ಮುಂಬೈ: ಇಲ್ಲಿನ ಜುಹು ಪ್ರದೇಶದಲ್ಲಿ ಭಾನುವಾರ ಸಂಜೆ ಫುಟ್ಬಾಲ್ ಮೈದಾನದಿಂದ ಹೊರಡುತ್ತಿದ್ದ ಬಾಲಿವುಡ್ ನಟ ಟೈಗರ್ ಶ್ರಾಫ್ (Tiger Shroff) ಅವರ ಕಾರಿನ ಮೇಲೆ ಬೈಕ್ನಲ್ಲಿ ಬಂದ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ. ಶೂಟೌಟ್ ಬಳಿಕ ಟೈಗರ್ ಶ್ರಾಫ್ ಅವರ ಮೊದಲ ಫೋಟೊ ಹಂಚಿಕೊಳ್ಳಲಾಗಿದ್ದು, ಸಣ್ಣಪುಟ್ಟ ಗಾಯಗಳಾಗಿರುವುದು ಕಂಡುಬಂದಿದೆ.
ಫೋಟೋದಲ್ಲಿ ಶ್ರಾಫ್ ಬಲಗೈಗೆ ಬ್ಯಾಂಡೇಜ್ ಕಟ್ಟಿರುವುದು ಹಾಗೂ ಭುಜ ಮತ್ತು ಎದೆಯ ಭಾಗದಲ್ಲಿ ಡ್ರೆಸ್ಸಿಂಗ್ (ಗಾಯದ ಮೇಲೆ ಪಟ್ಟಿ) ಮಾಡಿರುವುದು ಕಂಡುಬಂದಿದೆ.
ಇನ್ನೂ ಈ ಘಟನೆಯ ನಂತರ, ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಏಕನಾಥ್ ಶಿಂಧೆ (Eknath Shinde) ಅವರು ಭಾನುವಾರ ತಡರಾತ್ರಿಯೇ ನಟನ ನಿವಾಸಕ್ಕೆ ಭೇಟಿ ನೀಡಿ, ಆರೋಗ್ಯ ವಿಚಾರಿಸಿದ್ದಾರೆ. ಈ ಘಟನೆಗೆ ಕಾರಣರಾದವರನ್ನ ಬಿಡುವುದಿಲ್ಲ ಎಂದು ನಟನಿಗೆ ಮತ್ತು ಅವರ ಕುಟುಂಬಕ್ಕೆ ಭರವಸೆ ನೀಡಿದ್ದಾರೆ.
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿರುವ ಡಿಸಿಎಂ ಶಿಂಧೆ, ಗನ್ ಪೌಡರ್ (ಬಂದೂಕಿನ ಮದ್ದು) ಮತ್ತು ಗಾಜಿನ ಚೂರುಗಳಿಂದ ಟೈಗರ್ ಅವರ ಬಲಗೈಗೆ ಗಾಯಗಳಾಗಿವೆ. ಇದು ಗಂಭೀರ ಘಟನೆ. 5 ಸುತ್ತು ಗುಂಡುಗಳನ್ನು ಹಾರಿಸಲಾಗಿದೆ, ಅದೃಷ್ಟವಶಾತ್ ಶ್ರಾಫ್ ಸುರಕ್ಷಿತವಾಗಿದ್ದಾರೆ. ಅವರ ಚಾಲಕನಿಗೆ ಗಾಯಗಳಾಗಿವೆ. ನಟ ಮತ್ತು ಅವರ ತಾಯಿ ಇಬ್ಬರೂ ತುಂಬಾ ಆತಂಕಕ್ಕೀಡಾಗಿದ್ದಾರೆ ಎಂದು ತಿಳಿಸಿದರು.
ಇಂತಹ ಗ್ಯಾಂಗ್ ವಾರ್ಗಳನ್ನ ಸಹಿಸುವುದಿಲ್ಲ ಮತ್ತು ಗುಂಡಿನ ದಾಳಿಯ ಹಿಂದೆ ಇರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ. ಇಂತಹ ಸಂದರ್ಭದಲ್ಲಿ ಸರ್ಕಾರ ಅವರೊಂದಿಗೆ ನಿಲ್ಲುತ್ತದೆ ಅಂತ ನಾನು ಭರವಸೆ ನೀಡಿದ್ದೇನೆ. 90ರ ದಶಕದಲ್ಲಿ ಇಂತಹ ಗ್ಯಾಂಗ್ ವಾರ್ಗಳು ಸಾಮಾನ್ಯವಾಗಿದ್ದವು, ಆದರೆ 1995ರಲ್ಲಿ ಮುಂಬೈ ಪೊಲೀಸರು ಅವುಗಳಿಗೆ ಅಂತ್ಯ ಹಾಡಿದ್ದರು. ಜನರನ್ನು ಬೆದರಿಸುವ ಇಂತಹ ಪ್ರಯತ್ನಗಳನ್ನು ಸಹಿಸುವುದಿಲ್ಲ, ಈ ಪುಂಡಾಟಿಕೆಗೆ ನಾವು ಅಂತ್ಯ ಹಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಏನಿದು ಘಟನೆ?
ಮುಂಬೈನ ಜುಹು ಪ್ರದೇಶದಲ್ಲಿ ಭಾನುವಾರ ಸಂಜೆ ಫುಟ್ಬಾಲ್ ಮೈದಾನದಿಂದ ಹೊರಡುತ್ತಿದ್ದ ಬಾಲಿವುಡ್ ನಟ ಟೈಗರ್ ಶ್ರಾಫ್ ಅವರ ಕಾರಿನ ಮೇಲೆ ಬೈಕ್ನಲ್ಲಿ ಬಂದ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ. ಮೋಟಾರ್ಸೈಕಲ್ನಲ್ಲಿ ಬಂದ ಮೂವರು ಅಪರಿಚಿತ ವ್ಯಕ್ತಿಗಳು ನಟನ ಮೇಲೆ ಗುಂಡು ಹಾರಿಸಿದ್ದಾರೆ. ಈ ಗುಂಡಿನ ದಾಳಿಯಲ್ಲಿ ಅವರ ಚಾಲಕ ಮತ್ತು ಆಟೋರಿಕ್ಷಾ ಚಾಲಕರೊಬ್ಬರಿಗೆ ಗಾಯಗಳಾಗಿವೆ. ಇಬ್ಬರನ್ನೂ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ದಾಳಿಗೆ ಬಳಸಿದ ಬೈಕ್ ವಶ
ಇನ್ನೂ ಘಟನೆ ಬಳಿಕ ಕೃತ್ಯಕ್ಕೆ ಬಳಸಲಾದ ಬೈಕ್ ಅನ್ನು ಮುಂಬೈ ಪೊಲೀಸರು ಅಂಧೇರಿಯಲ್ಲಿ ವಶಪಡಿಸಿಕೊಂಡಿದ್ದಾರೆ. ಆರೋಪಿಯು ಜುಹುವಿನಿಂದ ಅಂಧೇರಿಗೆ ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸಿ, ನಂತರ ರೈಲು ಹತ್ತಿದನೆಂದು ಪೊಲೀಸ್ ಮೂಲಗಳು ತಿಳಿಸಿವೆ.

