– FIR ದಾಖಲು; ಆರೋಪಿಗಳ ಪತ್ತೆಗೆ ಹಲವು ತಂಡಗಳ ರಚನೆ
ಮುಂಬೈ: ಬಾಲಿವುಡ್ ನಟ ಟೈಗರ್ ಶ್ರಾಫ್ (Tiger Shroff) ಮುಂಬೈನ ಜುಹು ಪ್ರದೇಶದಲ್ಲಿ ಭಾನುವಾರ ಸಂಜೆ ಫುಟ್ಬಾಲ್ ಮೈದಾನದಿಂದ ಹೊರಡುತ್ತಿದ್ದ ವೇಳೆ ಗುಂಡಿನ ದಾಳಿ ನಡೆಸಿದ್ದ ಆರೋಪಿಗಳ ಮೊದಲ ಫೋಟೋ ಬಹಿರಂಗವಾಗಿದೆ. ಫೋಟೋದಲ್ಲಿ ಇಬ್ಬರು ಆರೋಪಿಗಳು ಬಿಳಿ ಬಣ್ಣದ ಶರ್ಟ್ ಧರಿಸಿರುವುದು ಕಂಡುಬಂದಿದ್ದು, ಅವರಲ್ಲಿ ಒಬ್ಬ ಟೋಪಿ ಧರಿಸಿದ್ದಾನೆ.
ಆರೋಪಿಗಳ ಗುರುತನ್ನುಪೊಲೀಸರು ಇನ್ನೂ ಬಹಿರಂಗಪಡಿಸಿಲ್ಲ. ಆದರೆ, ಅವರು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ನೊಂದಿಗೆ ಸಂಪರ್ಕ ಹೊಂದಿರುವ ಸಾಧ್ಯತೆಯಿದೆ ಎಂದು ಶಂಕಿಸಲಾಗಿದೆ. ದಾಳಿಯ ಹೊಣೆ ಹೊತ್ತುಕೊಂಡಿರುವುದಾಗಿ ಈ ಗ್ಯಾಂಗ್ನ ಹೆಸರಿನಲ್ಲಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಪೋಸ್ಟ್ ಪ್ರಕಟವಾಗಿತ್ತು. ಆದರೆ, ಆ ಪೋಸ್ಟ್ನ ಸತ್ಯಾಸತ್ಯತೆ ಕುರಿತು ಪೊಲೀಸರು ಪರಿಶೀಲಿಸುತ್ತಿದ್ದಾರೆ.
ಆರೋಪಿಗಳ ಪತ್ತೆಗೆ ಹಲವು ತಂಡಗಳ ರಚನೆ
ಗುಂಡಿನ ದಾಳಿ ನಡೆಸಿದ ಆರೋಪಿಗಳನ್ನ ಬಂಧಿಸಲು ಪೊಲೀಸರು ಹಲವು ತಂಡಗಳನ್ನ ರಚಿಸಿದ್ದಾರೆ. ಪ್ರಕರಣವನ್ನ ಎಲ್ಲ ಆಯಾಮಗಳಿಂದಲೂ ತನಿಖೆ ನಡೆಸಲಾಗುತ್ತಿದೆ. ಆರೋಪಿಗಳ ಬಗ್ಗೆ ಹೆಚ್ಚಿನ ಮಾಹಿತಿ ಕಲೆಹಾಕಲು ಸಿಸಿಟಿವಿ ದೃಶ್ಯಾವಳಿಗಳನ್ನ ಪರಿಶೀಲಿಸಲಾಗುತ್ತಿದೆ. ಘಟನಾ ಸ್ಥಳದಿಂದ ವಿಧಿವಿಜ್ಞಾನ ತಂಡವು ಸಾಕ್ಷ್ಯಗಳನ್ನು ಸಂಗ್ರಹಿಸಿದೆ.
ದಾಳಿಯ ವೇಳೆ ನಿಖರವಾಗಿ ಎಷ್ಟು ಸುತ್ತು ಗುಂಡು ಹಾರಿಸಲಾಗಿದೆ ಎಂಬುದನ್ನ ಪತ್ತೆಹಚ್ಚುವ ಪ್ರಯತ್ನವೂ ನಡೆಯುತ್ತಿದೆ. ಈ ಸಂಬಂಧ ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 109(1) (ಕೊಲೆ ಯತ್ನ) ಮತ್ತು 3(5) (ಸಾಮಾನ್ಯ ಉದ್ದೇಶ) ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.

