ನವದೆಹಲಿ: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ (Renukaswamy Murder Case) ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್‌ಗೆ (Darshan) ಮತ್ತೊಂದು ಭಾರಿ ಕಾನೂನು ಹಿನ್ನಡೆಯಾಗಿದೆ.
ಪ್ರಕರಣದ 14ನೇ ಆರೋಪಿ ಪ್ರದೂಷ್‌ನನ್ನು ಮಾಫಿ ಸಾಕ್ಷಿಯಾಗಿ (ಅಪ್ರೂವರ್) ಪರಿಗಣಿಸಿರುವುದನ್ನು ಪ್ರಶ್ನಿಸಿ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಸುಪ್ರೀಂ ಕೋರ್ಟ್‌ನಲ್ಲಿ (Supreme Court) ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ.
ಹೈಕೋರ್ಟ್ ನೀಡಿದ ಆದೇಶವನ್ನು ಪ್ರಶ್ನಿಸಿ ವಿಜಯಲಕ್ಷ್ಮೀ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು. ನ್ಯಾ. ಜೆ.ಬಿ ಪಾರ್ದಿವಾಲ ನೇತೃತ್ವದ ದ್ವಿ ಸದಸ್ಯ ಪೀಠ ವಿಚಾರಣೆ ನಡೆಸಿತು. ವಿಚಾರಣೆ ಬಳಿ ಮಾಫಿ ಸಾಕ್ಷಿಗೆ ಸಂಬಂಧಿಸಿದಂತೆ ಸೆಷನ್ಸ್ ನ್ಯಾಯಲಯದ ಆದೇಶ ಎತ್ತಿ ಹಿಡಿದ ಹೈಕೋರ್ಟ್ ನಿಲುವು ಸರಿಯಾಗಿದೆ ಎಂದು ಸುಪ್ರೀಂಕೋರ್ಟ್ ಹೇಳಿದೆ.
ವಿಜಯಲಕ್ಷ್ಮಿ ಪರ ಹಿರಿಯ ವಕೀಲ ನಾಗಮುತ್ತು ವಾದ ಮಂಡಿಸಿದರು, ಮಾಫಿ ಸಾಕ್ಷಿಯನ್ನು ಪರಿಗಣಿಸುವ ಅಧಿಕಾರ ಪ್ರಿನ್ಸಿಪಲ್ ಕೋರ್ಟ್‌ಗೆ ಮಾತ್ರ ಇದೆ ಎಂದು ವಾದಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ಮಾಫಿ ಸಾಕ್ಷಿಯನ್ನು ಪರಿಗಣಿಸಲು ಸಾಧ್ಯವಿಲ್ಲ ಎಂಬ ವಾದವನ್ನು ಒಪ್ಪಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ತಿಳಿಸಿತು. ಪ್ರಕರಣದಲ್ಲಿ ಬೇರೆ ಯಾವುದೇ ಕಾನೂನು ಅಂಶಗಳಿದ್ದರೆ ಆ ಕುರಿತು ವಾದ ಮಂಡಿಸುವಂತೆ ಪೀಠ ಸೂಚಿಸಿತು. ಟ್ರಯಲ್ ಕೋರ್ಟ್‌ಗೆ ಅಧಿಕಾರ ಇಲ್ಲ ಎಂಬ ವಿಚಾರವನ್ನೇ ಮುಂದಿಟ್ಟುಕೊಂಡು ವಾದಿಸುವ ಬದಲು, ಅದಕ್ಕಿಂತ ಪರಿಣಾಮಕಾರಿ ಕಾನೂನು ಅಂಶಗಳಿದ್ದರೆ ಅವುಗಳನ್ನು ಮಂಡಿಸುವಂತೆ ನ್ಯಾಯಮೂರ್ತಿ ಪರ್ದಿವಾಲಾ ಸೂಚಿಸಿದರು.
ಇದೇ ವೇಳೆ ಮಾಫಿ ಸಾಕ್ಷಿಯ ವಿಚಾರಣೆಯ ಸಂದರ್ಭದಲ್ಲಿ ಆರೋಪಿಗಳಿಗೆ ಕ್ರಾಸ್ ಎಕ್ಸಾಮಿನೇಷನ್ ನಡೆಸುವ ಹಕ್ಕು ಇದೆ ಎಂದು ತಿಳಿಸಲಾಯಿತು. ಈ ಮೂಲಕ ಮಾಫಿ ಸಾಕ್ಷಿ ನೀಡುವ ಹೇಳಿಕೆಯನ್ನು ವಿಚಾರಣೆಯ ಸಂದರ್ಭದಲ್ಲಿ ಪ್ರಶ್ನಿಸುವ ಅವಕಾಶ ಆರೋಪಿಗಳಿಗೆ ಇರುವುದನ್ನು ಪೀಠ ಸ್ಪಷ್ಟಪಡಿಸಿದೆ. ಅರ್ಜಿಯನ್ನು ವಜಾಗೊಳಿಸಿದ ಬಳಿಕವೂ ವಿಜಯಲಕ್ಷ್ಮಿ ಪರ ವಕೀಲ ನಾಗಮುತ್ತು ವಾದ ಮುಂದುವರಿಸಲು ಪ್ರಯತ್ನಿಸಿದರು. ಆದರೆ ಅರ್ಜಿ ವಜಾಗೊಂಡ ಹಿನ್ನೆಲೆಯಲ್ಲಿ ಹೆಚ್ಚಿನ ವಾದವನ್ನು ಆಲಿಸಲು ಸುಪ್ರೀಂಕೋರ್ಟ್ ಮುಂದಾಗಲಿಲ್ಲ.

