ಕ್ರೈಸ್ಟ್ಚರ್ಚ್: ರನ್ ಹೊಳೆ, ಸಿಕ್ಸರ್ ಬೌಂಡರಿಗಳ ಸುರಿಮಳೆಯೊಂದಿಗೆ ಕಿವೀಸ್ ನೆಲದಲ್ಲಿ ಟೀಂ ಇಂಡಿಯಾ ಹೊಸ ಇತಿಹಾಸ ಸೃಷ್ಟಿಸಿದೆ. ನ್ಯೂಜಿಲೆಂಡ್ ವಿರುದ್ಧ ನಡೆದ 5 ಪಂದ್ಯಗಳ ಸರಣಿಯ ಮೊದಲ ಟಿ20 ಪಂದ್ಯದಲ್ಲಿ ಭಾರತ 4 ವಿಕೆಟ್ಗಳ ಅಮೋಘ ಜಯ ಸಾಧಿಸಿದೆ. ಇದು ಟಿ20 ಕ್ರಿಕೆಟ್ನಲ್ಲಿ ಟೀಂ ಇಂಡಿಯಾದ ದಾಖಲೆಯ ಚೇಸಿಂಗ್ ಕೂಡ ಆಗಿದೆ.
– Record run Chase.
– Fifty.
– Player of the match.ONE & ONLY SANJU SAMSON 😍🇮🇳 https://t.co/Vu3Ed274bO
— Johns. (@CricCrazyJohns) October 22, 2026
ಕಳೆದ ವರ್ಷ ಕಿವೀಸ್ ವಿರುದ್ಧವೇ ಭಾರತ ರಾಯ್ಪುರ ಮೈದಾನದಲ್ಲಿ 209 ರನ್ಗಳ ಬಹತ್ ರನ್ ಚೇಸ್ ಮಾಡಿತ್ತು. ಅಂದು ಕೇವಲ 15.2 ಓವರ್ಗಳಲ್ಲೇ ಟೀಂ ಇಂಡಿಯಾ ಗುರಿ ತಲುಪಿತ್ತು. ಇದಕ್ಕೂ ಉನ್ನ 2023 ರಲ್ಲಿ ಆಸ್ಟ್ರೇಲಿಯಾ ವಿರುದ್ಧ (209 ರನ್), 2019 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ (208) ರನ್ ಚೇಸ್ ಮಾಡಿದ್ದು ದಾಖಲೆಯಾಗಿತ್ತು. ಇದೀಗ ಈ ಎಲ್ಲ ದಾಖಲೆಗಳನ್ನ ಭಾರತ ನುಚ್ಚುನೂರು ಮಾಡಿದೆ.
ಕೊನೇ ಓವರ್ ಥ್ರಿಲ್ಲರ್
ಇನ್ನೇನು ಗೆಲುವಿನ ಸನಿಹ ತಲುಪುತ್ತಿದೆ ಎನ್ನುವಾಗಲೇ ಟೀಂ ಇಂಡಿಯಾ ಸಂಕಷ್ಟಕ್ಕೆ ತುತ್ತಾಗಿತ್ತು. 12 ಎಸೆತಗಳಲ್ಲಿ 16 ರನ್ ಬೇಕಿದ್ದಾಗಲೇ ನಾಯಕ ಶ್ರೇಯಸ್ ಅಯ್ಯರ್ ಕ್ಯಾಚ್ ಕೊಟ್ಟು ಪೆವಿಲಿಯನ್ ಸೇರಿಕೊಂಡರು. ಕೊನೇ 6 ಎಸೆತಗಳಲ್ಲಿ 8 ರನ್ ಬೇಕಿದ್ದಾಗ ಸ್ಟ್ರೈಕ್ನಲ್ಲಿದ್ದ ನಮನ್ ಧೀರ್ ಮ್ಯಾಚ್ ಹೆನ್ರಿ ಅವರ ಬೌಲಿಂಗ್ಗೆ ಮೊದಲ ಎಸೆತವನ್ನೇ ಬೌಂಡರಿಗಟ್ಟಿದರು. 2ನೇ ಎಸೆತದಲ್ಲಿ 1 ರನ್ ಕದಿಯುವಲ್ಲಿ ಯಶಸ್ವಿಯಾದರು. ಇನ್ನೂ 3ನೇ ಎಸೆತದಲ್ಲಿ ನಿತೀಶ್ ಕುಮಾರ್ 1 ರನ್ ತಂದುಕೊಟ್ಟರು. ಮತ್ತೆ ಸ್ಟ್ರೈಕ್ಗೆ ಬಂದ ನಮನ್ 4ನೇ ಎಸೆತದಲ್ಲಿ ಸಿಕ್ಸರ್ ಬಾರಿಸುವ ಮೂಲಕ ಗೆಲುವು ತಂದುಕೊಟ್ಟರು.
ಇಲ್ಲಿನ ಹ್ಯಾಗ್ಲಿ ಓವಲ್ ಮೈದಾನದಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕಿವೀಸ್ 4 ವಿಕೆಟ್ ನಷ್ಟಕ್ಕೆ 225 ರನ್ ಗಳಿಸಿತ್ತು. ಬೃಹತ್ ಮೊತ್ತದ ಚೇಸಿಂಗ್ ಬೆನ್ನಟ್ಟಿದ ಟೀಂ ಇಂಡಿಯಾ 19.4 ಓವರ್ಗಳಲ್ಲೇ 230 ರನ್ ಸಿಡಿಸಿ ಗೆಲುವು ಸಾಧಿಸಿತು.
ಗೆಲ್ಲಲು ಬೃಹತ್ ಗುರಿ ಪಡೆದ ಭಾರತ ತಂಡಕ್ಕೆ ಅಭಿಷೇಕ್ ಶರ್ಮಾ ಮತ್ತು ಸಂಜು ಸ್ಯಾಮ್ಸನ್ ಅವರು ಅದ್ಭುತ ಆರಂಭ ಒದಗಿಸಿದರು. ಪವರ್ ಪ್ಲೇ ನ 6 ಓವರ್ ಮುಗಿಯುವುದರೊಳಗೆ ಇವರಿಬ್ಬರು 90 ರನ್ ಗಳನ್ನ ಬಾಚಿದ್ದು ಇನ್ನಿಂಗ್ಸ್ ಗೆ ದೊಡ್ಡ ಪ್ಲಸ್ ಪಾಯಿಂಟ್ ಆಯಿತು.
ಇವರಿಬ್ಬರು ಬೇರ್ಪಟ್ಟ ಬಳಿಕ ಭಾರತದ ವಿಕೆಟ್ ಗಳು ಒಂದರ ಮೇಲೊಂದು ಬಿದ್ದರೂ ಫಲಿತಾಂಶದ ಮೇಲೆ ಯಾವುದೇ ಪರಿಣಾಮ ಬೀರಲಿಲ್ಲ. ಒಂದು ಕಡೆ ವಿಕೆಟ್ ಬೀಳುತ್ತಿದ್ದರೂ ರನ್ ವೇಗ ಕಡಿಮೆಯಾಗಿರಲಿಲ್ಲ. ಮಧ್ಯಮ ಕ್ರಮಾಂಕದಲ್ಲಿ ಅಕ್ಷರ್ ಪಟೇಲ್ ಹಾಗೂ ಶ್ರೇಯಸ್ ಅಯ್ಯರ್ ಜೋಡಿ 24 ಎಸೆತಗಳಲ್ಲಿ 45 ರನ್ಗಳ ಜೊತೆಯಾಟ ನೀಡಿತು. ಅಕ್ಷರ್ ಸುಲಭ ಕ್ಯಾಚ್ಗೆ ತುತ್ತಾಗಿ ಹೊರನಡೆದ ಬಳಿಕ ನಮನ್ ಧೀರ್ – ಶ್ರೇಯಸ್ ಜೋಡಿ 23 ಎಸೆತಗಳಲ್ಲಿ 43 ರನ್ಗಳ ಜೊತೆಯಾಟ ನೀಡಿತು. ಇದು ತಂಡದ ಗೆಲುವಿನ ಹಾದಿ ಮತ್ತಷ್ಟು ಸುಲಭವಾಗಿಸಿತು.
ಟೀಂ ಇಂಡಿಯಾ ಪರ ಸಂಜು ಸ್ಯಾಮ್ಸನ್ 67 ರನ್ (33 ಎಸೆತ, 4 ಸಿಕ್ಸರ್, 8 ಬೌಂಡರಿ), ನಮನ್ ಧೀರ್ 15 ಎಸೆತಗಳಲ್ಲಿ ಸ್ಫೋಟಕ 42 ರನ್ (2 ಸಿಕ್ಸರ್, 5 ಬೌಂಡರಿ), ಶ್ರೇಯಸ್ ಅಯ್ಯರ್ 28 ಎಸೆತಗಳಲ್ಲಿ 42 ರನ್, ಅಭಿಷೇಕ್ ಶರ್ಮಾ 12 ಎಸೆತಗಳಲ್ಲಿ 29 ರನ್, ಅಕ್ಷರ್ 14 ಎಸೆತಗಳಲ್ಲಿ 24 ರನ್, ಇಶಾನ್ ಕಿಶನ್ 1 ರನ್, ತಿಲಕ್ 6 ರನ್, ನಿತೀಶ್ 2 ರನ್ ಕೊಡುಗೆ ನೀಡಿದರು.
ಫ್ಲೈಯಿಂಗ್ ಫಿಲಿಪ್ಸ್ ಬ್ಯಾಟಿಂಗ್ನಲ್ಲಿ ಅಬ್ಬರ
ಇದಕ್ಕೂ ಮುನ್ನ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಕಿವೀಸ್ ಮೊದಲ ಎರಡು ಓವರ್ ನಿಧಾನಗತಿಯ ಬ್ಯಾಟಿಂಗ್ ನಡೆಸಿತ್ತು, ಬಳಿಕ ಆರಂಭಿಕ ಜೋಡಿ ಸ್ಫೋಟಕ ಪ್ರದರ್ಶನಕ್ಕೆ ಮುಂದಾಯಿತು. ಫಿನ್ ಅಲೆನ್ 24 ಎಸೆತಗಳಲ್ಲಿ 45 ರನ್, ಟಿಮ್ ಸೈಫರ್ಟ್ 24 ರನ್, ಡೇರಿಲ್ ಮಿಚೆಲ್ 28 ರನ್, ಬೆವೊನ್ ಜಾಕೋಬ್ ಸ್ಫೋಟಕ 31 ರನ್ ಚಚ್ಚಿದ್ರೆ, ಗ್ಲೆನ್ ಫಿಲಿಪ್ಸ್ 82 ರನ್ (40 ಎಸೆತ, 8 ಬೌಂಡರಿ, 3 ಸಿಕ್ಸರ್) ಸಿಡಿಸಿ ಅಜೇಯರಾಗುಳಿದರು. ಮೈಕಲ್ ಬ್ರೇಸ್ವೆಲ್ 7 ರನ್ ಕೊಡುಗೆ ನೀಡಿದರು.
ಟೀಂ ಇಂಡಿಯಾ ಪರ ಅರ್ಷ್ದೀಪ್ ಸಿಂಗ್, ಮಯಾಂಕ್ ಯಾದವ್, ಅಕ್ಷರ್ ಪಟೇಲ್ ತಲಾ ಒಂದೊಂದು ವಿಕೆಟ್ ಪಡೆದರು.


