ಇಂಫಾಲ್: ಇಲ್ಲಿನ (Imphal) ನಾಂಗ್ಸುಮ್ ಬೆಟ್ಟಗಳ ಸಮೀಪವಿರುವ ಉಯುಂಪೋಕ್ನಲ್ಲಿ ಹಿಂಸಾಚಾರ (Manipur Violence) ಭುಗಿಲೆದ್ದಿದೆ. ಕಾಂಗ್ಪೋಕ್ಪಿ ಜಿಲ್ಲೆಯ ಗಡಿಯ ಸಮೀಪವಿರುವ ಪ್ರದೇಶಕ್ಕೆ ಸೌದೆ ಸಂಗ್ರಹಿಸಲು ಹೋಗಿದ್ದ ನಾಲ್ವರನ್ನು ದುಷ್ಕರ್ಮಿಗಳು ಹತ್ಯೆ ಮಾಡಿದ್ದಾರೆ. ಇದರಿಂದ ಸಿಟ್ಟಿಗೆದ್ದ ಸ್ಥಳೀಯರು ಶವಗಳನ್ನು ಸಿಎಂ ಯುಮ್ನಮ್ ಖೇಮ್ಚಂದ್ ಸಿಂಗ್ (Yumnam Khemchand Singh) ಅವರ ಮನೆ ಮುಂದೆ ಇರಿಸಿ ಪ್ರತಿಭಟನೆ ನಡೆಸಿದ್ದಾರೆ.
ಕುಕಿ ಬಂಡುಕೋರರು ಈ ದಾಳಿ ನಡೆಸಿದ್ದಾರೆ ಎಂದು ಶಂಕಿಸಲಾಗಿದೆ. ಈ ದಾಳಿಯಲ್ಲಿ ಮೂವರು ಸಾವನ್ನಪ್ಪಿದ್ದು, ಮೂವರು ಗಾಯಗೊಂಡಿದ್ದಾರೆ. ಈ ಘಟನೆಯಿಂದ ಶಾಂತವಾಗಿದ್ದ ಮೈತೈ-ಕುಕಿ ಸಮುದಾಯಗಳ ನಡುವಿನ ಉದ್ವಿಗ್ನತೆ ಮತ್ತೆ ಭುಗಿಲೇಳುವ ಆತಂಕವನ್ನು ಹುಟ್ಟುಹಾಕಿದೆ. ಇದನ್ನೂ ಓದಿ: ಮಣಿಪುರದಲ್ಲಿ ಮತ್ತೆ ಪ್ರಕ್ಷುಬ್ಧ: ಕಾಮ್ಜಾಂಗ್ನಲ್ಲಿ 15 ಮನೆಗಳಿಗೆ ಬೆಂಕಿ; ಗುಂಡಿನ ದಾಳಿಗೆ ಓರ್ವ ಬಲಿ
ಮೃತಪಟ್ಟವರನ್ನು ನಾಂಗ್ಶುಮ್ ಮಾಯೈ ಲೈಕೈಯ ಅರುಬಮ್ ರೋನಿಲ್ (35), ಲೈರೆನ್ಲಾಕ್ಪಮ್ ಇನೋಬಿ (44) ಮತ್ತು ಕ್ಷೇತ್ರಿಮಾಯುಮ್ ಸುಶೀಲ್ (32) ಎಂದು ಗುರುತಿಸಲಾಗಿದೆ. ಗಾಯಗೊಂಡ ಮೂವರನ್ನು ಮೈಸ್ನಮ್ ಸೋಮೆಂದ್ರೊ (55), ಬೋನ್ಸನ್ ಖಿಂಗ್ಡ್ರಾಮ್ (45) ಮತ್ತು ಎನ್ಗಾಂಗೊಮ್ ಸೂರಜ್ (22) ಎಂದು ಗುರುತಿಸಲಾಗಿದೆ. ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಶಾಸಕ ಥೋಕ್ಚೋಮ್ ಲೋಕೇಶ್ವರ್ ಸಿಂಗ್, ಅಧಿಕಾರಿಗಳು ತಕ್ಷಣ ಮಧ್ಯಪ್ರವೇಶಿಸಬೇಕು ಎಂದು ಆಗ್ರಹಿಸಿದ್ದಾರೆ. ಅಲ್ಲದೆ, ಈ ಪ್ರದೇಶದ ಸಮೀಪವಿರುವ ‘ಸಿನಾಯ್ ಕ್ಯಾಂಪ್’ (Sinai Camp) ಎಂಬ ‘ಸಸ್ಪೆನ್ಷನ್ ಆಫ್ ಆಪರೇಷನ್ಸ್’ (SoO – ಕಾರ್ಯಾಚರಣೆ ಸ್ಥಗಿತ ಒಪ್ಪಂದ) ಶಿಬಿರವನ್ನು ಅಲ್ಲಿಂದ ತೆರವುಗೊಳಿಸಬೇಕೆಂದು ಒತ್ತಾಯಿಸಿದ್ದಾರೆ.
ಅಸ್ಸಾಂ ರೈಫಲ್ಸ್ ಸಿಬ್ಬಂದಿ ಸೌದೆ ಸಂಗ್ರಹಿಸಲು ಹೋಗುವವರಿಗೆ ರಕ್ಷಣೆ ನೀಡುವುದಾಗಿ ಭರವಸೆ ನೀಡಿದ್ದರು. ಈ ದಾಳಿಯು, ಆ ಪ್ರದೇಶಕ್ಕೆ ತೆರಳುವ ನಾಗರಿಕರ ಸುರಕ್ಷತೆ ಮತ್ತು ಅಲ್ಲಿರುವ ಭದ್ರತಾ ವ್ಯವಸ್ಥೆ ಬಗ್ಗೆ ಗಂಭೀರ ಕಳವಳವನ್ನು ಉಂಟುಮಾಡಿದೆ ಎಂದು ಅವರು ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: ಟೈಗರ್ ಶ್ರಾಫ್ ಕಾರಿನ ಮೇಲೆ ಶೂಟೌಟ್ – ಆರೋಪಿಗಳ ಫಸ್ಟ್ ಫೋಟೋ ರಿಲೀಸ್
