ಸನಾ: ಯೆಮನ್ನಲ್ಲಿರುವ ಹೌತಿ ಬಂಡುಕೋರರು (Houthis) ಚೀನಾದಿಂದ ಪಡೆದ ಬಿಡಿಭಾಗಗಳನ್ನ ಬಳಸಿ ಸುಧಾರಿತ ಮಧ್ಯಮ ದೂರದ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನ ತಯಾರಿಸಲು ಪ್ರಯತ್ನಿಸುತ್ತಿದ್ದಾರೆ. ಈ ಬೆಳವಣಿಗೆಯಿಂದ ಸೌದಿ ಅರೇಬಿಯಾ (Saudi Arabia) ಮತ್ತು ಇಸ್ರೇಲ್ (Israel) ಮೇಲಿನ ದಾಳಿಯ ಸಾಮರ್ಥ್ಯವನ್ನ ಹೌತಿಗಳು ಹೆಚ್ಚಿಸಿಕೊಳ್ಳುವ ಸಾಧ್ಯತೆಯಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಸಂಘರ್ಷ ಪೀಡಿತ ಪ್ರದೇಶಗಳಲ್ಲಿ ಶಸ್ತ್ರಾಸ್ತ್ರಗಳ ಪೂರೈಕೆ ಮತ್ತು ಅವುಗಳ ಮೂಲವನ್ನು ಪತ್ತೆಹಚ್ಚುವ ಸಂಸ್ಥೆಯಾದ ಕಾನ್ಫ್ಲಿಕ್ಟ್ ಆರ್ಮಮೆಂಟ್ ರಿಸರ್ಚ್ (Conflict Armament Research) ನಡೆಸಿದ ಅಧ್ಯಯನದಲ್ಲಿ ಈ ಮಾಹಿತಿ ಬಹಿರಂಗವಾಗಿದೆ ಎಂದು ವರದಿಗಳು ತಿಳಿಸಿವೆ.
ಯೆಮನ್ ಅಧಿಕಾರಿಗಳು ವಶಪಡಿಸಿಕೊಂಡ ಬಿಡಿಭಾಗಗಳನ್ನ ಬಳಸಿಕೊಂಡು ಇರಾನ್ನ ಖೈಬರ್ ಶೆಕನ್ (Kheibar Shekan) ಮಾದರಿಯ ನಿಖರ ಗುರಿ ತಲುಪುವ ಕ್ಷಿಪಣಿಯನ್ನ ತಯಾರಿಸಲು ಸಾಧ್ಯವಿದೆ ಎಂದು ವರದಿ ತಿಳಿಸಿದೆ. ಈ ಕ್ಷಿಪಣಿಯು ಸುಮಾರು 1,200 ಮೈಲುಗಳು (1,930 ಕಿ.ಮೀ.) ದೂರದವರೆಗೆ ಹಾರುವ ಸಾಮರ್ಥ್ಯ ಹೊಂದಿದೆ ಎಂದು ಅಂದಾಜಿಸಲಾಗಿದೆ.

ಸುಧಾರಿತ ಕ್ಷಿಪಣಿಗಳಿಗೆ ಚೀನಾದ ಬಿಡಿಭಾಗಗಳು
ವರದಿ ಪ್ರಕಾರ, ಕಳೆದ ವರ್ಷ ಯೆಮನ್ ಅಧಿಕಾರಿಗಳು ಕ್ಷಿಪಣಿಗಳಿಗೆ ಸಂಬಂಧಿಸಿದ ಉಪಕರಣಗಳನ್ನ ಸಾಗಿಸುತ್ತಿದ್ದ ಎರಡು ಸರಕು ಸಾಗಣೆಗಳನ್ನು ತಡೆದು ಪರಿಶೀಲಿಸಿದ್ದರು. ಇತರ ಸರಕುಗಳ ನಡುವೆ ಈ ಉಪಕರಣಗಳನ್ನ ಮರೆಮಾಚಿ ಸಾಗಿಸಲಾಗುತ್ತಿತ್ತು.
ವಶಪಡಿಸಿಕೊಂಡ ವಸ್ತುಗಳಲ್ಲಿ ವಿಶೇಷವಾಗಿ ತಯಾರಿಸಿದ ಲೋಹದ ಭಾಗಗಳು, ಕ್ಷಿಪಣಿಯ ರೆಕ್ಕೆಗಳು, ಘನ ಇಂಧನ ರಾಕೆಟ್ ಎಂಜಿನ್ಗೆ ಸಂಬಂಧಿಸಿದ ಬಿಡಿಭಾಗಗಳು, ಪರೀಕ್ಷಾ ಉಪಕರಣಗಳು ಮತ್ತು ಹೆಚ್ಚಿನ ಶಾಖವನ್ನು ತಡೆದುಕೊಳ್ಳುವ ವಸ್ತುಗಳು ಸೇರಿದ್ದವು. ಇಂತಹ ಬಿಡಿಭಾಗಗಳ ಆಮದು ಹೌತಿಗಳು ಈಗಾಗಲೇ ಕ್ಷಿಪಣಿ ತಯಾರಿಕೆಯನ್ನು ಆರಂಭಿಸಿರುವ ಸಾಧ್ಯತೆಯನ್ನ ಸೂಚಿಸುತ್ತದೆ. ಅಥವಾ ಈ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸಲು ಪ್ರಯತ್ನಿಸುತ್ತಿರಬಹುದು ಸಂಬಂಧಪಟ್ಟ ತಜ್ಞರು ಹೇಳಿದ್ದಾರೆ. ಆದರೆ, ಹೌತಿಗಳು ಈ ಪ್ರಯತ್ನದಲ್ಲಿ ಎಷ್ಟು ಪ್ರಗತಿ ಸಾಧಿಸಿದ್ದಾರೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಸ್ವಂತ ಶಸ್ತ್ರಾಸ್ತ್ರ ತಯಾರಿಕೆಗೆ ಹೌತಿಗಳ ಒತ್ತು
ಈ ಬೆಳವಣಿಗೆ ಹೌತಿಗಳು ಸ್ವಂತವಾಗಿ ಶಸ್ತ್ರಾಸ್ತ್ರಗಳನ್ನು ತಯಾರಿಸುವ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುತ್ತಿರುವುದರ ಮತ್ತೊಂದು ಸೂಚನೆಯಾಗಿದೆ. ಈ ಹಿಂದೆ ಅವರು ಶಸ್ತ್ರಾಸ್ತ್ರಗಳು ಮತ್ತು ಕ್ಷಿಪಣಿ ತಂತ್ರಜ್ಞಾನಕ್ಕಾಗಿ ಇರಾನ್ ಹಾಗೂ ಅದರ ಮಿತ್ರ ಸಂಘಟನೆಯಾದ ಲೆಬನಾನ್ನ ಹೆಜ್ಬುಲ್ಲಾ ಬಂಡುಕೋರರ ಗುಂಪುಗಳ ಮೇಲೆ ಅವಲಂಬಿತರಾಗಿದ್ದರು.

