ನವದೆಹಲಿ: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಸಂದರ್ಭದಲ್ಲಿ ಹೆಸರುಗಳನ್ನು ಸೇರಿಸಲು ಬಳಸಲಾಗುವ ಪರಿಷ್ಕೃತ ‘ಫಾರ್ಮ್ 6’ಗೆ ಸುಪ್ರೀಂ ಕೋರ್ಟ್ (Supreme Court) ಯಾವುದೇ ಅನುಮೋದನೆ ನೀಡಿಲ್ಲ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ (CJI) ಸೂರ್ಯಕಾಂತ್ ಸೋಮವಾರ ಸ್ಪಷ್ಟಪಡಿಸಿದ್ದಾರೆ.
ಕೇಂದ್ರ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ ಅವರ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿ ಸಲ್ಲಿಕೆಯಾಗಿರುವ ಅರ್ಜಿಯ ವಿಚಾರಣೆ ವೇಳೆ ನ್ಯಾಯಪೀಠದಿಂದ ಈ ಮಹತ್ವದ ಹೇಳಿಕೆ ಬಂದಿದೆ.
ಕೆಲವು ರಾಜ್ಯಗಳಲ್ಲಿ ನಡೆಯುತ್ತಿರುವ ಎಸ್‌ಐಆರ್ ಪ್ರಕ್ರಿಯೆಗಾಗಿ ಆನ್‌ಲೈನ್ ‘ಫಾರ್ಮ್ 6’ ಗೆ ಲಗತ್ತಿಸಲಾದ ಹೊಸ ಘೋಷಣಾಪತ್ರಕ್ಕೆ (Declaration) ಸುಪ್ರೀಂ ಕೋರ್ಟ್ ಅನುಮೋದನೆ ನೀಡಿದೆ ಎಂದು ಕಳೆದ ವಾರವಷ್ಟೇ ಕೇಂದ್ರ ಚುನಾವಣಾ ಆಯೋಗವು (ಇಸಿಐ) ಸಮರ್ಥಿಸಿಕೊಂಡಿತ್ತು.
ಏನಿದು ವಿವಾದ?
ಕೇಂದ್ರ ಸರ್ಕಾರವು ‘ಮತದಾರರ ನೋಂದಣಿ ನಿಯಮಗಳು, 1960’ಕ್ಕೆ ತಿದ್ದುಪಡಿ ತರದ ಹೊರತು ಇಂತಹ ಬದಲಾವಣೆಗಳನ್ನು ಜಾರಿಗೆ ತರಲು ಸಾಧ್ಯವಿಲ್ಲ ಎಂದು ಹೇಳಿ, ಇಬ್ಬರು ಚುನಾವಣಾ ಆಯುಕ್ತರು ಫಾರ್ಮ್ 6 ಘೋಷಣೆಯ ಬದಲಾವಣೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಆದರೆ, ಇಬ್ಬರು ಆಯುಕ್ತರ ವಿರೋಧದ ನಡುವೆಯೂ ಹೊಸ ಫಾರ್ಮ್ 6 ಅನ್ನು ಜಾರಿಗೆ ತರಲಾಗಿದೆ ಎಂದು ವರದಿಯಾಗಿತ್ತು.
ಈ ವರದಿಯ ನಂತರ, ಸೆಪ್ಟೆಂಬರ್ 26 ರಂದು ಪತ್ರಿಕಾ ಪ್ರಕಟಣೆ ಹೊರಡಿಸಿದ್ದ ಚುನಾವಣಾ ಆಯೋಗ, ಬಿಹಾರ ಎಸ್‌ಐಆರ್‌ಗೆ ಸಂಬಂಧಿಸಿದಂತೆ ಮೇ 2026ರ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್ ಈ ಫಾರ್ಮ್ 6 ಘೋಷಣೆಯನ್ನು ಎತ್ತಿಹಿಡಿದಿದೆ ಎಂದು ಬಿಂಬಿಸಿತ್ತು. ಆದರೆ, ಆ ತೀರ್ಪಿನ ನಂತರವಷ್ಟೇ ಈ ಹೊಸ ಫಾರ್ಮ್ ಅನ್ನು ಪರಿಚಯಿಸಲಾಗಿದ್ದರಿಂದ, ಸುಪ್ರೀಂ ಕೋರ್ಟ್ ಇದನ್ನು ಪರಿಶೀಲಿಸುವ ಅವಕಾಶವೇ ಒದಗಿಬಂದಿರಲಿಲ್ಲ.
ಸುಪ್ರೀಂ ಕೋರ್ಟ್ ಹೇಳಿದ್ದೇನು?
ಈ ವಿಷಯವನ್ನು ನೇರವಾಗಿ ಪ್ರಸ್ತಾಪಿಸಿದ ಸಿಜೆಐ ಸೂರ್ಯಕಾಂತ್, “ಯಾವುದೇ ಬದಲಾವಣೆ ಮಾಡಲಾದ ಫಾರ್ಮ್ 6 ಅನ್ನು ನಾವು ಅನುಮೋದಿಸಿಲ್ಲ. ಈ ವಿಚಾರದಲ್ಲಿ ಎಲ್ಲರಿಗೂ ಸ್ಪಷ್ಟತೆ ಇರಲಿ. ದಾಖಲೆಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ, ಇದನ್ನು ಯಾರು ಬದಲಾಯಿಸಿದ್ದಾರೆ ಎಂಬುದನ್ನು ನಾವು ಪರಿಶೀಲಿಸಲಿದ್ದೇವೆ ಎಂದು ತಿಳಿಸಿದ್ದಾರೆ.
ಹೊಸ ಘೋಷಣೆಯ ಪ್ರಕಾರ, ಹೊಸ ಮತದಾರರಾಗಿ ನೋಂದಾಯಿಸಿಕೊಳ್ಳಲು ಇಚ್ಛಿಸುವ ವ್ಯಕ್ತಿಗಳು ತಾವಾಗಲಿ ಅಥವಾ ತಮ್ಮ ಪೋಷಕರಾಗಲಿ ಹಿಂದಿನ ಎಸ್‌ಐಆರ್‌ನಲ್ಲಿ ಗುರುತಿಸಲ್ಪಟ್ಟಿದ್ದಾರೆಯೇ (mapped) ಎಂಬುದನ್ನು ಕಡ್ಡಾಯವಾಗಿ ನಮೂದಿಸಬೇಕು. ಇತರ ರಾಜ್ಯಗಳ ಎಸ್‌ಐಆರ್‌ನಲ್ಲಿ ಬಳಸಲಾಗುತ್ತಿದ್ದ ಹಿಂದಿನ ಫಾರ್ಮ್ 6 ರಲ್ಲಿ ಇಂತಹ ಷರತ್ತು ಇರಲಿಲ್ಲ.
ಕರ್ತವ್ಯ ಲೋಪದ ಆರೋಪದ ಹಿನ್ನೆಲೆಯಲ್ಲಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್, ಹಿರಿಯ ಉಪ ಚುನಾವಣಾ ಆಯುಕ್ತ ಮನೀಶ್ ಗರ್ಗ್, ಡೈರೆಕ್ಟರ್ ಜನರಲ್ (ಐಟಿ) ಸೀಮಾ ಖನ್ನಾ ಹಾಗೂ ಇತರ ಅಧಿಕಾರಿಗಳ ವಿರುದ್ಧ 1950ರ ಪ್ರಜಾಪ್ರತಿನಿಧಿ ಕಾಯ್ದೆಯ ಸೆಕ್ಷನ್ 32 ರ ಅಡಿಯಲ್ಲಿ ದೂರು ದಾಖಲಿಸಿ, ಕಾನೂನು ಕ್ರಮ ಜರುಗಿಸಲು ನಿರ್ದೇಶನ ನೀಡಬೇಕೆಂದು ಅರ್ಜಿದಾರರು ಕೋರಿದ್ದಾರೆ. ಇದನ್ನೂ ಓದಿ: ಬಂಧಿಸಿ ಜೈಲಿಗಟ್ಟಿದರೆ ಸಮಸ್ಯೆಗೆ ಪರಿಹಾರ ಸಿಗಲ್ಲ- ಅಪರಾಧಿಗಳಿಗೆ ಭಯ ಹುಟ್ಟಿಸಿ: ದೆಹಲಿ ಪೊಲೀಸರಿಗೆ ಸುಪ್ರೀಂ ಸೂಚನೆ
ಅಂತಿಮವಾಗಿ ಸುಪ್ರೀಂ ಕೋರ್ಟ್ ಅಯ ಸಂಬಂಧ ನೋಟಿಸ್ ಜಾರಿ ಮಾಡಿದ್ದು, ಚುನಾವಣಾ ಆಯೋಗದ ನಿರ್ಧಾರಗಳನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಇತರೆ ಸಮಾನ ಅರ್ಜಿಗಳೊಂದಿಗೆ ಇದನ್ನು ಜೋಡಿಸಿ ವಿಚಾರಣೆ ನಡೆಸುವುದಾಗಿ ತಿಳಿಸಿದೆ.
ವಿವಾದಿತ ನಿರ್ಧಾರಗಳನ್ನು ಮುಖ್ಯ ಚುನಾವಣಾ ಆಯುಕ್ತರು ಒಬ್ಬರೇ ತಗೆದುಕೊಂಡಿದ್ದಾರೆಯೇ ಅಥವಾ ಸಾಮೂಹಿಕವಾಗಿ ತೆಗೆದುಕೊಳ್ಳಲಾಗಿದೆಯೇ ಎಂಬುದನ್ನು ಸ್ಪಷ್ಟಪಡಿಸಲು ಚುನಾವಣಾ ಆಯೋಗ ಮತ್ತು ಕೇಂದ್ರ ಸರ್ಕಾರಕ್ಕೆ ಒಂದು ವಾರದ ಗಡುವು ನೀಡಿ ಸುಪ್ರೀಂ ಕೋರ್ಟ್ ನೋಟಿಸ್ ನೀಡಿದೆ. ಆದರೆ ಮುಖ್ಯ ಚುನಾವಣಾ ಆಯುಕ್ತರನ್ನು ಹುದ್ದೆಯಿಂದ ಅಮಾನತುಗೊಳಿಸಲು ಕೋರ್ಟ್ ಮಧ್ಯಂತರ ಆದೇಶ ನೀಡಲು ನಿರಾಕರಿಸಿದೆ.

