಕ ಉತ್ತರ ನೀಡಲಿದ್ದಾರೆ ಎಂದು ಭವಿಷ್ಯ ನುಡಿದರು.
ರಾಜಧಾನಿಯ ತ್ಯಾಜ್ಯ ಡಂಪ್ ಯಾರ್ಡ್ಗಳನ್ನು ಅತ್ಯಂತ ಕಡಿಮೆ ಅವಧಿಯಲ್ಲಿ ಸುಂದರ ಸಾರ್ವಜನಿಕ ಉದ್ಯಾನವನಗಳನ್ನಾಗಿ ಪರಿವರ್ತಿಸಲು ಕೇಂದ್ರ ಸರ್ಕಾರ ಹಗಲಿರುಳು ಶ್ರಮಿಸುತ್ತಿದೆ ಎಂದರು.
ಯಮುನಾ ನದಿಯ ಸ್ವಚ್ಛತೆಯು ನಗರದ ಜೀವನಾಡಿಯಾಗಿದೆ ಎಂದು ಹೇಳಿದ ಗೃಹ ಸಚಿವರು, “ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರ ರಚನೆಯಾದ ತಕ್ಷಣವೇ ಯಮುನಾ ನದಿ ಶುದ್ಧೀಕರಣದ ನೀಲನಕ್ಷೆಯನ್ನು ಸಿದ್ಧಪಡಿಸಲಾಯಿತು. ಈಗಾಗಲೇ ನಿಗದಿತ ಗುರಿಯಲ್ಲಿ ಶೇ. 40ರಷ್ಟು ಪ್ರಗತಿ ಸಾಧಿಸಲಾಗಿದೆ. ಇಂದು ಚಾಲನೆ ನೀಡಿರುವ 9,000 ಕೋಟಿ ರೂ. ವೆಚ್ಚದ ತ್ಯಾಜ್ಯನೀರು ಸಂಸ್ಕರಣೆ ಮತ್ತು ಕುಡಿಯುವ ನೀರಿನ ಯೋಜನೆಗಳು ಯಮುನಾ ಪುನಶ್ಚೇತನಕ್ಕೆ ಬೆನ್ನೆಲುಬಾಗಿ ನಿಲ್ಲಲಿವೆ ಎಂದು ತಿಳಿಸಿದರು.
