– ಈ ಬಾರಿ ಸಾರಂಗ್ ಹೆಲಿಕಾಪ್ಟರ್ ತಂಡಕ್ಕಿಲ್ಲ ಅವಕಾಶ
ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ 2026ರ ಅಂಗವಾಗಿ ಮೈಸೂರಿನಲ್ಲಿ ಸೂರ್ಯ ಕಿರಣ್ ಏರೋಬ್ಯಾಟಿಕ್ ತಂಡದ ವೈಮಾನಿಕ ಪ್ರದರ್ಶನ (Surya Kiran Aerobatic Show) ನಡೆಸಲು ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್ ಕೊಟ್ಟಿದೆ.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar) ಅವರ ಮನವಿಗೆ ಸ್ಪಂದಿಸಿರುವ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajnath Singh), ಸೂರ್ಯ ಕಿರಣ್ ತಂಡದ ಪ್ರದರ್ಶನಕ್ಕೆ ಅನುಮತಿ ನೀಡಿದ್ದಾರೆ.
ಅಕ್ಟೋಬರ್ 18 ರಿಂದ 20ರ ವರೆಗೆ ಮೈಸೂರಿನಲ್ಲಿ (Mysuru) ಸೂರ್ಯ ಕಿರಣ್ ಏರೋಬ್ಯಾಟಿಕ್ ತಂಡದ ವಿಶೇಷ ವೈಮಾನಿಕ ಪ್ರದರ್ಶನ ನಡೆಯಲಿದೆ. ಮೈಸೂರು ದಸರಾ ಸಂದರ್ಭದಲ್ಲಿ ಭಾರತೀಯ ವಾಯುಪಡೆಯಿಂದ ನಡೆಯಲಿರುವ ಈ ಸಾಹಸಮಯ ಪ್ರದರ್ಶನ ಪ್ರವಾಸಿಗರು ಹಾಗೂ ಕರ್ನಾಟಕದ ಜನರಿಗೆ ವಿಶೇಷ ಆಕರ್ಷಣೆಯಾಗಲಿದೆ.

ದಸರಾ ವೀಕ್ಷಿಸಲು ಮೈಸೂರಿಗೆ ಆಗಮಿಸುವ ಪ್ರವಾಸಿಗರು ಭಾರತೀಯ ವಾಯುಪಡೆಯ ಸಾಹಸ ಮತ್ತು ಕೌಶಲ್ಯ ಕಣ್ತುಂಬಿಕೊಳ್ಳುವ ಅವಕಾಶ ಪಡೆಯಲಿದ್ದಾರೆ. ಆಕಾಶದಲ್ಲಿ ಸೂರ್ಯ ಕಿರಣ್ ತಂಡದ ವಿಮಾನಗಳ ಅದ್ಭುತ ಕಸರತ್ತುಗಳು ದಸರಾ ಸಂಭ್ರಮಕ್ಕೆ ಮತ್ತಷ್ಟು ಮೆರುಗು ನೀಡಲಿವೆ.
ಸಾರಂಗ್ ಹೆಲಿಕಾಪ್ಟರ್ ತಂಡಕ್ಕಿಲ್ಲ ಅವಕಾಶ
ಆದರೆ ಸೂರ್ಯ ಕಿರಣ್ ತಂಡದ ಜೊತೆಗೆ ಸಾರಂಗ್ ಹೆಲಿಕಾಪ್ಟರ್ ಏರೋಬ್ಯಾಟಿಕ್ ತಂಡದ ಪ್ರದರ್ಶನಕ್ಕೆ ಈ ಬಾರಿ ಅವಕಾಶ ಸಿಕ್ಕಿಲ್ಲ. ಪೂರ್ವನಿಗದಿಯಾಗಿರುವ ಕಾರ್ಯಕ್ರಮಗಳ ಕಾರಣದಿಂದ ಸಾರಂಗ್ ತಂಡವನ್ನು ಮೈಸೂರಿಗೆ ನಿಯೋಜಿಸಲು ಸಾಧ್ಯವಾಗುವುದಿಲ್ಲ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ತಿಳಿಸಿದ್ದಾರೆ.
ಸೂರ್ಯ ಕಿರಣ್ ತಂಡದ ಪ್ರದರ್ಶನಕ್ಕೆ ಅಗತ್ಯವಿರುವ ಸಮನ್ವಯ ಹಾಗೂ ಇತರೆ ವ್ಯವಸ್ಥೆಗಳನ್ನು ಭಾರತೀಯ ವಾಯುಪಡೆಯೊಂದಿಗೆ ಚರ್ಚಿಸಿ ಕೈಗೊಳ್ಳುವಂತೆ ರಕ್ಷಣಾ ಸಚಿವರು ಸೂಚಿಸಿದ್ದಾರೆ.

ಆಗಸ್ಟ್ 6ರಂದು ಮನವಿ ಮಾಡಿದ್ದ ಸಿಎಂ
ಮೈಸೂರು ದಸರಾ 2026ರ ಸಂದರ್ಭದಲ್ಲಿ ಸೂರ್ಯ ಕಿರಣ್ ಹಾಗೂ ಸಾರಂಗ್ ಏರೋಬ್ಯಾಟಿಕ್ ತಂಡಗಳ ವೈಮಾನಿಕ ಪ್ರದರ್ಶನಕ್ಕೆ ಅವಕಾಶ ನೀಡುವಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಆಗಸ್ಟ್ 6ರಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದರು. ಮುಖ್ಯಮಂತ್ರಿಗಳ ಮನವಿಗೆ ಸ್ಪಂದಿಸಿರುವ ಕೇಂದ್ರ ಸರ್ಕಾರ ಇದೀಗ ಸೂರ್ಯ ಕಿರಣ್ ಏರೋಬ್ಯಾಟಿಕ್ ತಂಡದ ಪ್ರದರ್ಶನಕ್ಕೆ ಅನುಮತಿ ನೀಡಿದೆ.

