– ಪ್ರತಿ ಕುಟುಂಬಕ್ಕೊಂದು ಸರ್ಕಾರಿ ಉದ್ಯೋಗ ಕಲ್ಪಿಸಲು ಈ ಹೊಸ ಚಿಂತನೆ
– ಕೆಪಿಎಸ್ಸಿ ಸಂಸ್ಥೆ ಪರಿಶುದ್ಧಗೊಳಿಸಲು ಪ್ರಾಮಾಣಿಕವಾಗಿ ಶಕ್ತಿ ಬರಬೇಕು
ಬೆಂಗಳೂರು: ಸರ್ಕಾರಿ ಉದ್ಯೋಗದ (Government Jobs) ಅವಧಿಯನ್ನ 10 ರಿಂದ 15 ವರ್ಷಗಳಿಗೆ ಸೀಮಿತಗೊಳಿಸುವ ಚಿಂತನೆ ಇದೆ. ಹೀಗೆ ಮಾಡಿದ್ರೆ ಪ್ರತಿ ಕುಟುಂಬಕ್ಕೆ ಒಂದು ಉದ್ಯೋಗ ಕಲ್ಪಿಸಲು ಸಾಧ್ಯವೇ? ಎಲ್ಲರೂ ಬದುಕಲು ಸಾಧ್ಯವಾಗುತ್ತದೆಯೇ? ಈ ಯೋಜನೆ ಪ್ರಾಯೋಗಿಕವಾಗಿ ಸಾಧ್ಯವೇ? ಎಂದು ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ (HD Kumaraswamy) ವಿದ್ಯಾರ್ಥಿಗಳ ಬಳಿ ಅಭಿಪ್ರಾಯ ಕೇಳಿದರು.
ವಿದ್ಯಾರ್ಥಿಗಳು, ಯುವ ಜನರು, ಕೆಪಿಎಸ್ಸಿ ಆಯ್ಕೆಯಲ್ಲಿ ಮೋಸ ಹೋದವರು, ಭವಿಷ್ಯದ ಕನಸು ಹೊತ್ತವರು, ಉದ್ಯೋಗ ವಂಚಿತರ ಜೊತೆ ಬೆಂಗಳೂರಿನ (Bengaluru) ವಿಜಯನಗರದ ಬಂಟರ ಭವನದಲ್ಲಿ ಕೇಂದ್ರ ಸಚಿವರು ನಡೆಸಿದ ಮುಕ್ತ ಹಾಗೂ ನೇರ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಿರುದ್ಯೋಗ ಸಮಸ್ಯೆ ಬಗೆಹರಿಸುವುದು ನಮ್ಮ ಮೊದಲ ಕಾರ್ಯಕ್ರಮವಾಗಿದೆ ಎಂದು ಹೇಳಿದ ಕುಮಾರಸ್ವಾಮಿ, ಸರ್ಕಾರಿ ನೌಕರರು ಒಮ್ಮೆ ಆಯ್ಕೆಯಾದರೆ 30ರಿಂದ 35 ವರ್ಷಗಳ ಕಾಲ ಖಾಯಂ ಉದ್ಯೋಗದಲ್ಲಿರುತ್ತಾರೆ. ಒಬ್ಬ ವ್ಯಕ್ತಿಗೆ ಇಷ್ಟು ವರ್ಷ ಉದ್ಯೋಗ ಸಿಕ್ಕಾಗ ಆ ವ್ಯಕ್ತಿ ಮತ್ತು ಆತನ ಕುಟುಂಬ ಚೆನ್ನಾಗಿರುತ್ತದೆ. ಆದರೆ ಉದ್ಯೋಗ ಸಿಗದವರು ಏನು ಮಾಡಬೇಕು? ಅಷ್ಟೊತ್ತಿಗೆ ಅವರಿಗೂ ವಯಸ್ಸಾಗಿರುತ್ತದೆ. ಸರ್ಕಾರಿ ಕೆಲಸವೂ ಸಿಗುವುದಿಲ್ಲ. ಹೀಗಾಗಿ ಪ್ರತಿ ಕುಟುಂಬಕ್ಕೆ 1 ಸರ್ಕಾರಿ ಉದ್ಯೋಗ ಸಿಗಲೇಬೇಕೆಂಬ ಕಾರ್ಯಕ್ರಮ ಕೊಡಬೇಕು ಅಂದುಕೊಂಡಿದ್ದೇನೆ ಎಂದರು.

ಮುಂದುವರಿದು… ಸರ್ಕಾರಿ ಉದ್ಯೋಗದ ಅವಧಿಯನ್ನು 10 ರಿಂದ 15 ವರ್ಷಗಳಿಗೆ ಸೀಮಿತಗೊಳಿಸುವ ಯೋಜನೆಯಿದೆ. ಒಬ್ಬ ವ್ಯಕ್ತಿ 10 ರಿಂದ 15 ವರ್ಷ ಕೆಲಸ ಮಾಡಿದ ಬಳಿಕ ನಿವೃತ್ತಿ ನೀಡಿದರೆ, ಆ ಸ್ಥಾನದಲ್ಲಿ ಮತ್ತೊಬ್ಬರಿಗೆ ಉದ್ಯೋಗ ನೀಡಬಹುದು. ನಿವೃತ್ತಿಯಾದವರಿಗೆ ಪಿಂಚಣಿ ಸಿಗುವುದರಿಂದ ಅವರೂ ಬದುಕಬಹುದು. ಜೊತೆಗೆ ಖಾಸಗಿ ಉದ್ಯೋಗವನ್ನೂ ಮಾಡಬಹುದು. ಉದ್ಯೋಗದಿಂದ ವಂಚಿತರಾದ ಮತ್ತೊಬ್ಬರಿಗೂ ಕೆಲಸ ಸಿಗುತ್ತದೆ. ಈ ರೀತಿಯ ವ್ಯವಸ್ಥೆ ಜಾರಿಗೆ ತಂದರೆ ಪ್ರತಿ ಕುಟುಂಬಕ್ಕೆ ಒಂದು ಉದ್ಯೋಗ ಕಲ್ಪಿಸಲು ಸಾಧ್ಯವೇ? ಎಲ್ಲರೂ ಬದುಕಲು ಸಾಧ್ಯವಾಗುತ್ತದೆಯೇ ಎಂಬುದರ ಬಗ್ಗೆ ಯೋಚನೆ ಮಾಡಿ, ಈ ಯೋಜನೆ ಪ್ರಾಯೋಗಿಕವಾಗಿ ಸಾಧ್ಯವೇ ಎಂಬುದರ ಕುರಿತು ಅಭಿಪ್ರಾಯ ನೀಡುವಂತೆ ವಿದ್ಯಾರ್ಥಿಗಳು ಮತ್ತು ಯುವಜನರಲ್ಲಿ ಕುಮಾರಸ್ವಾಮಿ ಮನವಿ ಮಾಡಿದರು.
ಇದಕ್ಕೂ ಮುನ್ನ ಮಾತನಾಡಿದ ಅವರು, 2028ರ ವೇಳೆಗೆ ಜನತೆಯ ಮುಂದಿಡಲು ಆದ ಕೆಲವು ಕಾರ್ಯಕ್ರಮಗಳಿವೆ. ನನ್ನ ಕಾರ್ಯಕ್ರಮ 2,000 ರೂಪಾಯಿ ಕೊಡುವುದಾಗಲಿ, ಉಚಿತ ಬಸ್ ಸೌಲಭ್ಯ ಕಲ್ಪಿಸುವುದಾಗಲಿ ಅಥವಾ ಯುವನಿಧಿ ನೀಡುವುದಾಗಲಿ ಅಲ್ಲ. 5 ಗ್ಯಾರಂಟಿಗಳಿಗೂ ನನ್ನ ವಿರೋಧವಿಲ್ಲ. ಆದರೆ ಪ್ರತಿ ಕುಟುಂಬ ಸ್ವಾಭಿಮಾನದಿಂದ ಬದುಕುವಂತಾಗಬೇಕು ಎಂದು ಅವರು ಹೇಳಿದರು.
ಮತ್ತೆ ಅಧಿಕಾರಕ್ಕೇರುವ ಇಂಗಿತ
ಇದೇ ವೇಳೆ ಕೆಪಿಎಸ್ಸಿ ವಿರುದ್ಧ ಹೋರಾಟದ ಬಗ್ಗೆ ಮಾತನಾಡಿ… ಈಗ ನಾನು ಹೋರಾಟ ಮಾಡಬಹುದು, ಜನರ ಪರ ದನಿ ಎತ್ತಬಹುದು, ಅನ್ಯಾಯದ ವಿರುದ್ಧ ಎಚ್ಚರಿಕೆ ನೀಡಬಹುದು. ಆದರೆ ಕೆಪಿಎಸ್ಸಿ ಸಂಸ್ಥೆಯನ್ನು ಪರಿಶುದ್ಧಗೊಳಿಸಲು ಪ್ರಾಮಾಣಿಕವಾಗಿ ಶಕ್ತಿ ಬಂದಾಗ ಮಾತ್ರ ಸಾಧ್ಯ ಎಂದು ಹೇಳುವ ಮೂಲಕ ರಾಜ್ಯದಲ್ಲಿ ಮತ್ತೆ ಮುಖ್ಯಮಂತ್ರಿಯಾಗುವ ಇಂಗಿತವನ್ನು ಪರೋಕ್ಷವಾಗಿ ವ್ಯಕ್ತಪಡಿಸಿದರು.

ಒಂದು ಬಾರಿ ಅಧಿಕಾರ ಕೊಡಿ
1 ಬಾರಿ ಐದು ವರ್ಷಗಳ ಕಾಲ ಸರ್ಕಾರ ನಡೆಸುವ ಅವಕಾಶವನ್ನು ಈ ನಾಡಿನ ಜನತೆ ನೀಡಿದ್ದರೆ, ಸರ್ಕಾರವನ್ನು ಯಾವ ರೀತಿ ನಡೆಸಬಹುದು ಎಂಬುದನ್ನು ತೋರಿಸಬಹುದು. ನನಗೆ ದೆಹಲಿಯ ಆಡಳಿತದ ಅನುಭವವಾಗಿದೆ. ಅಲ್ಲಿ ಯಾವ ರೀತಿ ಆಡಳಿತ ನಡೆಯುತ್ತಿದೆ ಮತ್ತು ಇಲ್ಲಿ ಏನು ನಡೆಯುತ್ತಿದೆ ಎಂಬ ಅನುಭವ ನನಗಿದೆ. ಆದರೆ ಎರಡೂ ಕಡೆ ಆಡಳಿತ ಹೇಗೆ ನಡೆಯುತ್ತಿದೆ ಎಂಬುದನ್ನು ಚರ್ಚಿಸಲು ಹೋಗುವುದಿಲ್ಲ. 2006-07ರಲ್ಲಿ ತಾವು ನಡೆಸಿದ ಆಡಳಿತಕ್ಕೆ ಪ್ರತಿಯೊಂದು ಭಾಗದಲ್ಲೂ ಮೆಚ್ಚುಗೆ ವ್ಯಕ್ತವಾಗಿತ್ತು. ಇಂದು ನಾನೇನಾದರೂ ಪ್ರಸ್ತುತವಾಗಿದ್ದೇನೆ ಎಂದರೆ ಅದಕ್ಕೆ ಅಂದಿನ ಆಡಳಿತವೇ ಕಾರಣ. 2014ರಲ್ಲಿ ಸಾಲ ಮನ್ನಾ ಮಾಡಿದರೂ ಅಭಿವೃದ್ಧಿಯನ್ನ ನಿಲ್ಲಿಸಲಿಲ್ಲ ಎಂದು ಅವರು ಹೇಳಿದರು.
ಜನರ ವಿಷಯದಲ್ಲಿ ಪಾರದರ್ಶಕವಾಗಿ, ಪರಿಶುದ್ಧವಾಗಿ ಒಂದು ರೂಪಾಯಿಯನ್ನೂ ತೆಗೆದುಕೊಳ್ಳದಂತೆ ಪ್ರಾಮಾಣಿಕವಾಗಿ ಕೆಲಸ ಮಾಡಲು ಏನು ಮಾಡಬೇಕು ಎಂಬ ಯೋಜನೆಯನ್ನು ರೂಪಿಸಿಕೊಂಡಿದ್ದೇನೆ. ಈ ನಿಟ್ಟಿನಲ್ಲಿ ಏಳೆಂಟು ಕಾರ್ಯಕ್ರಮಗಳನ್ನು ನಾಡಿನ ಜನತೆಯ ಮುಂದಿಡಬೇಕು ಅಂದುಕೊಂಡಿದ್ದೇನೆ ಎಂದರು.

