ಟೆಲ್ ಅವಿವ್: ನೂರಾರು ಜನರ ಜೀವ ಉಳಿಸಿದ ಭಾರತೀಯ ಪೈಲಟ್ (Indian Pilot) ಕ್ಯಾಪ್ಟನ್ ಸ್ಮಿತ್ ಮಚ್ಚರ್ (Smit Machchhar) ಅವರಿಗೆ ಇಸ್ರೇಲ್ (Israel) ಪ್ರಧಾನಿ ಬೆಂಜಮಿನ್ ನೆತನ್ಯಾಹು (Benjamin Netanyahu) ಅವರು ಅಧಿಕೃತ ಆಹ್ವಾನ ನೀಡಿದ್ದಾರೆ.
2027ರ ಮೇ ತಿಂಗಳಲ್ಲಿ ನಡೆಯಲಿರುವ ಇಸ್ರೇಲ್ನ ಸ್ವಾತಂತ್ರ್ಯ ದಿನಾಚರಣೆಯ ಉದ್ಘಾಟನಾ ಸಮಾರಂಭದಲ್ಲಿ ಜ್ಯೋತಿ ಬೆಳಗಿಸಲು ಪ್ರಧಾನಿ ಮೋದಿ ಹಾಗೂ ಕ್ಯಾಪ್ಟನ್ ಸ್ಮಿತ್ ಅವರಿಗೆ ಆಹ್ವಾನ ನೀಡಲಾಗಿದೆ. ಸಾಂಪ್ರದಾಯಿಕವಾಗಿ ಇಸ್ರೇಲಿ ನಾಗರಿಕರಿಗೆ ಮಾತ್ರ ಈ ಆಚರಣೆ ಸೀಮಿತವಾಗಿತ್ತು. ಈ ಅಪರೂಪದ ಗೌರವ ಈಗ ಭಾರತೀಯರಿಗೆ ನೀಡಲಾಗುತ್ತಿರುವುದು ವಿಶೇಷವಾಗಿದೆ.
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪೈಲಟ್ ಸ್ಮಿತ್ ಅವರ ಜೊತೆ ಫೋನ್ನಲ್ಲಿ ಮಾತನಾಡಿದ ನೆತನ್ಯಾಹು, ಭಾರತ ಮತ್ತು ಇಸ್ರೇಲ್ನ ಧೈರ್ಯಶಾಲಿ ಜನರ ನಿಜವಾದ ಹೀರೋ ನೀವು. ಇಡೀ ಜಗತ್ತಿನ ಹೀರೋ ಕೂಡ ನೀವೇ ಎಂದು ಸ್ಮಿತ್ ಅವರ ಸಾಹಸವನ್ನು ಕೊಂಡಾಡಿದ್ದಾರೆ. ಈ ಸಂಭಾಷಣೆಯ ವಿಡಿಯೋವನ್ನು ನೆತನ್ಯಾಹು ಕಚೇರಿ ಬಿಡುಗಡೆ ಮಾಡಿದೆ.

ಹಮಾಮ್ ಅಲ್ಹಮಾಮಿ ತೀವ್ರ ವಿಚಾರಣೆ
ಫ್ಲೈ ದುಬೈ ವಿಮಾನ ಪತನಗೊಳಿಸುವ ಪ್ಲ್ಯಾನ್ ಮಾಡಿದ್ದ ಸಹ ಪೈಲಟ್ ಹಮಾಮ್ ಅಲ್ಹಮಾಮಿಯನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ. ಯುಎಇ, ಸೌಧಿ ಅರೇಬಿಯಾ, ಇಸ್ರೇಲ್ನ ತನಿಖಾ ಸಂಸ್ಥೆಗಳಿಂದ ವಿಚಾರಣೆ ನಡೆಯುತ್ತಿದೆ.
ಪ್ರಾರ್ಥನೆ ನೆಪದಲ್ಲಿ ʻಬೆನ್ನಿಗೆ ಚೂರಿʼ
ಕಾಕ್ಪಿಟ್ನಲ್ಲಿ ಕ್ಯಾಪ್ಟನ್ ಸ್ಮಿತ್ ಜೊತೆ ಸಾಮಾನ್ಯನಂತೆಯೇ ಅಲ್ಹಮಾಮಿ ಇದ್ದ. ಐದತ್ತು ನಿಮಿಷ ಪ್ರಾರ್ಥನೆ ಮಾಡಲು ಸ್ಮಿತ್ ಬಳಿ ಸಮಯ ಕೇಳಿದ್ದ. ಇದಾದ ನಾಲ್ಕೈದು ನಿಮಿಷದಲ್ಲಿಯೇ ಸ್ಮಿತ್ ಮೇಲೆ ಭೀಕರ ದಾಳಿ ನಡೆದಿತ್ತು. ಪ್ರಾರ್ಥನೆ ಮಾಡುವಾಗ ಗೌರವದ ದೃಷ್ಟಿಯಿಂದ ಸ್ಮಿತ್ ಹಿಂದೆ ನೋಡಿರಲಿಲ್ಲ. ನಾಲ್ಕೈದು ನಿಮಿಷದ ಬಳಿಕ ಸ್ಮಿತ್ ತಲೆಯ ಹಿಂಭಾಗಕ್ಕೆ ಕ್ರ್ಯಾಶ್ ಕೊಡಲಿಯಿಂದ ಅಲ್ಹಮಾಮಿ ಹಲ್ಲೆ ನಡೆಸಿದ್ದ.
ಈ ವೇಳೆ ಸ್ಮಿತ್ ಕಾಕ್ ಪಿಟ್ ಡೋರ್ ತೆರೆದು ಜೋರಾಗಿ ಕಿರುಚಿದ್ದರು. ಈ ವೇಳೆ ವಿಮಾನದಲ್ಲಿದ್ದ ಮಹಿಳಾ ಪ್ರಯಾಣಿಕರೊಬ್ಬರು ಕಾಕ್ಪಿಟ್ಗೆ ಧಾವಿಸಿದ್ದರು. ಕೂಡಲೇ ಆಕೆ ಕಿರುಚಿಕೊಂಡು ಸಹಾಯಕ್ಕಾಗಿ ಇತರರನ್ನು ಕರೆದಿದ್ದರು.
ಮುಂಭಾಗದ ಸೀಟುಗಳಲ್ಲಿದ್ದ ಹಲವು ಇಸ್ರೇಲಿ ಪ್ರಯಾಣಿಕರು ತಕ್ಷಣ ಕಾಕ್ಪಿಟ್ಗೆ ನುಗ್ಗಿ, ದಾಳಿ ನಡೆಸುತ್ತಿದ್ದ ಓಮನ್ ಸಹ-ಪೈಲಟ್ನನ್ನು ಹಿಡಿದು ನಿಯಂತ್ರಣಕ್ಕೆ ತಂದಿದ್ದರು. ಈ ವೇಳೆ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಟ್ರಕ್ ಚಾಲಕರೊಬ್ಬರು ವಿಮಾನವನ್ನು ನಿಯಂತ್ರಿಸಿದ್ದರು. ಬಳಿಕ ವಿಮಾನವನ್ನು ಸೌದಿ ಅರೇಬಿಯಾದ ತಬೂಕ್ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ತುರ್ತು ಲ್ಯಾಂಡಿಂಗ್ ಮಾಡಲಾಗಿತ್ತು.

