– ದಸರಾ ದೀಪಾಲಂಕಾರ 10 ದಿನ ವಿಸ್ತರಣೆ
ಬೆಂಗಳೂರು: ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ(HD Kumaraswamy) ಅವರ ಹೋರಾಟದ ಹೇಳಿಕೆಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ‘ಥಂಬ್ಸ್ ಅಪ್’ (Thumbs Up) ಸನ್ನೆ ಮೂಲಕವೇ ಪ್ರತಿಕ್ರಿಯೆ ನೀಡಿದ್ದಾರೆ.
ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಂದರ್ಭದಲ್ಲಿ, ‘ವಿಜಯದಶಮಿ ಬಳಿಕ ಸರ್ಕಾರದ ವಿರುದ್ಧ ಹೋರಾಟ ನಡೆಸುವುದಾಗಿ’ ಕುಮಾರಸ್ವಾಮಿ ನೀಡಿರುವ ಹೇಳಿಕೆಯ ಕುರಿತು ಸುದ್ದಿಗಾರರು ಪ್ರಶ್ನಿಸಿದರು. ಇದಕ್ಕೆ ನೇರವಾಗಿ ಯಾವುದೇ ಮಾತಿನ ಪ್ರತಿಕ್ರಿಯೆ ನೀಡದ ಡಿ.ಕೆ. ಶಿವಕುಮಾರ್(DK Shivakumar) ಕೇವಲ ‘ಥಂಬ್ಸ್ ಅಪ್’ ಸನ್ನೆ ಮಾಡಿ ಮುಗುಳ್ನಕ್ಕು ಮುನ್ನಡೆದರು. ಆ ಮೂಲಕ ಕುಮಾರಸ್ವಾಮಿ ಅವರ ಸವಾಲಿಗೆ ‘ಆಗಲಿ, ನೋಡೋಣ’ ಎಂಬ ಸಂದೇಶವನ್ನು ರವಾನಿಸಿದರು.
10 ದಿನ ವಿಸ್ತರಣೆ
ದಸರಾ ಕಾರ್ಯಕ್ರಮಗಳು ಹಾಗೂ ಮೈಸೂರಿನ ದೀಪಾಲಂಕಾರದ ಕುರಿತು ಮಾತನಾಡಿದ ಅವರು, “ದಸರಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಲೈಟಿಂಗ್ಸ್ ವೀಕ್ಷಿಸಿದ್ದೇನೆ. ನಿತ್ಯ ಲಕ್ಷಾಂತರ ಜನರು ಈ ಅದ್ಭುತ ದೀಪಾಲಂಕಾರವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ. ಹೀಗಾಗಿ ಸಾರ್ವಜನಿಕರ ಹಿತದೃಷ್ಟಿಯಿಂದ ಮೈಸೂರು ದಸರಾ ಲೈಟಿಂಗ್ಸ್ ಅನ್ನು ಇನ್ನೂ 10 ದಿನಗಳ ಕಾಲ ವಿಸ್ತರಿಸಲು ತೀರ್ಮಾನಿಸಿದ್ದೇವೆ” ಎಂದು ತಿಳಿಸಿದರು.
ಇದೇ ವೇಳೆ ಸಾಮಾಜಿಕ ಜಾಲತಾಣ ಬಳಕೆದಾರರಿಗೆ ಆಹ್ವಾನ ನೀಡಿದ ಅವರು, “ದಸರಾವನ್ನು ಕಣ್ತುಂಬಿಕೊಳ್ಳುವ ಪ್ರತಿಯೊಬ್ಬರೂ ಸೋಶಿಯಲ್ ಮೀಡಿಯಾದಲ್ಲಿ ರೀಲ್ಸ್ ಮಾಡಿ ಹಂಚಿಕೊಳ್ಳಿ. ದಸರಾ ಆರಂಭದಿಂದ ಅಂತ್ಯದವರೆಗೆ ನಿಮಗೆ ಏನೆಲ್ಲಾ ಇಷ್ಟವಾಯಿತೋ ಅದನ್ನು ರೀಲ್ಸ್ ಮಾಡಿ. ‘ಮೈಸೂರು ದಸರಾ- 2026’ ಎಂದು ಟ್ಯಾಗ್ ಮಾಡಲಾದ ಅತ್ಯುತ್ತಮ 100 ರೀಲ್ಸ್ಗಳಿಗೆ ಆಕರ್ಷಕ ಬಹುಮಾನಗಳನ್ನು ನೀಡಲಾಗುವುದು. ಈಗಾಗಲೇ ನಾನೂ ರೀಲ್ಸ್ ಮಾಡಿದ್ದೇನೆ, ನೀವೂ ಉತ್ತಮವಾಗಿ ರೀಲ್ಸ್ ಮಾಡಿ,” ಎಂದು ಕರೆ ನೀಡಿದರು.
ಕಂಬಳ ಕ್ರೀಡೆಯ ಮಹತ್ವವನ್ನು ವಿವರಿಸಿದ ಡಿ.ಕೆ. ಶಿವಕುಮಾರ್, “ವಿಜಯನಗರ ಅರಸರ ಕಾಲದಿಂದಲೂ ಕಂಬಳಕ್ಕೆ ವಿಶೇಷ ಇತಿಹಾಸವಿದೆ. ಕದ್ರಿ ಮಂಜುನಾಥನ ಸನ್ನಿಧಿಯಿಂದ ಆರಂಭಗೊಂಡ ಈ ಕ್ರೀಡೆಗೆ ಸುಮಾರು 800 ವರ್ಷಗಳ ಹಿನ್ನೆಲೆಯಿದೆ. ವಿಜಯನಗರ ಸಾಮ್ರಾಜ್ಯದಿಂದಲೇ ನಮಗೆ ದಸರಾ ಹಾಗೂ ಕಂಬಳದ ಪರಂಪರೆ ಬಂದಿದೆ. ಅಂದು ವಿಜೇತರಿಗೆ ತೆಂಗಿನಕಾಯಿ ಬಹುಮಾನವಾಗಿ ನೀಡಲಾಗುತ್ತಿತ್ತು, ಇಂದು ಚಿನ್ನದ ನಾಣ್ಯಗಳನ್ನು ನೀಡಲಾಗುತ್ತಿದೆ. ಕಂಬಳದ ಕೋಣವನ್ನು ಸಾಕಲು 15 ರಿಂದ 20 ಲಕ್ಷ ರೂ. ವೆಚ್ಚವಾಗಲಿದ್ದು, ಜನರು ತಮ್ಮ ಸ್ವಂತ ಮಕ್ಕಳಿಗಿಂತಲೂ ಹೆಚ್ಚಾಗಿ ಅವುಗಳನ್ನು ಪೋಷಿಸುತ್ತಾರೆ. ಪ್ರಸ್ತುತ ಕಂಬಳ ಕೂಟದಲ್ಲಿ ಪಾಲ್ಗೊಳ್ಳಲು 3 ಸಾವಿರಕ್ಕೂ ಹೆಚ್ಚು ಜನರು ಆಗಮಿಸಿದ್ದು, ಲಕ್ಷಾಂತರ ಮಂದಿ ಇದನ್ನು ವೀಕ್ಷಿಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸರ್ವಪಕ್ಷ ನಿಯೋಗ
ಬರಗಾಲದ ಪರಿಸ್ಥಿತಿ ಮತ್ತು ಪರಿಹಾರದ ಕುರಿತು ಪ್ರತಿಕ್ರಿಯಿಸಿದ ಅವರು, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ತಮ್ಮ ಮಟ್ಟದಲ್ಲಿ ಪ್ರಯತ್ನ ಪಟ್ಟಿದ್ದಾರೆ ಎಂಬ ವಿಶ್ವಾಸ ನನಗಿದೆ. ನಾನು ಸದ್ಯ ಕೇಂದ್ರ ಸರ್ಕಾರದ ವಿರುದ್ಧ ಯಾವುದೇ ರಾಜಕೀಯ ಟೀಕೆ ಮಾಡಲು ಹೋಗುವುದಿಲ್ಲ. ರಾಜಕಾರಣ ಮಾಡಲು ಬೇರೆ ಜನ ಇದ್ದಾರೆ, ಅದಕ್ಕೆಲ್ಲ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ರಾಜ್ಯದ ಬರಗಾಲದ ಕುರಿತು ಈಗಾಗಲೇ ವರದಿ ಸಲ್ಲಿಸಲಾಗಿದೆ. ವಿರೋಧ ಪಕ್ಷದ ನಾಯಕರೂ ಜತೆಗೆ ಬರಲು ಒಪ್ಪಿಕೊಂಡಿದ್ದು, ಶೀಘ್ರದಲ್ಲೇ ಸರ್ವಪಕ್ಷ ನಿಯೋಗವನ್ನು ದೆಹಲಿಗೆ ಕರೆದೊಯ್ಯಲಾಗುವುದು. ಇದು ಕೇವಲ ಒಂದು ರಾಜ್ಯದ ಸಮಸ್ಯೆಯಲ್ಲ, ಎಲ್ಲ ಕಡೆಯೂ ಇರುವುದರಿಂದ ಈ ವಿಚಾರದಲ್ಲಿ ರಾಜಕೀಯ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
