ಚಾಮರಾಜನಗರ: ವೈವಿಧ್ಯಮಯ ಕಾರ್ಯಕ್ರಮಗಳ ಮೂಲಕ ಗಡಿಜಿಲ್ಲೆ ಚಾಮರಾಜನಗರದಲ್ಲಿ ದಸರಾ (Chamarajanagara Dasara) ಸಂಭ್ರಮ ಮೊದಲ ದಿನವೇ ಕಳೆಗಟ್ಟಿದೆ. ನಾಲ್ಕು ದಿನಗಳ ಕಾಲ ನಡೆಯಲಿರುವ ಚಾಮರಾಜನಗರ ದಸರಾಗೆ ಅದ್ಧೂರಿ ಚಾಲನೆ ಸಿಕ್ಕಿದೆ. ಮೊದಲ ದಿನವೇ ಹೆಲಿಟೂರಿಸಂ, ಶ್ವಾನ ಪ್ರದರ್ಶನ, ಫಲಪುಷ್ಪ ಪ್ರದರ್ಶನ ಹಾಗೂ ರೈತ ದಸರಾ ಗಮನ ಸೆಳೆದಿವೆ. ಬಾನಂಗಳದಿಂದ ಜಿಲ್ಲೆಯ ಸೌಂದರ್ಯ ಸವಿದ ಜನರು ಖುಷಿಯಾಗಿದ್ರೆ, ವಿವಿಧ ಸ್ಪರ್ಧೆಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜನರನ್ನು ಸೆಳೆಯುತ್ತಿವೆ.
ಮೈಸೂರು ದಸರಾಗೆ ತನ್ನದೇ ಆದ ಐತಿಹಾಸಿಕ ಹಿನ್ನೆಲೆ ಇದೆ. ಚಾಮರಾಜನಗರ ದಸರಾಕ್ಕೂ ಮೈಸೂರು ಅರಮನೆ ಜೊತೆ ಅವಿನಾಭಾವ ನಂಟಿದೆ. ಖಾಸಾ ಚಾಮರಾಜೇಂದ್ರ ಒಡೆಯರ್ ಜನಿಸಿದ್ದು, ಇದೇ ಅರಿಕೊಠಾರದಲ್ಲಿ. ಇದರ ನೆನಪಿಗಾಗಿ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರು ಅರಿಕೊಠಾರ ಎಂಬ ಹೆಸರು ಅಳಿಸಿ ಚಾಮರಾಜನಗರ ಎಂದು ನಾಮಕರಣ ಮಾಡಿ ಇಲ್ಲಿ ಜನನ ಮಂಟಪ ನಿರ್ಮಿಸಿದ್ದರು. ಜೊತೆಗೆ ಚಾಮರಾಜೇಶ್ವರ ದೇವಾಲಯವನ್ನೂ ಕಟ್ಟಿಸಿದ್ದರು. ಈ ಹಿನ್ನೆಲೆಯಲ್ಲೇ 2013-14ರಿಂದ ಚಾಮರಾಜನಗರದಲ್ಲೂ ದಸರಾ ಕಾರ್ಯಕ್ರಮಗಳು ನಡೆಯುತ್ತಿವೆ. ಕಳೆದ ವರ್ಷ ಅನುದಾನದ ಕೊರತೆಯಿಂದ ದಸರಾ ರದ್ದಾಗಿತ್ತು. ಆದರೆ, ಈ ಬಾರಿ ಕಲಾವಿದರು ಹಾಗೂ ಸಾರ್ವಜನಿಕರ ಒತ್ತಾಯಕ್ಕೆ ಮಣಿದ ಸರ್ಕಾರ ದಸರಾ ಆಚರಣೆಗೆ ಗ್ರೀನ್ ಸಿಗ್ನಲ್ ನೀಡಿದೆ. ನಾಲ್ಕು ದಿನಗಳ ದಸರಾ ಸಂಭ್ರಮಕ್ಕೆ ಇಂದು ಅದ್ಧೂರಿ ಚಾಲನೆ ಸಿಕ್ಕಿದೆ. ಇದನ್ನೂ ಓದಿ: ಈ ಬಾರಿ ಅಂಬಾರಿ ಹೊರಲಿದ್ದಾನೆ ಪ್ರಶಾಂತ
ಈ ಬಾರಿಯ ಚಾಮರಾಜನಗರ ದಸರಾದ ಪ್ರಮುಖ ಆಕರ್ಷಣೆ ಎಂದರೆ ಹೆಲಿಟೂರಿಸಂ. ಹೆಲಿಕಾಪ್ಟರ್ನಲ್ಲಿ ಹಾರಾಟ ನಡೆಸಿ ಬಾನಂಗಳದಿಂದ ಚಾಮರಾಜನಗರ ಜಿಲ್ಲೆಯ ನೈಸರ್ಗಿಕ ಸೌಂದರ್ಯವನ್ನು ಕಣ್ತುಂಬಿಕೊಳ್ಳುವ ಅವಕಾಶ ಪ್ರವಾಸಿಗರಿಗೆ ಸಿಕ್ಕಿದೆ. ಇದೇ ಮೊದಲ ಬಾರಿಗೆ ಆಯೋಜಿಸಿರುವ ಹೆಲಿಟೂರಿಸಂಗೆ ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ ಹೆಲಿರೈಡ್ ಮಾಡುವ ಮೂಲಕ ಚಾಲನೆ ನೀಡಿದರು. ಬಳಿಕ ಸಾರ್ವಜನಿಕರೂ ಹೆಲಿಕಾಪ್ಟರ್ ಹಾರಾಟ ನಡೆಸಿ ಜಿಲ್ಲೆಯ ವಿಹಂಗಮ ನೋಟವನ್ನು ಕಣ್ತುಂಬಿಕೊಂಡರು.
ಇತ್ತ ದಸರಾ ಅಂಗವಾಗಿ ಆಯೋಜಿಸಿದ್ದ ಶ್ವಾನ ಪ್ರದರ್ಶನವೂ ಜನರ ಗಮನ ಸೆಳೆಯಿತು. ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ನಡೆದ ಪ್ರದರ್ಶನದಲ್ಲಿ 19 ತಳಿಗಳ 38 ಶ್ವಾನಗಳು ಭಾಗಿಯಾಗಿದ್ದವು. ಗ್ರೇಟ್ ಡೇನ್, ಹಸ್ಕಿ, ಪೂಡಲ್, ಮುದೋಳ, ಯೋಗ್ಸಿರಿ, ಬೆಲ್ಜಿಯಂ ಮಾಲಿನಾಯ್ಸ್ ಸೇರಿದಂತೆ ವಿವಿಧ ತಳಿಗಳ ಶ್ವಾನಗಳು ಪ್ರದರ್ಶನದಲ್ಲಿ ಮಿಂಚಿದವು.
ಇನ್ನೊಂದೆಡೆ ಜಿಲ್ಲಾಡಳಿತ ಭವನದಲ್ಲಿ ಚಿಕ್ಕದಾದರೂ ಚೊಕ್ಕವಾಗಿ ಫಲಪುಷ್ಪ ಪ್ರದರ್ಶನ ಆಯೋಜಿಸಲಾಗಿತ್ತು. ಹನೂರು ಶಾಸಕ ಮಂಜುನಾಥ್ ಪ್ರದರ್ಶನಕ್ಕೆ ಚಾಲನೆ ನೀಡಿದರು. ಕಲ್ಲಂಗಡಿ ಹಣ್ಣಿನಲ್ಲಿ ಕೆತ್ತಲಾಗಿದ್ದ ಚಲನಚಿತ್ರ ನಟರು, ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳ ಕಲಾಕೃತಿಗಳು ನೋಡುಗರ ಗಮನ ಸೆಳೆದವು. ಮರಳಿನಲ್ಲಿ ಮೂಡಿಬಂದ ಚಾಮುಂಡೇಶ್ವರಿ ಕಲಾಕೃತಿಯೂ ವಿಶೇಷ ಆಕರ್ಷಣೆಯಾಗಿತ್ತು.
ಇದರ ಜೊತೆಗೆ ರೈತ ದಸರಾ ಕೂಡ ಸಂಭ್ರಮಕ್ಕೆ ಮತ್ತಷ್ಟು ಮೆರುಗು ನೀಡಿತು. ಆಕರ್ಷಕ ಎತ್ತಿನಗಾಡಿಗಳ ಮೆರವಣಿಗೆ, ಜಾನಪದ ಕಲಾ ತಂಡಗಳ ಪ್ರದರ್ಶನದ ಜೊತೆಗೆ ಹೈನುಗಾರಿಕೆ ಕ್ಷೇತ್ರದ ಸಾಧನೆ ಪ್ರದರ್ಶಿಸುವ ಹಸುಗಳ ಸ್ಪರ್ಧೆ ನಡೆಯಿತು. ಅತಿ ಹೆಚ್ಚು ಹಾಲು ನೀಡುವ ಜರ್ಸಿ ಹಸುಗಳು ಸ್ಪರ್ಧೆಯಲ್ಲಿ ಗಮನ ಸೆಳೆದವು. ಇದನ್ನೂ ಓದಿ: ದಸರಾ ಮಹೋತ್ಸವದಲ್ಲಿ ವಿಂಟೇಜ್ ಕಾರುಗಳ ವೈಭವ
ಚಾಮರಾಜನಗರ ದಸರಾ ಸಂಭ್ರಮ ಇಷ್ಟಕ್ಕೇ ಮುಗಿಯೋದಿಲ್ಲ. ಇಂದಿನಿಂದ (ಶನಿವಾರ) ಮೂರು ದಿನಗಳ ಕಾಲ ಸಂಗೀತ, ಸಾಂಸ್ಕೃತಿಕ ಕಾರ್ಯಕ್ರಮಗಳು ರಸದೌತಣವೇ ನಡೆಯಲಿದ್ದು, ಕ್ರೇಜಿಸ್ಟಾರ್ ರವಿಚಂದ್ರನ್ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಲಿದ್ದಾರೆ. ರಾಜೇಶ್ ಕೃಷ್ಣನ್, ನವೀನ್ ಸಜ್ಜು ಹಾಗೂ ರಘು ದೀಕ್ಷಿತ್ ಅವರ ಮ್ಯೂಸಿಕಲ್ ನೈಟ್ಸ್ ಜೊತೆಗೆ ಬಿಗ್ಬಾಸ್ ಖ್ಯಾತಿಯ ಹನುಮಂತ ಅವರ ರಸಮಂಜರಿ ಕಾರ್ಯಕ್ರಮಗಳು ನಡೆಯಲಿವೆ. ಅಕ್ಟೋಬರ್ 19ರಂದು ದಸರಾ ಸಂಭ್ರಮಕ್ಕೆ ಅದ್ಧೂರಿ ತೆರೆ ಬೀಳಲಿದ್ದು, ಬಾಣಬಿರುಸು ಪ್ರದರ್ಶನ ಹಾಗೂ ಲೇಸರ್ ಶೋ ಮೂಲಕ ಚಾಮರಾಜನಗರ ದಸರಾ ಮತ್ತಷ್ಟು ಕಳೆಗಟ್ಟಲಿದೆ.

