ಬೆಂಗಳೂರು: ಮೊಬೈಲ್ ಬಳಸುವಾಗ ಎಚ್ಚರ ವಹಿಸಬೇಕಾದ ಅಗತ್ಯವಿದೆ ಎಂಬುದನ್ನ ನೆನಪಿಸುವ ಘಟನೆ ಬೆಂಗಳೂರಿನ ಚಿಕ್ಕಬಾಣವಾರದಲ್ಲಿ ನಡೆದಿದೆ. ಕೈಯಲ್ಲಿ ಹಿಡಿದು ಮೊಬೈಲ್ ಬಳಸುತ್ತಿದ್ದ ವೇಳೆ ಏಕಾಏಕಿ ಮೊಬೈಲ್ನಲ್ಲಿ ಬೆಂಕಿ (Mobile Fire) ಕಾಣಿಸಿಕೊಂಡಿದ್ದು, ಮೊಬೈಲ್ ಮಾಲೀಕ ಕೆಲಕಾಲ ಶಾಕ್ಗೆ ಒಳಗಾಗಿದ್ದಾರೆ.
ಚಿಕ್ಕಬಾಣವಾರದಲ್ಲಿ ರಾತ್ರಿ 9 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ವಿವೇಕ್ ಎಂಬ ಯುವಕ ಮೊಬೈಲ್ ಬಳಸುತ್ತಿದ್ದಾಗ ಮೊಬೈಲ್ನಿಂದ ಏಕಾಏಕಿ ಹೊಗೆ ಬರಲು ಆರಂಭಿಸಿದೆ. ಏನಾಗುತ್ತಿದೆ ಎಂದು ಗಮನಿಸುವಷ್ಟರಲ್ಲಿ ಮೊಬೈಲ್ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ಕಾಣಿಸಿಕೊಂಡ ಕೂಡಲೇ ಗಾಬರಿಗೊಂಡ ವಿವೇಕ್ ಮೊಬೈಲನ್ನ ಕೈಯಿಂದ ಕೆಳಗೆ ಎಸೆದಿದ್ದಾರೆ. ಬಳಿಕ ಮೊಬೈಲ್ನ ಬ್ಯಾಟರಿ ಸಂಪೂರ್ಣವಾಗಿ ಸುಟ್ಟು ಕರಕಲಾಗಿದ್ದು, ಮೊಬೈಲ್ಗೆ ಭಾರೀ ಹಾನಿಯಾಗಿದೆ.

ವಿವೇಕ್ ಅವರು ಸುಮಾರು 3-4 ವರ್ಷಗಳ ಹಿಂದೆ ಈ ಮೊಬೈಲ್ನ್ನ ಖರೀದಿಸಿದ್ದರು. ಇಷ್ಟು ವರ್ಷಗಳ ಬಳಿಕ ಸಾಮಾನ್ಯವಾಗಿ ಬಳಸುತ್ತಿದ್ದ ಮೊಬೈಲ್ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿರುವುದು ಆತಂಕಕ್ಕೆ ಕಾರಣವಾಗಿದೆ.
ಮೊಬೈಲ್ನಲ್ಲಿ ಹೊಗೆ ಕಾಣಿಸಿಕೊಂಡಿದ್ದರಿಂದ ಕೆಲವೇ ಕ್ಷಣಗಳಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಆದರೆ ಮೊಬೈಲ್ ಕಳೆದುಕೊಂಡ ವಿವೇಕ್ ಆಘಾತಕ್ಕೆ ಒಳಗಾಗಿದ್ದಾರೆ.

