ದಸರಾ (Dussehra) ಎಂದರೆ ನಮಗೆಲ್ಲ ಮೈಸೂರು (Mysuru) ನೆನಪಾಗುತ್ತದೆ. ಆದರೆ ದೇಶದ ವಿವಿಧ ಭಾಗಗಳಲ್ಲೂ ನಾನಾ ರೀತಿಯ ದಸರಾ ಆಚರಣೆ ನಡೆಯುತ್ತದೆ. ಅದೇ ರೀತಿ ಹಿಮಾಚಲ ಪ್ರದೇಶದ ಕುಲ್ಲು ಕಣಿವೆಯಲ್ಲಿ ನಡೆಯುವ ದಸರಾ ತನ್ನದೇ ಆದ ವಿಶಿಷ್ಟ ಸಂಪ್ರದಾಯ ಮತ್ತು ಆಚರಣೆಗಳಿಂದ ದೇಶ ವಿದೇಶದ ಜನರ ಗಮನ ಸೆಳೆಯುತ್ತದೆ.
ಹಿಮಾಲಯದ (Himachal) ಸುಂದರ ಪರ್ವತಗಳ ನಡುವೆ ನಡೆಯುವ ಈ ಉತ್ಸವ ಭಕ್ತಿ, ಸಂಸ್ಕೃತಿ ಮತ್ತು ಜನಪದ ಪರಂಪರೆಯ ಅಪೂರ್ವ ಸಂಗಮವಾಗಿದೆ. ಕುಲ್ಲು ದಸರಾದ ವಿಶೇಷತೆ ಎಂದರೆ ಇದು ವಿಜಯದಶಮಿಯ (Vijaya Dashami) ದಿನದಿಂದಲೇ ಆರಂಭವಾಗುತ್ತದೆ. ದೇಶದ ಬಹುತೇಕ ಕಡೆಗಳಲ್ಲಿ ದಸರಾ ವಿಜಯದಶಮಿಯಂದು ಮುಕ್ತಾಯವಾದರೆ, ಕುಲ್ಲುವಿನಲ್ಲಿ ಅಂದಿನಿಂದಲೇ ಉತ್ಸವದ ಸಂಭ್ರಮ ಶುರುವಾಗುತ್ತದೆ. ಹಲವು ದಿನಗಳ ಕಾಲ ನಡೆಯುವ ಈ ಹಬ್ಬದಲ್ಲಿ ಧಾರ್ಮಿಕ ಆಚರಣೆಗಳ ಜತೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಸಹ ನಡೆಯುತ್ತವೆ.

ಕುಲ್ಲು ದಸರಾ ಇತಿಹಾಸ
ರಾಜ ಜಗತ್ ಸಿಂಗ್ (1637–1672) ಹಿಮಾಚಲ ಪ್ರದೇಶದ ಕುಲ್ಲು ಕಣಿವೆಯ ಅತ್ಯಂತ ಪ್ರಸಿದ್ಧ ಮತ್ತು ಪ್ರಭಾವಶಾಲಿ ರಾಜರಾನಾಗಿದ್ದ. ಈತನ ಆಳ್ವಿಕೆಯ ಅವಧಿಯನ್ನು ಕುಲ್ಲು (Kullu Valley) ಇತಿಹಾಸದ ʻಸುವರ್ಣ ಯುಗʼ ಎಂದು ಕರೆಯಲಾಗುತ್ತದೆ. ಈತ ತನ್ನ ಸಾಮ್ರಾಜ್ಯದ ಗಡಿಗಳನ್ನು ವಿಸ್ತರಿಸಿದ್ದಲ್ಲದೆ, ಕುಲ್ಲು ಪ್ರಾಂತ್ಯದಲ್ಲಿ ಇಂದಿಗೂ ಪ್ರಸಿದ್ಧವಾಗಿರುವ ಸಾಂಸ್ಕೃತಿಕ ಹಾಗೂ ಧಾರ್ಮಿಕ ಸಂಪ್ರದಾಯದ ಕುಲ್ಲು ದಸರಾಕ್ಕೆ ನಾಂದಿ ಹಾಡಿದ.
ಬ್ರಾಹ್ಮಣನ ಶಾಪಕ್ಕೆ ಗುರಿಯಾದ ರಾಜ
ಟಿಪ್ರಿ ಗ್ರಾಮದ ದುರ್ಗಾದತ್ತ ಎಂಬ ಬ್ರಾಹ್ಮಣನ ಬಳಿ ಬೆಲೆಬಾಳುವ ಮುತ್ತುಗಳಿವೆ ಎಂದು ತಪ್ಪು ಮಾಹಿತಿ ಪಡೆದ ರಾಜ, ಅವುಗಳನ್ನು ತನಗೆ ನೀಡುವಂತೆ ಆದೇಶಿಸಿದನು. ರಾಜನ ಕಿರುಕುಳಕ್ಕೆ ಹೆದರಿದ ಬ್ರಾಹ್ಮಣ ತನ್ನ ಇಡೀ ಕುಟುಂಬದೊಂದಿಗೆ ಮನೆಗೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡನು. ಅಲ್ಲದೇ ರಾಜನಿಗೆ ಶಾಪ ನೀಡಿದನು.
ಈ ಘಟನೆಯ ತೀವ್ರ ಅಪರಾಧ ಪ್ರಜ್ಞೆಯಿಂದ ರಾಜ ಜಗತ್ ಸಿಂಗ್ ಅನಾರೋಗ್ಯಕ್ಕೆ (ಕುಷ್ಠರೋಗಕ್ಕೆ) ಒಳಗಾದ. ಈ ಶಾಪದಿಂದ ಮುಕ್ತಿ ಪಡೆಯಬೇಕಾದರೆ ಅಯೋಧ್ಯೆಯಿಂದ ಭಗವಾನ್ ರಘುನಾಥನ (ಶ್ರೀರಾಮ) ವಿಗ್ರಹವನ್ನು ತರಬೇಕೆಂದು ಸಾಧು ಕೃಷ್ಣದಾಸ್ ರಾಜನಿಗೆ ಸಲಹೆ ನೀಡಿದ. ಅದರಂತೆ 1651–1653 ರ ಅವಧಿಯಲ್ಲಿ ದಾಮೋದರ್ ದಾಸ್ ಎಂಬ ಬ್ರಾಹ್ಮಣನ ಸಹಾಯದಿಂದ ರಘುನಾಥನ ಮೂರ್ತಿಯನ್ನು ಅಯೋಧ್ಯೆಯಿಂದ ತಂದು ಕುಲ್ಲುನಲ್ಲಿ ಪ್ರತಿಷ್ಠಾಪಿಸಲಾಯಿತು. ಬಳಿಕ ತನ್ನ ಇಡೀ ಸಾಮ್ರಾಜ್ಯವನ್ನು ರಘುನಾಥನ ಪಾದಗಳಿಗೆ ಅರ್ಪಿಸಿ ಆಳ್ವಿಕೆ ನಡೆಸಿದನು. ಇದರ ನಂತರ ರಾಜನ ರೋಗವು ವಾಸಿಯಾಯಿತು.
ಭಗವಾನ್ ರಘುನಾಥನ ಆರಾಧನೆ
ರಘುನಾಥನ ದೇವಾಲಯದಲ್ಲಿ ದಸರಾ ಹಬ್ಬದ ಆಚರಣೆಗಾಗಿ ಕುಲ್ಲು ಕಣಿವೆಯ ಸುಮಾರು 250ಕ್ಕೂ ಹೆಚ್ಚು ಸ್ಥಳೀಯ ದೇವತೆಗಳನ್ನು ಆಹ್ವಾನಿಸುವ ಸಂಪ್ರದಾಯವನ್ನು ರಾಜ ಪ್ರಾರಂಭಿಸಿದ.

ಆ ಆಚರಣೆ ಇಂದಿಗೂ ನಡೆದುಕೊಂಡು ಬಂದಿದೆ. ವಿವಿಧ ಗ್ರಾಮಗಳ ದೇವರ ಪಲ್ಲಕ್ಕಿಗಳ ಮೆರವಣಿಗೆ ಇಂದಿಗೂ ಬರುತ್ತದೆ. ಕುಲ್ಲು ಈ ವರ್ಷ ಕಣಿವೆಯ 347 ದೇವತೆಗಳನ್ನು ಅಲಂಕೃತ ಪಲ್ಲಕ್ಕಿಗಳಲ್ಲಿ ದಸರಾ ಮೈದಾನಕ್ಕೆ ತರಲಾಗುತ್ತದೆ. ಸಾಂಪ್ರದಾಯಿಕ ಉಡುಗೆ ತೊಟ್ಟ ಭಕ್ತರು ತಮ್ಮ ಗ್ರಾಮದ ದೇವರ ಪಲ್ಲಕ್ಕಿ ಹೊತ್ತು ವಾದ್ಯಗಳನ್ನು ನುಡಿಸಿಕೊಂಡು ಮೆರವಣಿಗೆಯ ಮೂಲಕ ಸಂಭ್ರಮದಲ್ಲಿ ಪಾಲ್ಗೊಳ್ಳುತ್ತಾರೆ. ವಿವಿಧ ಗ್ರಾಮಗಳ ದೇವರುಗಳು ಒಂದೇ ಸ್ಥಳದಲ್ಲಿ ಸೇರುವ ಈ ದೃಶ್ಯ ಜನರನ್ನು ಭಕ್ತಿ ಸಾಗರದಲ್ಲಿ ತೇಲಿಸುತ್ತದೆ.
ಸ್ಥಳೀಯ ಕಲೆಗಳ ವೈಭವ
ಈ ಆಚರಣೆಯಲ್ಲಿ ಸ್ಥಳೀಯ ಜನಪದ ಕಲೆಗೂ ಮಹತ್ವವಿದೆ. ಸಾಂಪ್ರದಾಯಿಕ ನೃತ್ಯ, ಸಂಗೀತ ಮತ್ತು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಉತ್ಸವಕ್ಕೆ ಮೆರುಗು ನೀಡುತ್ತವೆ. ಇವುಗಳ ಮೂಲಕ ಹಿಮಾಚಲ ಪ್ರದೇಶದ ವಿಶಿಷ್ಟ ಜೀವನಶೈಲಿ ಮತ್ತು ಸಾಂಸ್ಕೃತಿಕ ವೈವಿಧ್ಯ ಅನಾವರಣಗೊಳ್ಳುತ್ತದೆ.
ಉತ್ಸವದ ಅಂಗವಾಗಿ ಸ್ಥಳೀಯ ಕರಕುಶಲ ವಸ್ತುಗಳು, ಆಹಾರ ಪದಾರ್ಥಗಳು ಸೇರಿದಂತೆ ಹಲವು ಉತ್ಪನ್ನಗಳ ಮಳಿಗೆಗಳೂ ತೆರೆದುಕೊಳ್ಳುತ್ತವೆ. ಇದರಿಂದ ಸ್ಥಳೀಯ ಕಲಾವಿದರು, ಸಣ್ಣ ವ್ಯಾಪಾರಿಗಳು ಮತ್ತು ಉದ್ಯಮಿಗಳಿಗೆ ಅವಕಾಶ ದೊರೆಯುತ್ತದೆ. ಹೀಗಾಗಿ ಕುಲ್ಲು ದಸರಾ ಧಾರ್ಮಿಕ ಆಚರಣೆಯ ಜತೆಗೆ ಸ್ಥಳೀಯ ಆರ್ಥಿಕ ಚಟುವಟಿಕೆಗಳಿಗೂ ಉತ್ತೇಜನ ಸಿಗುತ್ತದೆ.

ಇಂದಿಗೂ ಕುಲ್ಲು ದಸರಾ ತನ್ನ ಮೂಲ ಸಂಪ್ರದಾಯವನ್ನು ಉಳಿಸಿಕೊಂಡಿದೆ. ಆಧುನಿಕತೆಯ ನಡುವೆಯೂ ದೇವರ ಮೇಲಿನ ನಂಬಿಕೆ, ಸಮುದಾಯದ ಒಗ್ಗಟ್ಟು ಮತ್ತು ಜನಪದ ಪರಂಪರೆಯನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಪ್ರಯತ್ನ ವನ್ನು ಇಲ್ಲಿ ಕಾಣಬಹುದು.
ಒಟ್ಟಿನಲ್ಲಿ, ಕುಲ್ಲು ದಸರಾ ಭಾರತದ ವೈವಿಧ್ಯಮಯ ಸಾಂಸ್ಕೃತಿಕ ಪರಂಪರೆಯ ಒಂದು ವಿಶಿಷ್ಟ ಪ್ರತೀಕ. ವಿಜಯದಶಮಿಯಿಂದ ಆರಂಭವಾಗುವ ಈ ದೇವರ ಉತ್ಸವದಲ್ಲಿ ಭಕ್ತಿ, ಜನಪದ ಕಲೆ, ಸಂಪ್ರದಾಯ ಮತ್ತು ಹಿಮಾಲಯದ ಪ್ರಕೃತಿ ಸೌಂದರ್ಯ ಒಂದಾಗಿ ಬೆರೆತು ದಸರಾದ ವೈಭವವನ್ನು ಮತ್ತಷ್ಟು ಹೆಚ್ಚಿಸುತ್ತವೆ.

