- ಸಕ್ಕರೆ ಇಳುವರಿ ತಪಾಸಣೆ, ತೂಕದ ಯಂತ್ರಗಳ ಪರಿಶೀಲನೆ ಹಾಗೂ ಯಂತ್ರ ಕೊಯ್ಲಿನ ಕಡಿತ ಮರುಪರಿಶೀಲನೆಗೆ ಒತ್ತಾಯ
ಹುಬ್ಬಳ್ಳಿ: ರಾಜ್ಯದ ಕಬ್ಬು ಬೆಳೆಗಾರರ ಹಿತರಕ್ಷಣೆಗೆ ರಾಜ್ಯ ಸಲಹಾ ಬೆಲೆ (SAP) ಜಾರಿಗೊಳಿಸುವುದು ಸೇರಿದಂತೆ ವಿವಿಧ ಪರಿಹಾರ ಕ್ರಮಗಳನ್ನು ಕೈಗೊಳ್ಳುವಂತೆ ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಹ್ಲಾದ್ ಜೋಶಿ (Pralhad Joshi) ಅವರು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ (D.K.Shivakumar) ಅವರಿಗೆ ಪತ್ರ ಬರೆದಿದ್ದಾರೆ.
ಅಕ್ಟೋಬರ್ 12ರಂದು ದೆಹಲಿಯಲ್ಲಿ ಕಬ್ಬು ಬೆಳೆಗಾರರು ಮತ್ತು ರೈತ ಪ್ರತಿನಿಧಿಗಳೊಂದಿಗೆ ನಡೆದ ಸಭೆಯಲ್ಲಿ ಅವರ ಸಮಸ್ಯೆ ಹಾಗೂ ಅಹವಾಲುಗಳನ್ನು ಆಲಿಸಿದ್ದ ಸಚಿವರು, ಇದೀಗ ರಾಜ್ಯ ಸರ್ಕಾರ ತಕ್ಷಣ ಸ್ಪಂದಿಸುವಂತೆ ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಟನ್ ಕಬ್ಬಿಗೆ 1 ಸಾವಿರ ರೂ. ಪ್ರೋತ್ಸಾಹಧನ ಘೋಷಿಸಿ – ರಾಜ್ಯ ಸರ್ಕಾರದ ವಿರುದ್ಧ ತಿರುಗಿಬಿದ್ದ ರೈತರು
ಕಬ್ಬು ಬೆಳೆಗಾರರ ಸಮಸ್ಯೆಗಳ ಅಧ್ಯಯನಕ್ಕೆ ಕೇಂದ್ರ ಸರ್ಕಾರ ಜಂಟಿ ಸಮಿತಿ ರಚಿಸಿದ ಬೆನ್ನಲ್ಲೇ, ರೈತ ಮುಖಂಡರ ಮನವಿ ಆಧರಿಸಿ ಮುಖ್ಯಮಂತ್ರಿಗೆ ಪತ್ರ ಬರೆದಿದ್ದಾರೆ.
ರೈತರ ಬೇಡಿಕೆಗಳಿಗೆ ತಕ್ಷಣ ಸ್ಪಂದಿಸಲು ಆಗ್ರಹ
ಸಕ್ಕರೆ ಇಳುವರಿಯ ಸ್ವತಂತ್ರ ತಪಾಸಣೆ ನಡೆಸುವುದು, ತೂಕದ ಯಂತ್ರಗಳ ಪಾರದರ್ಶಕ ಪರಿಶೀಲನೆ ಕೈಗೊಳ್ಳುವುದು ಹಾಗೂ ಯಂತ್ರಗಳ ಮೂಲಕ ಕಬ್ಬು ಕೊಯ್ಲು ಮಾಡುವಾಗ ವಿಧಿಸಲಾಗುತ್ತಿರುವ ಶೇ.8ರಷ್ಟು ಕಡಿತವನ್ನು ಮರುಪರಿಶೀಲಿಸುವಂತೆ ಪತ್ರದಲ್ಲಿ ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಸರ್ಕಾರಿ ಕೆಲಸದ ಅವಧಿಯನ್ನ 10-15 ವರ್ಷಕ್ಕೆ ಲಿಮಿಟ್ ಮಾಡಿದ್ರೆ ಹೇಗೆ? – ವಿದ್ಯಾರ್ಥಿಗಳ ಅಭಿಪ್ರಾಯ ಕೇಳಿದ ಹೆಚ್ಡಿಕೆ
ಇದರ ಜೊತೆಗೆ ರಾಜ್ಯ ಸಲಹಾ ಬೆಲೆ (SAP) ಘೋಷಿಸುವ ಮೂಲಕ ಕಬ್ಬು ಬೆಳೆಗಾರರ ಹಿತ ಕಾಪಾಡಬೇಕು ಹಾಗೂ ರೈತರ ಇತರ ಬೇಡಿಕೆಗಳಿಗೆ ರಾಜ್ಯ ಸರ್ಕಾರ ತಕ್ಷಣ ಸ್ಪಂದಿಸಬೇಕು ಎಂದು ಜೋಶಿ ಮುಖ್ಯಮಂತ್ರಿ ಅವರಿಗೆ ಮನವಿ ಮಾಡಿದ್ದಾರೆ.

