ನವದೆಹಲಿ: ಭಾರತ ಮಹಿಳಾ ಕ್ರಿಕೆಟ್ ತಂಡದ(Indian Women’s Cricket Team) ನಾಯಕಿ ಸ್ಥಾನಕ್ಕೆ ಹರ್ಮನ್‌ಪ್ರೀತ್ ಕೌರ್ ರಾಜೀನಾಮೆ ನೀಡಿದ ಬೆನ್ನಲ್ಲೇ, ಭಾರತೀಯ ಡ್ರೆಸ್ಸಿಂಗ್ ರೂಮ್‌ನಲ್ಲಿ ಎಲ್ಲವೂ ಸರಿಯಿಲ್ಲ ಹಾಗೂ ಹರ್ಮನ್‌ಪ್ರೀತ್ ಮತ್ತು ಮಂಧಾನ(Smriti Mandhana) ನಡುವೆ ತೀವ್ರ ಶೀತಲ ಸಮರ ನಡೆಯುತ್ತಿರುವ ಸ್ಫೋಟಕ ವಿಚಾರ ಪ್ರಕಟವಾಗಿದೆ.
ಹೌದು. ಸಿಸಿಐ ನಡೆಸಿದ ಮಹತ್ವದ ಪರಾಮರ್ಶನಾ ಸಭೆಯ ಬಳಿಕ 37 ವರ್ಷದ ಹರ್ಮನ್‌ಪ್ರೀತ್ ಕೌರ್(Harmanpreet Kaur) ನಾಯಕತ್ವದಿಂದ ಕೆಳಗಿಳಿಯುವ ನಿರ್ಧಾರ ಪ್ರಕಟಿಸಿದ್ದಾರೆ. ಜಪಾನ್‌ನಲ್ಲಿ ನಡೆದ ಏಷ್ಯನ್ ಗೇಮ್ಸ್‌ನಲ್ಲಿ (Asian Games) ಭಾರತಕ್ಕೆ ಸತತ ಎರಡನೇ ಚಿನ್ನದ ಪದಕ ಗೆದ್ದುಕೊಟ್ಟ ಹೆಗ್ಗಳಿಕೆಯೊಂದಿಗೆ ಅವರು ಕ್ಯಾಪ್ಟನ್ಸಿಗೆ ವಿದಾಯ ಹೇಳಿದ್ದಾರೆ.
ರಾಜೀನಾಮೆ ಬೆನ್ನಲ್ಲೇ 30 ವರ್ಷದ ಎಡಗೈ ಬ್ಯಾಟರ್ ಸ್ಮೃತಿ ಮಂಧಾನ ಅವರ ಹೆಗಲಿಗೆ ನಾಯಕತ್ವದ ಹೊಣೆಗಾರಿಕೆ ಬಂದಿದೆ. ಆದರೆ ಈ ನಾಯಕತ್ವದ ಪಟ್ಟ ಮಂಧಾನಗೆ ಸಿಗುವುದು ಸಾಕಷ್ಟು ತಡವಾಯಿತೇ ಎಂಬ ಚರ್ಚೆಯೂ ಕ್ರಿಕೆಟ್ ವಲಯದಲ್ಲಿ ಶುರುವಾಗಿದೆ.
ಈ ಹಿಂದೆ ಉತ್ತಮ ಒಡನಾಟ ಹೊಂದಿದ್ದ ಹರ್ಮನ್‌ಪ್ರೀತ್ ಮತ್ತು ಮಂಧಾನ ನಡುವೆ ನಾಯಕತ್ವದ ವಿಚಾರವೇ ದೊಡ್ಡ ಬಿರುಕಿಗೆ ಕಾರಣವಾಗಿದೆ ಎಂದು ಬಿಸಿಸಿಐ ಮೂಲವನ್ನು ಆಧಾರಿಸಿ ಮಾಧ್ಯಮ ವರದಿ ಮಾಡಿದೆ.
ಕಳೆದ ಕೆಲವು ಸಮಯದಿಂದ ಇಬ್ಬರೂ ಪರಸ್ಪರ ಮುಖಾಮುಖಿ ನೋಡಲು (Not seeing eye to eye) ಇಷ್ಟಪಡುತ್ತಿರಲಿಲ್ಲ. ಇದು ತಂಡದ ಡ್ರೆಸ್ಸಿಂಗ್ ರೂಮ್‌ನಲ್ಲಿ ತೀವ್ರ ಅಸಮಾಧಾನ ಮತ್ತು ಮುಜುಗರದ ವಾತಾವರಣ ಸೃಷ್ಟಿಸಿತ್ತು ಎಂದು ತಂಡದ ಆಂತರಿಕ ಮೂಲಗಳು ಬಹಿರಂಗಪಡಿಸಿವೆ.

ಇತ್ತೀಚೆಗೆ ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಅಧ್ಯಕ್ಷತೆಯಲ್ಲಿ ಗುವಾಹಟಿಯಲ್ಲಿ ನಡೆದ ಸಭೆಯಲ್ಲಿ, ತಂಡದಲ್ಲಿ ನಾಯಕತ್ವ ಬದಲಾವಣೆ ಅನಿವಾರ್ಯ ಎಂಬುದನ್ನು ಹರ್ಮನ್‌ಪ್ರೀತ್‌ಗೆ ಸ್ಪಷ್ಟಪಡಿಸಲಾಗಿತ್ತು. ಇದರ ಬೆನ್ನಲ್ಲೇ ಅವರು ಸ್ವತಃ ರಾಜೀನಾಮೆ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ.
ಮಹಿಳಾ ತಂಡದಲ್ಲಿ ನಾಯಕತ್ವ ಹಸ್ತಾಂತರ ಪ್ರಕ್ರಿಯೆಯನ್ನು ಸಮರ್ಪಕವಾಗಿ ನಿರ್ವಹಿಸದ ಆಯ್ಕೆಗಾರರ ವೈಫಲ್ಯದ ವಿರುದ್ಧ ಭಾರತದ ಮಾಜಿ ನಾಯಕಿ ಮಿಥಾಲಿ ರಾಜ್ ಈ ಹಿಂದೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಕಳೆದ 2-3 ವರ್ಷಗಳ ಹಿಂದೆಯೇ ಮಂಧಾನಗೆ ಏಕದಿನ ನಾಯಕತ್ವ ನೀಡಬೇಕಿತ್ತು. ಹರ್ಮನ್‌ಪ್ರೀತ್ ಫಾರ್ಮ್ ಮತ್ತು ಫಿಟ್‌ನೆಸ್ ಪ್ರಶ್ನಾರ್ಹವಾಗಿದೆ ಎಂದು ಮಿಥಾಲಿ ಈ ಹಿಂದೆಯೇ ಎಚ್ಚರಿಸಿದ್ದರು.
2022ರಲ್ಲಿ ಮಿಥಾಲಿ ರಾಜ್ ಅವರಿಂದ ಹರ್ಮನ್‌ಪ್ರೀತ್ ನಾಯಕತ್ವ ವಹಿಸಿಕೊಂಡಾಗಲೂ ಇಂತಹದ್ದೇ ಮುಸುಕಿನ ಗುದ್ದಾಟ ನಡೆದು ತಂಡದಲ್ಲಿ ಬಣಗಳು ಸೃಷ್ಟಿಯಾಗಿದ್ದವು. ಈಗ ಅದೇ ಇತಿಹಾಸ ಮರುಕಳಿಸಿದೆ ಎಂದು ವಿಶ್ಲೇಷಿಸಲಾಗಿದೆ.
ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 10,000ಕ್ಕೂ ಹೆಚ್ಚು ರನ್‌ಗಳನ್ನು ಕಲೆಹಾಕಿ, ತಾಂತ್ರಿಕವಾಗಿ ಮತ್ತು ಹೊಡಿಬಡಿ ಆಟದಲ್ಲಿ ವಿಶ್ವದ ಅಗ್ರ ಬ್ಯಾಟರ್ ಆಗಿ ಗುರುತಿಸಿಕೊಂಡಿರುವ ಮಂಧಾನಗೆ ಈಗ ಪೂರ್ಣ ಪ್ರಮಾಣದ ಸಾರಥ್ಯ ಸಿಕ್ಕಿದೆ. ಆದರೆ, ಹರ್ಮನ್‌ಪ್ರೀತ್ ಕೌರ್ ಕೇವಲ ಆಟಗಾರ್ತಿಯಾಗಿ ಇನ್ನೂ 2-3 ವರ್ಷ ತಂಡದಲ್ಲಿ ಮುಂದುವರಿಯುವ ಇಂಗಿತ ವ್ಯಕ್ತಪಡಿಸಿದ್ದಾರೆ. ನೂತನ ನಾಯಕಿ ಸ್ಮೃತಿ ಮಂಧಾನ ನೇತೃತ್ವದಲ್ಲಿ ಹರ್ಮನ್‌ಪ್ರೀತ್ ಹೇಗೆ ಹೊಂದಿಕೊಳ್ಳಲಿದ್ದಾರೆ ಮತ್ತು ಇಬ್ಬರ ನಡುವಿನ ಈ ವೈಮನಸ್ಸು ಭಾರತ ತಂಡದ ಪ್ರದರ್ಶನದ ಮೇಲೆ ಯಾವ ಪರಿಣಾಮ ಬೀರಲಿದೆ ಎಂಬುದು ಕುತೂಹಲ ಮೂಡಿಸಿದೆ.


