ವಿಭಿನ್ನ ಅಭಿನಯ, ಖಡಕ್ ಡೈಲಾಗ್ ಮತ್ತು ಗಂಭೀರ ಪಾತ್ರಗಳಿಗೆ ಹೆಸರುವಾಸಿಯಾಗಿದ್ದ ನಾನಾ ಪಾಟೇಕರ್ (Nana Patekar) 70ರ ಹರೆಯದಲ್ಲೂ ಫಿಟ್ನೆಸ್ಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದರು. ಆದರೆ ಒಂದು ಕಾಲದಲ್ಲಿ ನಾನಾ ಪಾಟೇಕರ್ ದಿನಕ್ಕೆ ಬರೋಬ್ಬರಿ 60 ಸಿಗರೇಟ್ ಸೇದುತ್ತಿದ್ದರಂತೆ. 56ನೇ ವಯಸ್ಸಿನವರೆಗೂ ಈ ಅಭ್ಯಾಸ ಮುಂದುವರಿಸಿದ್ದ ಅವರು, ಒಂದು ದಿನ ಏಕಾಏಕಿ ಸಿಗರೇಟ್ಗಳನ್ನು ಎಸೆದು ಧೂಮಪಾನಕ್ಕೆ ಗುಡ್ಬೈ ಹೇಳಿದ್ದರು.
`ಅಂಕುಶ್’, ‘ಕ್ರಾಂತಿವೀರ್’, `ತಿರಂಗಾ’, `ವೆಲ್ಕಮ್’, ‘ಟ್ಯಾಕ್ಸಿ ನಂಬರ್ 9211’ ಸೇರಿದಂತೆ ಹಲವು ಸಿನಿಮಾಗಳ ಮೂಲಕ ಪ್ರೇಕ್ಷಕರ ಮನ ಗೆದ್ದಿದ್ದ ನಾನಾ ಪಾಟೇಕರ್, ತಮ್ಮ ವೈಯಕ್ತಿಕ ಬದುಕಿನ ಕೆಲವು ವಿಚಾರಗಳಿಂದಲೂ ಸುದ್ದಿಯಾಗಿದ್ದರು. ಅದರಲ್ಲಿ ಅವರ ಧೂಮಪಾನದ (Smoking) ಅಭ್ಯಾಸವೂ ಒಂದು. 56ನೇ ವಯಸ್ಸಿನವರೆಗೂ ಅವರು ಚೈನ್ ಸ್ಮೋಕರ್ ಆಗಿದ್ದರು. ಪ್ರತಿದಿನ ಬರೋಬ್ಬರಿ 60 ಸಿಗರೇಟ್ಗಳನ್ನು ಸೇದುತ್ತಿದ್ದೆ ಎಂದು ಅವರು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.
ಒಂದೇ ದಿನ ತೆಗೆದುಕೊಂಡ ನಿರ್ಧಾರ:
ನಾನಾ ಪಾಟೇಕರ್ ಅವರು 2007-08ರ ಅವಧಿಯಲ್ಲಿ ಧೂಮಪಾನ ತ್ಯಜಿಸಿದ್ದರು. 2012ರಲ್ಲಿ ನೀಡಿದ್ದ ಸಂದರ್ಶನವೊಂದರಲ್ಲಿ ಈ ಬಗ್ಗೆ ಮಾತನಾಡಿದ್ದ ಅವರು, ಯಾವುದೇ ದೊಡ್ಡ ಯೋಜನೆ ಅಥವಾ ಹಂತ ಹಂತದ ಪ್ರಯತ್ನವಿಲ್ಲದೆ ಒಂದೇ ದಿನ ಈ ನಿರ್ಧಾರ ಕೈಗೊಂಡಿದ್ದಾಗಿ ಹೇಳಿದ್ದರು. 56ನೇ ವಯಸ್ಸಿನವರೆಗೂ ದಿನಕ್ಕೆ 60 ಸಿಗರೇಟ್ ಸೇದುತ್ತಿದ್ದ ವ್ಯಕ್ತಿ ಏಕಾಏಕಿ ಧೂಮಪಾನವನ್ನೇ ಬಿಟ್ಟಿದ್ದು ಅನೇಕರಿಗೆ ಅಚ್ಚರಿ ಮೂಡಿಸಿತ್ತು.
ಒಂದು ಮಾತು ನಾನಾ ಪಾಟೇಕರ್ ಬದುಕನ್ನೇ ಬದಲಿಸಿತು:
2015ರಲ್ಲಿ ನೀಡಿದ್ದ ಸಂದರ್ಶನದಲ್ಲಿ ನಾನಾ ಪಾಟೇಕರ್ ತಮ್ಮ ಧೂಮಪಾನ ತ್ಯಜಿಸುವ ನಿರ್ಧಾರದ ಹಿಂದಿನ ಒಂದು ಭಾವನಾತ್ಮಕ ಘಟನೆಯನ್ನು ಹಂಚಿಕೊಂಡಿದ್ದರು. ತಮ್ಮ ಸ್ನೇಹಿತರೊಬ್ಬರ ಪತ್ನಿಯನ್ನು ನಾನಾ ಪಾಟೇಕರ್ ಸಹೋದರಿಯಂತೆ ನೋಡುತ್ತಿದ್ದರು. ಆಕೆಯ ಏಕೈಕ ಪುತ್ರ ಮೃತಪಟ್ಟಿದ್ದ. ಆ ಸಮಯದಲ್ಲಿ ನಾನಾ ಪಾಟೇಕರ್ ಕೆಮ್ಮುತ್ತಿದ್ದರು. ಆಗ ಆ ಮಹಿಳೆ ಹೇಳಿದ ಒಂದು ಮಾತು ಅವರ ಮನಸ್ಸಿನಲ್ಲಿ ಆಳವಾಗಿ ಉಳಿಯಿತು. ನಾನು ಇನ್ನೂ ಏನೇನು ನೋಡಬೇಕಿದೆ? ಎಂಬ ಆಕೆಯ ಪ್ರಶ್ನೆ ನಾನಾ ಪಾಟೇಕರ್ ಅವರನ್ನು ಆಲೋಚಿಸುವಂತೆ ಮಾಡಿತ್ತು. ಆ ಬಳಿಕ ತಮ್ಮ ಆರೋಗ್ಯದ ಬಗ್ಗೆ ಗಂಭೀರವಾಗಿ ಯೋಚಿಸಿದ ಅವರು ಸಿಗರೇಟ್ಗಳನ್ನು ಎಸೆದು ಧೂಮಪಾನ ತ್ಯಜಿಸಿದ್ದರು.
ಪ್ರಿಯದರ್ಶನ್ಗೂ ಧೂಮಪಾನ ಬಿಡಲು ಹೇಳಿದ್ದ ಪಾಟೇಕರ್:
ನಾನಾ ಪಾಟೇಕರ್ ಸ್ವತಃ ಧೂಮಪಾನ ತ್ಯಜಿಸಿದ ಬಳಿಕ ಇತರರಿಗೂ ಅದನ್ನು ಬಿಡುವಂತೆ ಸಲಹೆ ನೀಡುತ್ತಿದ್ದರು. ನಿರ್ದೇಶಕ ಪ್ರಿಯದರ್ಶನ್ ಅವರಿಗೂ ಅವರು ಧೂಮಪಾನ ತ್ಯಜಿಸುವಂತೆ ಹೇಳಿದ್ದರು. `ಕಮಾಲ್ ಧಮಾಲ್ ಮಾಲಮಾಲ್’ ಸಿನಿಮಾದ ಕೆಲಸದ ಸಂದರ್ಭದಲ್ಲಿ ಪ್ರಿಯದರ್ಶನ್ ಅವರೊಂದಿಗೆ ನಾನಾ ಪಾಟೇಕರ್ ಕೆಲಸ ಮಾಡುತ್ತಿದ್ದರು. ಪ್ರಿಯದರ್ಶನ್ ಅವರು ಧೂಮಪಾನ ತ್ಯಜಿಸುತ್ತಿರುವುದಾಗಿ ಹೇಳಿದಾಗ ನಾನಾ ಪಾಟೇಕರ್ ಸಂತಸ ವ್ಯಕ್ತಪಡಿಸಿದ್ದರು. `ಧೂಮಪಾನ ನಿಮ್ಮನ್ನು ಕೊಲ್ಲುತ್ತದೆ’ ಎಂದು ಅವರು ಹೇಳಿದ್ದರು.
ಆಮೀರ್ ಖಾನ್ಗೂ ಕೊಟ್ಟಿದ್ದರು ಸಲಹೆ:
ನಾನಾ ಪಾಟೇಕರ್ ಹಾಗೂ ಆಮೀರ್ ಖಾನ್ ನಡುವೆ ನಡೆದಿದ್ದ ಒಂದು ಸಂಭಾಷಣೆಯಲ್ಲೂ ಧೂಮಪಾನ ಮತ್ತು ಮದ್ಯಪಾನದ ವಿಚಾರ ಪ್ರಸ್ತಾಪವಾಗಿತ್ತು. ತಾವು ಸಿಗರೇಟ್ ಸೇದುತ್ತಿದ್ದು, ಮದ್ಯಪಾನವನ್ನು ಈಗ ತ್ಯಜಿಸಿದ್ದೇನೆ ಎಂದು ಆಮೀರ್ ಖಾನ್ ಹೇಳಿದ್ದರು. ಹಿಂದೆ ಮದ್ಯ ಸೇವಿಸುತ್ತಿದ್ದಾಗ ಇಡೀ ರಾತ್ರಿ ಕುಡಿಯುತ್ತಿದ್ದೆ ಎಂದು ಅವರು ತಿಳಿಸಿದ್ದರು. ಅಭ್ಯಾಸವನ್ನು ಮಿತಿಮೀರಿಸಿದಾಗ ಅದು ಹಾನಿಕಾರಕವಾಗುತ್ತದೆ ಎಂದು ನಾನಾ ಪಾಟೇಕರ್ ಹೇಳಿದ್ದರು. ಆರೋಗ್ಯಕರ ಜೀವನಶೈಲಿಯ ಬಗ್ಗೆ ಆಮೀರ್ ಖಾನ್ ಅವರಿಗೆ ಸಲಹೆಯನ್ನೂ ನೀಡಿದ್ದರು. ನಟರಿಗೆ ಸಿನಿಮಾಗಳೇ ಒಂದು ರೀತಿಯ ಔಷಧಿಯಂತೆ ಕೆಲಸ ಮಾಡುತ್ತವೆ ಎಂದು ಹೇಳಿದ್ದ ನಾನಾ ಪಾಟೇಕರ್, ಆಮೀರ್ ಖಾನ್ ನಿರಂತರವಾಗಿ ಸಿನಿಮಾಗಳಲ್ಲಿ ಕೆಲಸ ಮಾಡಬೇಕು ಎಂದು ಸಲಹೆ ನೀಡಿದ್ದರು.
75ರ ಹರೆಯದಲ್ಲೂ ಫಿಟ್ನೆಸ್ಗೆ ಆದ್ಯತೆ:
ಒಂದು ಕಾಲದಲ್ಲಿ ದಿನಕ್ಕೆ 60 ಸಿಗರೇಟ್ ಸೇದುತ್ತಿದ್ದ ನಾನಾ ಪಾಟೇಕರ್, ನಂತರ ತಮ್ಮ ಜೀವನಶೈಲಿಯಲ್ಲಿ ಬದಲಾವಣೆ ಮಾಡಿಕೊಂಡಿದ್ದರು. ವಯಸ್ಸು 70ರ ಗಡಿ ದಾಟಿದರೂ ಫಿಟ್ನೆಸ್ ಬಗ್ಗೆ ಅವರು ಕಾಳಜಿ ವಹಿಸುತ್ತಿದ್ದರು.
ಮೂರು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು, ಎರಡು ಮಹಾರಾಷ್ಟ್ರ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ಹಾಗೂ ನಾಲ್ಕು ಫಿಲ್ಮ್ಫೇರ್ ಪ್ರಶಸ್ತಿಗಳನ್ನು ಪಡೆದಿದ್ದ ನಾನಾ ಪಾಟೇಕರ್, ನಟನಾಗಿ ಮಾತ್ರವಲ್ಲದೆ ನಿರ್ದೇಶಕರಾಗಿಯೂ ಗುರುತಿಸಿಕೊಂಡಿದ್ದರು. `ನಟಸಾಮ್ರಾಟ್’, ‘ಪರಿಂದಾ’, `ಅಬ್ ತಕ್ ಛಪ್ಪನ್’, `ವೆಲ್ಕಮ್’, `ಯಶವಂತ್’ ಸೇರಿದಂತೆ ಹಲವು ಸಿನಿಮಾಗಳು ಅವರ ವೃತ್ತಿಜೀವನದ ಪ್ರಮುಖ ಚಿತ್ರಗಳಾಗಿವೆ. 2013ರಲ್ಲಿ ಸಿನಿಮಾ ಮತ್ತು ಕಲಾ ಕ್ಷೇತ್ರಕ್ಕೆ ನೀಡಿದ ಕೊಡುಗೆಗಾಗಿ ಅವರಿಗೆ ಪದ್ಮಶ್ರೀ ಪ್ರಶಸ್ತಿಯೂ ಲಭಿಸಿತ್ತು.

