ಮಾಸ್ಕೋ: ರಷ್ಯಾದಲ್ಲಿ ಸಂಶೋಧಕಿಯೊಬ್ಬರು ತೀವ್ರ ನ್ಯುಮೋನಿಯಾದಿಂದ ಮೃತಪಟ್ಟ ಪ್ರಕರಣದ ಬಗ್ಗೆ ಆತಂಕ ಮೂಡಿದ್ದು, ಇದೀಗ ವಿಶ್ವ ಆರೋಗ್ಯ ಸಂಸ್ಥೆ (WHO) ಸ್ಪಷ್ಟನೆ ನೀಡಿದೆ. ರಷ್ಯಾದಲ್ಲಿ ಪ್ಲೇಗ್ ಪ್ರಕರಣ ಪತ್ತೆಯಾಗಿಲ್ಲ ಎಂದು WHO ತಿಳಿಸಿದೆ.
ಅಕ್ಟೋಬರ್ 2ರಂದು ತೀವ್ರ ನ್ಯುಮೋನಿಯಾದಿಂದ ಸಂಶೋಧಕಿ ಮೃತಪಟ್ಟಿದ್ದರು. ಪ್ರಯೋಗಾಲಯದಲ್ಲಿ ಆಕಸ್ಮಿಕವಾಗಿ ಸೋಂಕು ತಗುಲಿದ್ದು, ಇದು ನ್ಯುಮೋನಿಕ್ ಪ್ಲೇಗ್ ಆಗಿರಬಹುದು ಎಂಬ ಆರಂಭಿಕ ವರದಿ ಬಂದಿತ್ತು. ಇದರಿಂದ ವಿಶ್ವದಾದ್ಯಂತ ಆತಂಕ ಶುರುವಾಗಿತ್ತು.
ರಷ್ಯಾ ಆರೋಗ್ಯ ಅಧಿಕಾರಿಗಳಿಂದ WHOಗೆ ಯಾವುದೇ ಪ್ಲೇಗ್ ಪ್ರಕರಣ ವರದಿಯಾಗಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ. ಈ ಪ್ರಕರಣದ ಬಗ್ಗೆ WHO ಸಕ್ರಿಯವಾಗಿ ಮಾಹಿತಿ ಸಂಗ್ರಹಿಸುತ್ತಿದೆ.
ಇರ್ಕುಟ್ಸ್ಕ್‌ನಲ್ಲಿ ಈ ಬಗ್ಗೆ ಸಾಂಕ್ರಾಮಿಕ ರೋಗಶಾಸ್ತ್ರೀಯ ತನಿಖೆ ನಡೆಸಲಾಗಿದ್ದು, ಮೃತ ಸಂಶೋಧಕಿಯ ಸಂಪರ್ಕದಲ್ಲಿದ್ದವರನ್ನು ಗುರುತಿಸಲಾಗಿದೆ. ಅವರಿಗೆ ವೈದ್ಯಕೀಯ ಮೇಲ್ವಿಚಾರಣೆ ಮತ್ತು ಪರೀಕ್ಷೆ ನಡೆಸಲಾಗಿದೆ.
ಸಂಪರ್ಕಿತರಲ್ಲಿ ಹೆಚ್ಚಿನ ಅಪಾಯದ ಯಾವುದೇ ರೋಗಕಾರಕ ಪತ್ತೆಯಾಗಿಲ್ಲ ಎಂದು ವರದಿಯಾಗಿದೆ. ಇದೀಗ ಎಲ್ಲ ಸಂಪರ್ಕಿತರ ವೈದ್ಯಕೀಯ ಮೇಲ್ವಿಚಾರಣೆಯೂ ಪೂರ್ಣಗೊಂಡಿದೆ.
ರಷ್ಯಾ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿರುವುದಾಗಿ WHO ತಿಳಿಸಿದೆ. ಅಗತ್ಯವಿದ್ದರೆ ತಾಂತ್ರಿಕ ನೆರವು ನೀಡಲು ಸಿದ್ಧವಿರುವುದಾಗಿಯೂ ಹೇಳಿದೆ. ಇದನ್ನೂ ಓದಿ: ಸರ್ಕಾರದ ಮುಖ್ಯಸ್ಥರಾಗಿ 25 ವರ್ಷ ಪೂರೈಸಿದ ಮೋದಿ: ದೆಹಲಿಯ ವಿನಾಯಕ ದೇವಸ್ಥಾನದಲ್ಲಿ ವಿಶೇಷ ಪೂಜೆ
ಇದೇ ವೇಳೆ, ಸಂಶೋಧಕಿಗೆ ತೀವ್ರ ನ್ಯುಮೋನಿಯಾ ಉಂಟಾಗಲು ನಿಖರ ಕಾರಣವೇನು ಎಂಬುದನ್ನು ತಿಳಿಯಲು WHO ಹೆಚ್ಚಿನ ಮಾಹಿತಿಯನ್ನು ಕೇಳಿದೆ. ಸಾರ್ವಜನಿಕ ಆರೋಗ್ಯ ಕ್ರಮಗಳಿಗೆ ಕಾರಣವಾದ ರೋಗಕಾರಕ ಯಾವುದು ಎಂಬುದರ ಬಗ್ಗೆಯೂ ಸ್ಪಷ್ಟನೆ ನೀಡುವಂತೆ ರಷ್ಯಾ ಅಧಿಕಾರಿಗಳನ್ನು ಕೇಳಲಾಗಿದೆ.
ಇನ್ನೊಬ್ಬ ಉದ್ಯೋಗಿಗೂ ನ್ಯುಮೋನಿಯಾ ಕಾಣಿಸಿಕೊಂಡಿದೆ ಎಂಬ ವರದಿಯೂ ಇದ್ದು, ಈ ಬಗ್ಗೆಯೂ ಹೆಚ್ಚಿನ ಮಾಹಿತಿ ಕಲೆಹಾಕಲಾಗುತ್ತಿದೆ.ಇದನ್ನೂ ಓದಿ: ಬಾಯ್ಪಿಟ್ಟ ರಸ್ತೆ – ಪಬ್ಲಿಕ್ ಟಿವಿ ವರದಿ ಬೆನ್ನಲ್ಲೇ ಮಣ್ಣು ಸುರಿದು ಹೋದ ಜಿಬಿಎ

