ಜೆರುಸಲೇಂ: ಫ್ಲೈದುಬೈ (Flydubai) ವಿಮಾನದ ಅವಘಡ ತಪ್ಪಿಸಿ 174 ಪ್ರಯಾಣಿಕರ ಜೀವ ಉಳಿಸಿದ ಭಾರತೀಯ ಪೈಲಟ್ ಸ್ಮಿತ್ ಮಚ್ಚಾರ್ (Smit Machchhar) ಅವರ ಸಾಹಸಕ್ಕೆ ಇಸ್ರೇಲ್ ಶೌರ್ಯ ಪ್ರಶಸ್ತಿ ಘೋಷಣೆ ಮಾಡಿದೆ.
ಇಸ್ರೇಲ್‌ನ ಅತ್ಯುನ್ನತ ಗೌರವಗಳಲ್ಲಿ ಒಂದಾದ ಶೌರ್ಯ ಪ್ರಶಸ್ತಿ ಪ್ರದಾನಕ್ಕೆ ಇಸ್ರೇಲ್ ನಿರ್ಧಾರ ಕೈಗೊಂಡಿದೆ. ಇಸ್ರೇಲ್ ಅಧ್ಯಕ್ಷ ಐಸಾಕ್ ಹೆರ್ಜಾಗ್ ಅವರು ‘ಇಸ್ರೇಲಿ ಶೌರ್ಯ’ ಪ್ರಶಸ್ತಿ (Presidential Award For Heroism) ಘೋಷಣೆ ಮಾಡಿದ್ದಾರೆ.
‘ಫ್ಲೈದುಬೈ’ (flydubai) ವಿಮಾನದ ಕಾಕ್‌ಪಿಟ್‌ನಲ್ಲಿ ತಮ್ಮ ಸಹ-ಪೈಲಟ್ ನಡೆಸಿದ ದಾಳಿಯನ್ನು ಎದುರಿಸಿ, 174 ಪ್ರಯಾಣಿಕರು ಹಾಗೂ ಸಿಬ್ಬಂದಿಯ ಪ್ರಾಣವನ್ನು ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಉಳಿಸಿದ್ದರು. ಇದನ್ನೂ ಓದಿ: ಪೈಲಟ್ ಸ್ಮಿತ್ ಮಚ್ಚರ್‌ಗೆ ಇಸ್ರೇಲ್‌ನಿಂದ ಅತ್ಯುನ್ನತ ಗೌರವ – ಸ್ವಾತಂತ್ರ‍್ಯ ದಿನಾಚರಣೆಗೆ ನೆತನ್ಯಾಹು ಆಹ್ವಾನ
ಕಾಕ್‌ಪಿಟ್‌ನಲ್ಲಿದ್ದಾಗ, ಓಮನ್ ಪ್ರಜೆ ಸಹ-ಪೈಲಟ್ ಹಮ್ಮಮ್ ಅಲ್-ಹಮ್ಮಮಿ ಎಂಬಾತ ಫ್ಲೈದುಬೈ ವಿಮಾನ ಪತನಕ್ಕೆ ಯತ್ನಿಸಿದ್ದ. ಈತ ಕೊಡಲಿಯಿಂದ (ಕ್ರಾಶ್ ಆಕ್ಸ್) ಹಲ್ಲೆ ನಡೆಸಿದ ಪರಿಣಾಮವಾಗಿ ಸ್ಮಿತ್ ಮಚ್ಚಾರ್ ಗಂಭೀರವಾಗಿ ಗಾಯಗೊಂಡರು. ತೀವ್ರವಾಗಿ ಗಾಯಗೊಂಡು ವಿಪರೀತ ರಕ್ತಸ್ರಾವವಾಗುತ್ತಿದ್ದರೂ, ಭಾರತೀಯ ಪೈಲಟ್ ಕಾಕ್‌ಪಿಟ್‌ನ ಬಾಗಿಲನ್ನು ತೆರೆದರು. ಅವರ ಈ ಕ್ರಮದಿಂದಾಗಿ ಇಸ್ರೇಲಿ ಪ್ರಯಾಣಿಕರು ಕಾಕ್‌ಪಿಟ್‌ಗೆ ನುಗ್ಗಿ, ಹಲ್ಲೆ ನಡೆಸಿದ ವ್ಯಕ್ತಿಯನ್ನು ಹತೋಟಿಗೆ ತರಲು ಸಾಧ್ಯವಾಯಿತು.
ಭಾರತೀಯ ಪೈಲಟ್ ಯುಎಇಯ ಆಸ್ಪತ್ರೆಯೊಂದರಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ. ಭಾರತೀಯ ಪೈಲಟ್ ಸಂಪೂರ್ಣ ಗುಣಮುಖರಾದ ನಂತರ ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾರೆ ಎಂದು ಇಸ್ರೇಲ್ ಅಧ್ಯಕ್ಷ ಐಸಾಕ್ ಹರ್ಜೋಗ್ ತಿಳಿಸಿದ್ದಾರೆ. ಇದನ್ನೂ ಓದಿ: Flydubai Flight Case | ಉಗ್ರ ಬಿನ್‌ಲಾಡೆನ್ ಆರಾಧಕನಾಗಿದ್ದ ಹಾಮಾಮ್ – ವಿಚಾರಣೆ ವೇಳೆ ರಹಸ್ಯ ಬಯಲು
ನಾವು ಗೌರವಿಸುತ್ತಿರುವ ಇಸ್ರೇಲ್ ಹೀರೋ, ಭಾರತದ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ನಾವು ಹಾರೈಸುತ್ತೇವೆ. ಕ್ಯಾಪ್ಟನ್ ಮಚ್ಚಾರ್ ಅವರ ಅಸಾಧಾರಣ ಧೈರ್ಯ ಮತ್ತು ಅತ್ಯುತ್ತಮ ವೃತ್ತಿಪರತೆಯು ಒಂದು ದೊಡ್ಡ ದುರಂತವನ್ನು ತಪ್ಪಿಸಲು ನೆರವಾಯಿತು. ಅವರು ಚೇತರಿಸಿಕೊಂಡ ನಂತರ, ಇಸ್ರೇಲ್ ಜನರ ಪರವಾಗಿ ಅವರಿಗೆ ‘ಇಸ್ರೇಲ್‌ನ ನಾಗರಿಕ ಶೌರ್ಯಕ್ಕಾಗಿ ನೀಡುವ ಅಧ್ಯಕ್ಷೀಯ ಪ್ರಶಸ್ತಿ’ಯನ್ನು ಪ್ರದಾನ ಮಾಡುವುದು ನನಗೆ ಹೆಮ್ಮೆಯ ವಿಷಯವಾಗಿರುತ್ತದೆ ಎಂದು ಐಸಾಕ್ ಹೇಳಿದ್ದಾರೆ.

