ಗದಗ: ಕಡಲೆ ಮಾರಾಟ ವಿಷಯಕ್ಕೆ ಸ್ನೇಹಿತನಿಗೆ ವಂಚಿಸಿ ಕೊಲೆ ಮಾಡಿದ ಘಟನೆ ಗದಗ (Gadag) ಜಿಲ್ಲೆಯ ನರಗುಂದ ತಾಲೂಕಿನ ಸುರಕೋಡ ಗ್ರಾಮದಲ್ಲಿ ನಡೆದಿದೆ.
62 ವರ್ಷದ ದ್ಯಾಮಪ್ಪ ಗೊಜನೂರು ಕೊಲೆಯಾದ ಮೃತ ದುರ್ದೈವಿ. ಶರಣಪ್ಪ ನರಗುಂದ ಎಂಬ ಸ್ನೇಹಿತ ಕೊಲೆ ಆರೋಪಿ. ಕೊಲೆಯಾಗಿ 12 ದಿನಗಳ ನಂತರ ಸುಳಿವು ಸಿಕ್ಕಿದೆ.
ದ್ಯಾಮಪ್ಪ ಮತ್ತು ಶರಣಪ್ಪ ಇಬ್ಬರೂ ಸ್ನೇಹಿತರಾಗಿದ್ದರು. 45 ಕ್ವಿಂಟಾಲ್ ಕಡಲೆಯೇ ದ್ಯಾಮಪ್ಪನ ಕೊಲೆಗೆ ಕಾರಣ ಎಂಬುದು ತನಿಖೆಯಲ್ಲಿ ತಿಳಿದುಬಂದಿದೆ. ಸದ್ಯಕ್ಕೆ ಕಡಲೆ ಬೆಲೆ ಕುಸಿತವಾಗಿದೆ. ಮುಂದೆ ರೇಟ್ ಬಂದಾಗ ಮಾರಾಟ ಮಾಡಿದರಾಯಿತು ಅಂದುಕೊಂಡು ದ್ಯಾಮಪ್ಪ, ತನ್ನ ಸ್ನೇಹಿತನ ಹೆಸರಿನಲ್ಲಿ ಗೋಡೌನ್ನಲ್ಲಿ ಸ್ಟಾಕ್ ಇರಿಸಿದ್ದ. ಆದರೆ, ಮಾಲೀಕ ದ್ಯಾಮಪ್ಪನಿಗೆ ಗೊತ್ತಿಲ್ಲದಂತೆ ಶರಣಪ್ಪ ಕಡಲೆ ಮಾರಾಟ ಮಾಡಿದ್ದ. ಕಡಲೆಯಿಂದ ಬಂದ 2 ಲಕ್ಷ 80 ಸಾವಿರ ದುಡ್ಡನ್ನ ತನ್ನ ಸ್ವಂತ ಖರ್ಚಿಗಾಗಿ ಶರಣಪ್ಪ ಬಳಸಿಕೊಂಡಿದ್ದ. ಇನ್ನೊಂದು ವಾರದಲ್ಲಿ ಕಡಲೆ ಮಾರಾಟ ಮಾಡಿದರಾಯಿತು ಅಂತ ದ್ಯಾಮಪ್ಪ ಅಂದುಕೊಂಡಿದ್ದ.
ಕಡಲೆ ಮಾರಾಟ ಮಾಡಿದ ವಿಚಾರ ಗೊತ್ತಾಗುತ್ತೆ ಎನ್ನುವ ಕಾರಣಕ್ಕೆ ಸ್ನೇಹಿತನನ್ನು ಹೊಲಕ್ಕೆ ಕರೆದುಕೊಂಡು ಹೋಗಿ ಶರಣಪ್ಪ ಕೊಲೆ ಮಾಡಿದ್ದಾನೆ.ಇದನ್ನೂ ಓದಿ: ಬ್ಲೂ ಡ್ರಮ್ ಕೊಲೆ ಕೇಸ್ – ಜೈಲಿನಲ್ಲಿರೋ ಮುಸ್ಕಾನ್ ಮಗುವನ್ನ ದತ್ತು ಪಡೆಯಲು ಮುಂಬೈ ಇನ್ಫ್ಲುಯೆನ್ಸರ್ ಅರ್ಜಿ
ಅ. 8ರಂದು ನರಗುಂದಕ್ಕೆ ಹೋಗಿ ಬರ್ತಿನಿ ಅಂತಾ ದ್ಯಾಮಪ್ಪ ಮನೆಯಿಂದ ತೆರಳಿದ್ದ. ಎರಡು ದಿನಗಳಾದ್ರೂ ಮರಳಿ ಮನೆಗೆ ಬರಲಿಲ್ಲ. ಅ. 10 ರಂದು ಕುಟುಂಬಸ್ಥರು ನರಗುಂದ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದರು. ಶರಣಪ್ಪ ಜೊತೆ ಕೊನೆ ಬಾರಿ ಬೈಕ್ನಲ್ಲಿ ದ್ಯಾಮಪ್ಪನನ್ನು ಹೊಲಕ್ಕೆ ಕರೆದುಕೊಂಡು ಹೋಗಿದ್ದ.
ಭೈರನಹಟ್ಟಿ ಗ್ರಾಮದ ಬಳಿ ಕೊಡಲಿಯಿಂದ ತಲೆ, ಕುತ್ತಿಗೆ ಭಾಗಕ್ಕೆ ಹೊಡೆದು ಹತ್ಯೆ ಮಾಡಿದ್ದಾನೆ. ನಂತರ ರಾತ್ರಿ ಸೋಮಾಪುರದ ಉಪ ಕಾಲುವೆ ಪೈಪ್ ಬಳಿ ಶವ ತೆಗೆದುಕೊಂಡು ಹೋಗಿ ಮುಚ್ಚಿಟ್ಟಿದ್ದಾನೆ. ಪೊಲೀಸ್ ತನಿಖೆ ವೇಳೆ ಆರೋಪಿ ಶರಣಪ್ಪ ಸತ್ಯ ಬಾಯಿ ಬಿಟ್ಟಿದ್ದಾನೆ. ಕೊಲೆಗಾರನನ್ನ ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಇದನ್ನೂ ಓದಿ: ಬಿನ್ ಲಾಡೆನ್ ಇದ್ದಂತೆಯೇ, ದಾವೂದ್ ಕೂಡ ಪಾಕ್ನಲ್ಲಿದ್ದಾನೆ: ಭಾರತ ಸ್ಪಷ್ಟನೆ
