ನವದೆಹಲಿ: ಇತ್ತೀಚೆಗೆ ದಿಲ್ಲಿಯಲ್ಲಿ ನಡೆದ ಪ್ರತಿಭಟನೆಗಳ ಛಾಯಾಚಿತ್ರಗಳನ್ನು (Photo Exhibition) ತಮ್ಮ ಏಕವ್ಯಕ್ತಿ ಪ್ರದರ್ಶನದಿಂದ ತೆಗೆದುಹಾಕುವಂತೆ ಸೂಚಿಸಲಾಗಿದೆ ಎಂದು ಆರೋಪಿಸಿದ್ದ ಮಗ ರೈಹಾನ್ ವಾದ್ರಾ ಪರವಾಗಿ ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ (Priyanka Gandhi) ವಾದ್ರಾ ಧ್ವನಿ ಎತ್ತಿದ್ದಾರೆ.
.@raihanrvadra
When someone with power becomes afraid of the expression of another, he doesn’t know it, but he has already lost the very power he is trying to protect.
You stand for what is true and everything beautiful will find its way to you.
I am proud of you, always will be.
❤️ mama
— Priyanka Gandhi Vadra (@priyankagandhi) October 22, 2026
ಇಂದು (ಗುರುವಾರ) ತಮ್ಮ ಸೋಷಿಯಲ್ ಮೀಡಿಯಾ ಎಕ್ಸ್ ಖಾತೆಯಲ್ಲಿ ಭಾವನಾತ್ಮಕ ಸಂದೇಶ ಹಂಚಿಕೊಂಡಿರುವ ಅವರು, ನನ್ನ ಮಗನ ಬಗ್ಗೆ ಯಾವಾಗಲೂ ಹೆಮ್ಮೆ ಪಡುತ್ತೇನೆ. ನೀನು ಸತ್ಯದ ಪರವಾಗಿ ನಿಲ್ಲು, ಆಗ ಸುಂದರವಾದದ್ದೆಲ್ಲವೂ ನಿನ್ನನ್ನ ಹುಡುಕಿಕೊಂಡು ಬರುತ್ತದೆ ಅಂತ ಬರೆದುಕೊಂಡಿದ್ದಾರೆ.
ಮುಂದುವರಿದು… ಅಧಿಕಾರದಲ್ಲಿರುವ ವ್ಯಕ್ತಿಯೊಬ್ಬರು ಮತ್ತೊಬ್ಬರ ಅಭಿವ್ಯಕ್ತಿಗೆ ಹೆದರಿದಾಗ, ತಾವು ರಕ್ಷಿಸಲು ಪ್ರಯತ್ನಿಸುತ್ತಿರುವ ಅಧಿಕಾರವನ್ನ ಈಗಾಗಲೇ ಕಳೆದುಕೊಂಡಿದ್ದಾರೆ ಎಂಬುದು ಅವರಿಗೆ ತಿಳಿದಿರುವುದಿಲ್ಲ ಎಂದು ಬರೆದುಕೊಂಡಿದ್ದಾರೆ. ಇದರೊಂದಿಗೆ ಹಾರ್ಟ್ ಎಮೋಜಿಯನ್ನ ಹಂಚಿಕೊಂಡಿರುವ ಪ್ರಿಯಾಂಕಾ ಗಾಂಧಿ, ನಿನ್ನ ಬಗ್ಗೆ ನನಗೆ ಹೆಮ್ಮೆ ಇದೆ. ಯಾವಾಗಲೂ ಹೆಮ್ಮೆಪಡುತ್ತೇನೆ ಎಂದು ಬರೆದುಕೊಂಡಿದ್ದಾರೆ.
ಏನಿದು ರೈಹಾನ್ ಛಾಯಾಚಿತ್ರ ಪ್ರದರ್ಶನ ವಿವಾದ?
ಛಾಯಾಗ್ರಾಹಕ ಹಾಗೂ ಕಲಾವಿದನೂ ಆಗಿರುವ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಪುತ್ರ ರೈಹಾನ್ (Raihan Vadra), ಛಾಯಾಚಿತ್ರ ಪ್ರದರ್ಶನದಿಂದ ಬುಧವಾರ (ಅ.21) ವಿವಾದ ಸೃಷ್ಟಿಯಾಗಿತ್ತು. ದೆಹಲಿಯ ಬಿಕಾನೇರ್ ಹೌಸ್ ಆಡಳಿತ ಮಂಡಳಿಯು ಇತ್ತೀಚಿನ ಪ್ರತಿಭಟನೆಗಳಿಗೆ ಸಂಬಂಧಿಸಿದ ಹಲವು ಛಾಯಾಚಿತ್ರಗಳನ್ನ ಪ್ರದರ್ಶನದಿಂದ ತೆಗೆದುಹಾಕುವಂತೆ ಸೂಚಿಸಿದೆ ಎಂದು ಅವರು ಆರೋಪಿಸಿದ್ದರು. ‘ನೋ ಐಡಿಯಾ ಇಸ್ ಫೈನಲ್’ (No Idea is Final) ಎಂಬ ಶೀರ್ಷಿಕೆಯ ಈ ಪ್ರದರ್ಶನದ ಪೂರ್ವವೀಕ್ಷಣೆ ಬುಧವಾರ ನಡೆದಿದ್ದು, ಗುರುವಾರದಿಂದ ಸಾರ್ವಜನಿಕರ ವೀಕ್ಷಣೆಗೆ ತೆರೆಯಲಾಗಿತ್ತು.
ರೈಹಾನ್ ಅವರ ಪ್ರಕಾರ, ಬುಧವಾರ ಮಧ್ಯಾಹ್ನ ಸುಮಾರು 3.30ಕ್ಕೆ ಛಾಯಾಚಿತ್ರಗಳನ್ನು ತೆಗೆದುಹಾಕುವಂತೆ ಸೂಚಿಸಲಾಗಿತ್ತು. ಸಂಜೆ 5 ಗಂಟೆಯೊಳಗೆ ಚಿತ್ರಗಳನ್ನು ತೆಗೆಯದಿದ್ದರೆ ಪ್ರದರ್ಶನವನ್ನೇ ರದ್ದುಗೊಳಿಸುವುದಾಗಿ ಎಚ್ಚರಿಕೆ ನೀಡಲಾಗಿತ್ತು. ಆದರೆ, ಪ್ರದರ್ಶನದ ವಿವರವಾದ ಪ್ರಸ್ತಾವನೆ ಹಾಗೂ ವಿನ್ಯಾಸವನ್ನು ಮುಂಚಿತವಾಗಿಯೇ ಬಿಕಾನೇರ್ ಹೌಸ್ ಆಡಳಿತಕ್ಕೆ ಸಲ್ಲಿಸಲಾಗಿತ್ತು ಎಂದು ಅವರು ತಿಳಿಸಿದ್ದಾರೆ.
ಈ ಬಗ್ಗೆ ಮಾಧ್ಯಮಗಳೊಂದಿಗೂ ಮಾತನಾಡಿದ್ದ ರೈಹಾನ್, ನನ್ನ ಫೋಟೋಗಳು ಯಾವುದೇ ರಾಜಕೀಯ ಸಂದೇಶ ಸಾರುವ ಉದ್ದೇಶ ಹೊಂದಿರಲಿಲ್ಲ. ಕಳೆದ 6 ತಿಂಗಳ ಅವಧಿಯಲ್ಲಿ ನಡೆದ ಪ್ರತಿಭಟನೆಗಳನ್ನ ದಾಖಲಿಸುವ ಪ್ರಯತ್ನವಷ್ಟೇ ಆಗಿತ್ತು. ಆದ್ರೂ ಚಿತ್ರಗಳನ್ನು ತೆಗೆದುಹಾಕದಿದ್ದರೆ ಸಂಜೆ 5 ಗಂಟೆಯೊಳಗೆ ಪ್ರದರ್ಶನವನ್ನು ರದ್ದುಗೊಳಿಸಲಾಗುತ್ತದೆ ಎಂದು ನನಗೆ ತಿಳಿಸಿದರು. ಇಂತಹ ಚಿತ್ರಗಳನ್ನ ಪ್ರದರ್ಶಿಸಲು ಇದು ಸರಿಯಾದ ಸಮಯವಲ್ಲ ಎಂದು ಅವರು ಹೇಳಿದರು. ನಾನು ಈಗ ಪ್ರದರ್ಶನ ಮಾಡುತ್ತಿದ್ದೇನೆ ಎಂಬ ಕಾರಣಕ್ಕಷ್ಟೇ ಅಲ್ಲ, ಭಾರತೀಯ ಕಲಾವಿದನಾಗಿ ನಡೆಯುತ್ತಿರುವ ಘಟನೆಗಳನ್ನು ದಾಖಲಿಸುವುದು ನನ್ನ ಕರ್ತವ್ಯ ಎಂದು ಭಾವಿಸಿದ್ದೇನೆ. ಕಲಾವಿದರ ಕೃತಿಗಳಿಗೆ ಸೆನ್ಸಾರ್ ವಿಧಿಸಲಾಗುತ್ತಿದೆ. ಅವರಿಗೆ ಯಾವುದರ ಭಯವಿದೆ ಎಂಬುದು ನನಗೆ ತಿಳಿದಿಲ್ಲ. ಕೊನೆಗೆ ಭಾರತದ ಧ್ವಜದ ಚಿತ್ರವನ್ನೂ ತೆಗೆದುಹಾಕುವ ಹಂತಕ್ಕೆ ಅವರು ಹೋದರು ಎಂದು ಆರೋಪಿಸಿದ್ರು,.
ಬಿಕಾನೇರ್ ಹೌಸ್ ಆಡಳಿತ ಮಂಡಳಿ ಈ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದೆ.

