ವಾಷಿಂಗ್ಟನ್: ರಷ್ಯಾ ಮತ್ತು ಉಕ್ರೇನ್ ನಡುವೆ ತಕ್ಷಣದಿಂದಲೇ ಜಾರಿಗೆ ಬರುವಂತೆ ‘ಇಂಧನ ಕದನ ವಿರಾಮ’ಕ್ಕೆ (Energy Ceasefire) ಎರಡೂ ದೇಶಗಳು ಒಪ್ಪಿಕೊಂಡಿವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಭಾನುವಾರ ಘೋಷಿಸಿದ್ದಾರೆ. ಈ ಬಗ್ಗೆ ತಮ್ಮ ಸಾಮಾಜಿಕ ಮಾಧ್ಯಮ ವೇದಿಕೆ ಟ್ರೂತ್ ಸೋಷಿಯಲ್‌ನಲ್ಲಿ ಪೋಸ್ಟ್‌ವೊಂದನ್ನ ಹಂಚಿಕೊಂಡಿದ್ದಾರೆ.
ಎರಡೂ ದೇಶಗಳು ಇಂಧನ ಕದನ ವಿರಾಮಕ್ಕೆ ಒಪ್ಪಿಕೊಂಡಿದ್ದು, ಇದನ್ನು ಉಲ್ಲಂಘಿಸಬೇಡಿ ಎಂದು ಹೇಳಿದ್ದಾರೆ. ಆದ್ರೆ ಈ ಕದನ ವಿರಾಮದ ನಿಖರ ಷರತ್ತುಗಳು ಹಾಗೂ ವ್ಯಾಪ್ತಿಯ ಬಗ್ಗೆ ಟ್ರಂಪ್ ಯಾವುದೇ ವಿವರಗಳನ್ನ ನೀಡಿಲ್ಲ. ಅಲ್ಲದೇ ಈ ಘೋಷಣೆಯ ಕುರಿತು ರಷ್ಯಾ ಅಥವಾ ಉಕ್ರೇನ್ (Russia, Ukraine) ಸರ್ಕಾರಗಳೂ ಕೂಡ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ ಎಂದು ವರದಿಗಳು ತಿಳಿಸಿವೆ.

ಯುದ್ಧದ ಸಂದರ್ಭದಲ್ಲಿ ರಷ್ಯಾ ಮತ್ತು ಉಕ್ರೇನ್ ಪರಸ್ಪರ ಇಂಧನ ಮೂಲಸೌಕರ್ಯಗಳ ಮೇಲೆ ಹಲವು ಬಾರಿ ದಾಳಿ ನಡೆಸಿವೆ. ಈ ಹಿನ್ನೆಲೆ ಟ್ರಂಪ್ ಅವರ ‘ಇಂಧನ ಕದನ ವಿರಾಮ’ ಘೋಷಣೆ ಮಹತ್ವ ಪಡೆದುಕೊಂಡಿದೆ.
ಟ್ರಂಪ್ ಈ ಘೋಷಣೆ ಮಾಡುವುದಕ್ಕೆ ಒಂದು ದಿನ ಮೊದಲು ಉಕ್ರೇನ್, ರಷ್ಯಾದ ತೈಲ ಸಂಸ್ಕರಣಾಗಾರಗಳ ಮೇಲೆ ದಾಳಿ ನಡೆಸಿತ್ತು. ಇದರಿಂದ ಟ್ರಂಪ್ ಕೂಡ ಉಕ್ರೇನ್ ಮೇಲೆ ಅಸಮಾಧಾನಗೊಂಡಿದ್ದರು. ಉಕ್ರೇನ್‌ಗೆ ಹೊಸ ಅಧ್ಯಕ್ಷರ ಅಗತ್ಯವಿದೆ ಎಂದು ಕೂಡ ಒತ್ತಿ ಹೇಳಿದ್ದರು.

