– ಪೊಲೀಸರ ಬಿಗಿ ಬಂದೊಬಸ್ತ್, ಜಂತರ್ಮಂತರ್ ತಲುಪದ ಹೋರಾಟಗಾರರು
ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಸಿಜೆಪಿ (CJP) ಕರೆ ಕೊಟ್ಟ ಪ್ರತಿಭಟನೆ ವಿಫಲವಾಗಿದೆ. ಪೊಲೀಸರ ಭಾರೀ ಭದ್ರತೆ, ಮುನ್ನೆಚ್ಚರಿಕೆ ಕ್ರಮಗಳು, ಪ್ರತಿಭಟನಾಕಾರರ ನಿಯಂತ್ರಣದಿಂದಾಗಿ ಅಂದುಕೊಂಡಷ್ಟು ಯಶಸ್ವಿಯಾಗಲಿಲ್ಲ. ಇದೆಲ್ಲದರ ಮಧ್ಯೆ ಮತ್ತೊಂದು ಬೆಳವಣಿಗೆ ನಡೆದಿದೆ.
Delhi | Delhi Police have released all the detainees from the detention centers except CJP leaders. Due legal process will be followed for the CJP leaders: Delhi Police Sources
— ANI (@ANI) October 10, 2026
ಸಿಜೆಪಿ ನಾಯಕರನ್ನ ಹೊರತುಪಡಿಸಿ ದೆಹಲಿ ಪೊಲೀಸರು (Delhi Police) ವಶಕ್ಕೆ ಪಡೆದಿದ್ದ ಉಳಿದೆಲ್ಲರನ್ನೂ ಬಿಡುಗಡೆ ಮಾಡಲಾಗಿದೆ. ಸಿಜೆಪಿ ನಾಯಕರ ವಿಷಯದಲ್ಲಿ ಕಾನೂನುಬದ್ಧ ಪ್ರಕ್ರಿಯೆ ಅನುಸರಿಸುವುದಾಗಿ ದೆಹಲಿ ಪೊಲೀಸ್ ಮೂಲಗಳು ತಿಳಿಸಿವೆ.
ಜಂತರ್ಮಂತರ್ ತಲುಪದ ಹೋರಾಟಗಾರರು
ನಿನ್ನೆ ದೆಹಲಿಯಲ್ಲಿ ಸಿಜೆಪಿ ಕರೆ ಕೊಟ್ಟಿದ್ದ ಹೋರಾಟ ನಿರೀಕ್ಷಿತ ಮಟ್ಟದ ಯಶಸ್ಸು ಕಂಡಿಲ್ಲ. ಪ್ರತಿಭಟನೆಯ ಒಂದು ದಿನಕ್ಕೆ ಮುನ್ನ ದೆಹಲಿ ಪೊಲೀಸರು ತೆಗೆದುಕೊಂಡ ಮುನ್ನಚ್ಚರಿಕೆ ಕ್ರಮಗಳು ಇಡೀ ಹೋರಾಟದ ದಿಕ್ಕನ್ನೇ ಬದಲಿಸಿತು. ಜಂತರ್ ಮಂತರ್ಗೆ (Jantar manatar) ಹೋರಾಟಗಾರರು ತಲುಪಲಾಗದ ಹಿನ್ನಲೆ ಈ ಹಿಂದೆ ಕಂಡಷ್ಟು ಹೋರಾಟದ ಬಿಸಿ ಈ ಬಾರಿ ನೋಡಲು ಸಿಗಲಿಲ್ಲ.

ನಿಗದಿತ ಪ್ರತಿಭಟನೆಗೆ ಅನುಮತಿ ನೀಡಿಲ್ಲ ಎಂದು ಪೊಲೀಸರು ಮೊದಲೇ ಸ್ಪಷ್ಟಪಡಿಸಿದ್ದರು. ಸುಮಾರು 23 ಸಾವಿರ ಅರೆಸೇನಾ ಸಿಬ್ಬಂದಿ ನಿಯೋಜನೆ ಮಾಡಲಾಗಿತ್ತು. ಹಿರಿಯ ಪೊಲೀಸ್ ಅಧಿಕಾರಿಗಳ ಮೇಲ್ವಿಚಾರಣೆಯಲ್ಲಿ ಭದ್ರತಾ ವ್ಯವಸ್ಥೆ ರೂಪಿಸಲಾಗಿತ್ತು. ಪ್ರತಿಭಟನಾ ಸ್ಥಳಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿ ಹಲವು ಹಂತದ ಬ್ಯಾರಿಕೇಡ್ಗಳನ್ನ ಹಾಕಲಾಗಿತ್ತು. ಸುಮಾರು ಎರಡು ಕಿಲೋಮೀಟರ್ ವ್ಯಾಪ್ತಿಯಲ್ಲಿ 37 ಕಡೆ ತಡೆ ವ್ಯವಸ್ಥೆ ಮಾಡಲಾಗಿತ್ತು. ವಾಹನಗಳ ಸಂಚಾರ ನಿಯಂತ್ರಿಸಲು ರಸ್ತೆಗಳಲ್ಲಿ ಸ್ಪೈಕ್ ಸ್ಟ್ರಿಪ್ಗಳನ್ನೂ ಅಳವಡಿಸಲಾಗಿತ್ತು.
ಉತ್ತರ ಪ್ರದೇಶ ಸೇರಿದಂತೆ ನೆರೆರಾಜ್ಯಗಳಿಂದ ದೆಹಲಿಗೆ ಪ್ರವೇಶಿಸುವ ವಾಹನಗಳನ್ನ ತಪಾಸಣೆ ಮಾಡಲಾಯಿತು. ಬಸ್ಗಳಲ್ಲಿದ್ದ ಯುವಕರನ್ನು ವಿಚಾರಿಸಲಾಯಿತು. ಪ್ರತಿಭಟನೆಗೆ ತೆರಳುತ್ತಿದ್ದ ಶಂಕಿತರು ಮತ್ತು ಕಾರ್ಯಕರ್ತರನ್ನು ಮಾರ್ಗಮಧ್ಯೆಯೇ ತಡೆಯಲಾಯಿತು. ಇದರಿಂದ ಪ್ರತಿಭಟನೆ ತೀವ್ರತೆ ಅರ್ಧದಷ್ಟು ಕಡಿಮೆಯಾಯಿತು.

