ಪ್ರೇಮಾನಂದ ಮಹಾರಾಜ್ ಅವರ ಆಶ್ರಮಕ್ಕೆ ಭೇಟಿ ನೀಡಿದ್ದಕ್ಕಾಗಿ ವಿರಾಟ್ ಕೊಹ್ಲಿಗೆ ಬರೋಬ್ಬರಿ 5 ಕೋಟಿ ಹಣ ನೀಡಲಾಗಿದೆ ಎಂಬ ವಿಚಾರ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ. ಆದರೆ ಇದಕ್ಕೆ ಕೊಹ್ಲಿ ಅವರ ಅಧಿಕೃತ ವಕ್ತಾರರು ಸ್ಪಷ್ಟನೆ ನೀಡಿದ್ದಾರೆ.
ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಆಗಾಗ್ಗೆ ಪ್ರೇಮಾನಂದ ಮಹಾರಾಜ್ ಅವರ ಆಶ್ರಮಕ್ಕೆ ಭೇಟಿ ನೀಡುತ್ತಿರುತ್ತಾರೆ. ಇದೀಗ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಹೊಸದೊಂದು ಆರೋಪ ಕೇಳಿಬಂದಿದ್ದು, ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಶುರುವಾಗಿದೆ.
ಈ ಬಗ್ಗೆ ಮಾತನಾಡಿರುವ ಕೊಹ್ಲಿ ಅವರ ಅಧಿಕೃತ ವಕ್ತಾರರು, ಈ ಹೇಳಿಕೆ ಸಂಪೂರ್ಣ ಸುಳ್ಳು, ಆಧಾರರಹಿತ ಎಂದು ಹೇಳಿದ್ದಾರೆ. ವಿರಾಟ್ ಕೊಹ್ಲಿ ಅವರು ಪ್ರೇಮಾನಂದ ಮಹಾರಾಜ್ ಅವರ ಮೇಲಿರುವ ನಂಬಿಕೆ ಮತ್ತು ಗೌರವದಿಂದ ಆಶ್ರಮಕ್ಕೆ ಭೇಟಿ ನೀಡುತ್ತಿದ್ದಾರೆ. ಯಾವುದೇ ಹಣದ ವ್ಯವಹಾರವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಈ ರೀತಿಯ ವಿಷಯಗಳನ್ನು ಹರಡುವ ಮೊದಲು ಪರಿಸೀಲನೆ ಮಾಡಬೇಕು.
ಅಷ್ಟಕ್ಕೂ ಈ 5 ಕೋಟಿ ರೂ. ಆರೋಪ ಮಾಡಿದ್ದು ಯಾರು ಅನ್ನೋದಾದ್ರೆ, ಶ್ರೀ ಕೃಷ್ಣ ಜನ್ಮಭೂಮಿ ಸಂಘರ್ಷ ನ್ಯಾಸ್ನ ಅಧ್ಯಕ್ಷ ದಿನೇಶ್ ಶರ್ಮಾ. ‘ಫಲಹರಿ ಮಹಾರಾಜ್’ ಎಂದೇ ಕರೆಯಲ್ಪಡುವ ದಿನೇಶ್ ಶರ್ಮಾ ಅವರು ಈ ಆರೋಪ ಮಾಡಿದ್ದಾರೆ.
ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರಿಗೆ ಬರೆದ ಪತ್ರದಲ್ಲಿ, ರಾಜಸ್ಥಾನ ಮೂಲದ ಖಾಸಗಿ ಕಂಪನಿಯೊಂದು ವಿರಾಟ್ ಕೊಹ್ಲಿಯನ್ನು ಪ್ರೇಮಾನಂದ ಮಹಾರಾಜ್ ಅವರ ಆಶ್ರಮಕ್ಕೆ ಕರೆತರಲು 5 ಕೋಟಿ ರೂ. ಖರ್ಚು ಮಾಡಿದೆ ಎಂದು ಆರೋಪಿಸಲಾಗಿದೆ ಎಂದು ವರದಿಯಾಗಿದೆ.
ವಿರಾಟ್ ಮತ್ತು ಅನುಷ್ಕಾ ಮೊದಲ ಬಾರಿಗೆ 2023ರ ಜನವರಿಯಲ್ಲಿ ತಮ್ಮ ಮಗಳು ವಾಮಿಕಾ ಜೊತೆ ವೃಂದಾವನದಲ್ಲಿರುವ ಪ್ರೇಮಾನಂದ ಮಹಾರಾಜ್ ಅವರ ಆಶ್ರಮಕ್ಕೆ ಭೇಟಿ ನೀಡಿದ್ದರು. ನಂತರವೂ ದಂಪತಿ ಹಲವು ಬಾರಿ ಮಹಾರಾಜ್ ಅವರನ್ನು ಭೇಟಿಯಾಗಿದ್ದಾರೆ.
ಈ ಭೇಟಿಗಳ ವೇಳೆ ಪ್ರೇಮಾನಂದ ಮಹಾರಾಜ್ ಅವರು ವಿರಾಟ್ ಮತ್ತು ಅನುಷ್ಕಾಗೆ ಜೀವನದ ಬಗ್ಗೆ ಹಲವು ಮಾತುಗಳನ್ನು ಹೇಳಿದ್ದರು. ನಿಮ್ಮ ಕೆಲಸವನ್ನು ಸೇವೆಯಂತೆ ನೋಡಿ, ವಿನಮ್ರರಾಗಿರಿ. ದೇವರ ಮೇಲೆ ನಂಬಿಕೆ ಇಟ್ಟುಕೊಳ್ಳಿ ಎಂದು ಸಲಹೆ ನೀಡಿದ್ದರು. ಇದನ್ನೂ ಓದಿ: ಬೆಂಗಳೂರಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟ; ತಾಯಿ, 3 ವರ್ಷದ ಮಗು ಸಾವು
ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ ಬಳಿಕವೂ ಪ್ರೇಮಾನಂದ ಮಹಾರಾಜ್ ಅವರನ್ನು ಭೇಟಿಯಾಗಿದ್ದರು. ಆ ವೇಳೆ ಜೀವನದಲ್ಲಿ ಸಿಗುವ ಯಶಸ್ಸು, ಹೆಸರು ಮತ್ತು ಹಣಕ್ಕಿಂತ ಒಳಗಿನ ನೆಮ್ಮದಿ ಮುಖ್ಯ ಎಂಬ ರೀತಿಯಲ್ಲಿ ಮಹಾರಾಜ್ ಮಾತನಾಡಿದ್ದರು.
ಹೀಗಾಗಿ ಇದೀಗ ವಿರಾಟ್ ಕೊಹ್ಲಿಗೆ 5 ಕೋಟಿ ರೂ. ಹಣ ನೀಡಲಾಗಿದೆ ಎಂಬ ಆರೋಪಕ್ಕೆ ಅವರ ವಕ್ತಾರರು ನೀಡಿರುವ ಸ್ಪಷ್ಟನೆ ಸಾಕಷ್ಟು ಚರ್ಚೆಯಾಗುತ್ತಿದೆ. ಕೊಹ್ಲಿ ಅಭಿಮಾನಿಗಳೂ ಕೂಡ ಈ ವಿಚಾರದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ.ಇದನ್ನೂ ಓದಿ: ಟ್ರ್ಯಾಪ್ಗೆ ಯತ್ನ ನಡೆಯುತ್ತಿದೆ, ಹುಷಾರಾಗಿರಿ – ಸಚಿವರಿಗೆ ಡಿಕೆಶಿ ಎಚ್ಚರಿಕೆ

