– ತನಿಖೆಯಲ್ಲಿ ಆಘಾತಕಾರಿ ಸತ್ಯ ಬಹಿರಂಗ
– ಮಚ್ಚರ್ ಕೊಲೆ ಮಾಡಿ ವಿಮಾನ ಪತನಕ್ಕೆ ಕುತಂತ್ರ
ಅಬುಧಾಬಿ: ಒಮಾನ್ ಮೂಲದ ಸಹ-ಪೈಲಟ್ ಹಮಾಮ್ ಅಲ್-ಹಮ್ಮಾಮಿ(Hamam al-Hammami) ಜುಲೈನಲ್ಲೇ ವಿಮಾನ ಪತನ ಮಾಡಲು ಸಂಚು ರೂಪಿಸಿದ ಸ್ಫೋಟಕ ವಿಚಾರ ಈಗ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ತನಿಖಾಧಿಕಾರಿಗಳ ವಿಚಾರಣೆ ವೇಳೆ ಬಂಧಿತ ಹಮ್ಮಾಮಿ ಈ ಆಘಾತಕಾರಿ ಸಂಗತಿಗಳನ್ನು ಬಾಯಿಬಿಟ್ಟಿರುವುದಾಗಿ ಇಸ್ರೇಲ್(Isreal) ಮಾಧ್ಯಮಗಳು ವರದಿ ಮಾಡಿವೆ.
ಫ್ಲೈದುಬೈ ಸಂಸ್ಥೆಯ ವಿಮಾನದ ಮುಖ್ಯ ಕ್ಯಾಪ್ಟನ್, ಭಾರತ ಮೂಲದ ಸ್ಮಿತ್ ಮಚ್ಚರ್(Smit Machchhar) ಅವರನ್ನು ಹತ್ಯೆ ಮಾಡಿ, ಯಾವುದೇ ಅನುಮಾನ ಬಾರದಂತೆ ಲ್ಯಾಂಡಿಂಗ್ ಅನುಮತಿ ಪಡೆಯುವುದು ಹಾಗೂ ಕೊನೆಯ ಕ್ಷಣದಲ್ಲಿ 9/11 ಮಾದರಿಯಲ್ಲಿ ವಿಮಾನ ನಿಲ್ದಾಣದ ಕಟ್ಟಡ ಅಥವಾ ನೆಲದಲ್ಲಿದ್ದ ಮತ್ತೊಂದು ಜೆಟ್ಗೆ ಅಪ್ಪಳಿಸುವುದು ಆತನ ಸಂಚಾಗಿತ್ತು.
ವಿಮಾನವು ಇಸ್ರೇಲ್ ಪ್ರವೇಶಿಸುವ ಸಮೀಪದಲ್ಲಿ, ಅಂದರೆ ಜೋರ್ಡಾನ್ ವಾಯುಪ್ರದೇಶದಲ್ಲಿದ್ದಾಗ ಅಲ್-ಹಮ್ಮಾಮಿ ಮುಖ್ಯ ಪೈಲಟ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದ. ಕೊನೆಯ ಕ್ಷಣದವರೆಗೂ ಯಾರಿಗೂ ಅನುಮಾನ ಬಾರದಂತೆ ತಡೆದು, ವಿಮಾನವನ್ನು ತಡೆಯಲು ಯಾರಿಗೂ ಸಮಯ ಸಿಗದಂತೆ ಮಾಡುವುದು ಆತನ ಉದ್ದೇಶವಾಗಿತ್ತು. ಒಂದು ವೇಳೆ ವಿಮಾನ ನಿಲ್ದಾಣಕ್ಕೆ ಅಪ್ಪಳಿಸಲು ಸಾಧ್ಯವಾಗದಿದ್ದರೆ, ಟೆಲ್ ಅವಿವ್ನ ಗಗನಚುಂಬಿ ಕಟ್ಟಡಕ್ಕೆ ಅಥವಾ ಜೋರ್ಡಾನ್ನಲ್ಲಿರುವ ಅಮೆರಿಕದ ಮಿಲಿಟರಿ ನೆಲೆಗಳ ಮೇಲೆ ವಿಮಾನವನ್ನು ಅಪ್ಪಳಿಸಲು ಯೋಚಿಸಿದ್ದಾಗಿ ಆತ ತನಿಖಾಧಿಕಾರಿಗಳಿಗೆ ತಿಳಿಸಿದ್ದಾನೆ. ಇದನ್ನೂ ಓದಿ: ಪೈಲಟ್ ಸ್ಮಿತ್ ಮಚ್ಚರ್ಗೆ ಇಸ್ರೇಲ್ನಿಂದ ಅತ್ಯುನ್ನತ ಗೌರವ – ಸ್ವಾತಂತ್ರ್ಯ ದಿನಾಚರಣೆಗೆ ನೆತನ್ಯಾಹು ಆಹ್ವಾನ
ಇಸ್ರೇಲ್ನ ಚಾನೆಲ್ 12 ವರದಿಯ ಪ್ರಕಾರ, ಈ ದಾಳಿಯನ್ನು ಜುಲೈ(July) ತಿಂಗಳಲ್ಲೇ ನಡೆಸಲು ಹಮ್ಮಾಮಿ ಯೋಜಿಸಿದ್ದ. ಆದರೆ ಅಂದು ಕರ್ತವ್ಯದಲ್ಲಿದ್ದ ಸಿಬ್ಬಂದಿಯೊಬ್ಬರು ತನ್ನ ಸ್ನೇಹಿತರಾಗಿದ್ದರಿಂದ ಕೊನೆ ಕ್ಷಣದಲ್ಲಿ ಯೋಜನೆಯನ್ನು ಮುಂದೂಡಿದ್ದ. ಫ್ಲೈದುಬೈ ಸೇರಿದ ನಂತರ ಹಲವು ಬಾರಿ ಬೆನ್ ಗುರಿಯಾನ್ ವಿಮಾನ ನಿಲ್ದಾಣಕ್ಕೆ ಹಾರಾಟ ನಡೆಸಿದ್ದ ಆತ, ಜೂನ್ನಲ್ಲಿ ಇಸ್ರೇಲ್ಗೆ ತೆರಳಿದ್ದಾಗ ಮಾಹಿತಿ ಸಂಗ್ರಹಿಸಲು ಹಾಗೂ ಯೋಜನೆ ರೂಪಿಸಲು ಸಮಯ ಮೀಸಲಿಟ್ಟಿದ್ದ ಎಂದು ತಿಳಿದುಬಂದಿದೆ.
ದಾಳಿಗಾಗಿಯೇ ಆತ ಫ್ಲೈದುಬೈ ಏರ್ಲೈನ್ಸ್ ಸೇರಿದ್ದ. ಯಾವ ವಿಮಾನಯಾನ ಸಂಸ್ಥೆಯು ಟೆಲ್ ಅವಿವ್ಗೆ ಹಾರಾಟ ನಡೆಸುತ್ತದೆ ಎಂದು ಮೊದಲೇ ಹುಡುಕಿದ್ದೆ. ಅದಕ್ಕಾಗಿಯೇ ಫ್ಲೈದುಬೈ ಆಯ್ಕೆ ಮಾಡಿಕೊಂಡೆ. ಉದ್ಯೋಗಕ್ಕೆ ಸೇರುವ ಮೊದಲೇ ಈ ದಾಳಿಗೆ ಯೋಜನೆ ಹಾಕಿಕೊಂಡಿದ್ದೆ ಎಂದು ಆತ ತನಿಖಾಧಿಕಾರಿಗಳ ಮುಂದೆ ಒಪ್ಪಿಕೊಂಡಿದ್ದಾನೆ.
ಸ್ಮಿತ್ ಮಚ್ಚರ್ ಮೇಲೆ ದಾಳಿ ನಡೆಸಿದ ಬಳಿಕ ಸಹ-ಪೈಲಟ್ ವಿಮಾನದ ಎಂಜಿನ್ಗಳನ್ನು ಆಫ್ ಮಾಡಿ ರಡ್ಡರ್ಗಳನ್ನು ಮುಂದಕ್ಕೆ ತಳ್ಳಿದ್ದ. ಇದರಿಂದಾಗಿ ವಿಮಾನವು ಶಬ್ದದ ವೇಗವನ್ನು ತಲುಪುತ್ತಾ, ಕೇವಲ ಒಂದೇ ನಿಮಿಷದಲ್ಲಿ ಬರೋಬ್ಬರಿ 16,000 ಅಡಿಗಳಷ್ಟು ಕೆಳಕ್ಕೆ ಕುಸಿದಿತ್ತು. ಇದನ್ನೂ ಓದಿ: Flydubai Flight Case | ಉಗ್ರ ಬಿನ್ಲಾಡೆನ್ ಆರಾಧಕನಾಗಿದ್ದ ಹಾಮಾಮ್ – ವಿಚಾರಣೆ ವೇಳೆ ರಹಸ್ಯ ಬಯಲು
ಪ್ರಕರಣದ ತನಿಖೆ ಮುಂದುವರಿದಂತೆ ಹಲವು ಗಂಭೀರ ಭದ್ರತಾ ಲೋಪಗಳು ಮುನ್ನೆಲೆಗೆ ಬಂದಿವೆ. ಮೂಲಗಳ ಪ್ರಕಾರ, ಅಲ್-ಹಮ್ಮಾಮಿಯ ತೀವ್ರಗಾಮಿ ಸಿದ್ಧಾಂತಗಳ ಕಾರಣದಿಂದ ಆತನ ಸ್ವದೇಶವಾದ ಒಮಾನ್ ಆತನಿಗೆ ವಿಮಾನ ಹಾರಾಟ ನಡೆಸದಂತೆ ನಿಷೇಧ ಹೇರಿತ್ತು. ಅಲ್ಲದೆ, ಇಸ್ರೇಲ್ನೊಂದಿಗೆ ರಾಜತಾಂತ್ರಿಕ ಸಂಬಂಧವೇ ಇಲ್ಲದ ಒಮಾನ್ ದೇಶದ ಪ್ರಜೆಯೊಬ್ಬರಿಗೆ ಇಸ್ರೇಲಿ ಪ್ರಯಾಣಿಕರಿದ್ದ ವಿಮಾನವನ್ನು ಚಲಾಯಿಸಲು ಹೇಗೆ ಅನುಮತಿ ನೀಡಲಾಯಿತು ಎಂಬ ಪ್ರಶ್ನೆ ಎದ್ದಿದೆ.
29 ವರ್ಷದ ಹಮಾಮ್ ಅಲ್-ಹಮ್ಮಾಮಿಯ ತಂದೆ ಒಮಾನ್ನವರಾಗಿದ್ದು, ತಾಯಿ ಸಿರಿಯಾ ಮೂಲದವರಾಗಿದ್ದಾರೆ. ಸಿರಿಯಾ ಅಂತರ್ಯುದ್ಧದ ಸಮಯದಲ್ಲಿ ಅಲ್ಲಿಯೇ ವಾಸವಾಗಿದ್ದ ಈತ, ಸಾಮಾಜಿಕ ಜಾಲತಾಣಗಳಲ್ಲಿ ಅಲ್-ಖೈದಾ ಪರವಾಗಿ ಪೋಸ್ಟ್ಗಳನ್ನು ಹಾಕುತ್ತಿದ್ದ ಎಂದು ತಿಳಿದುಬಂದಿದೆ. ಇಷ್ಟೆಲ್ಲಾ ಹಿನ್ನೆಲೆಯಿದ್ದರೂ ಫ್ಲೈದುಬೈ ಸಂಸ್ಥೆ ಈತನನ್ನು ಭದ್ರತಾ ಅಪಾಯ ಎಂದು ಗುರುತಿಸುವಲ್ಲಿ ಹೇಗೆ ವಿಫಲವಾಯಿತು ಎಂಬುದು ತನಿಖೆಯಿಂದ ತಿಳಿಯಬೇಕಿದೆ.
ಪ್ರಯಾಣಿಕರು ಮತ್ತು ಸಿಬ್ಬಂದಿಯ ಮಾಹಿತಿಯನ್ನು ಎಮಿರೇಟ್ಸ್ ಅಧಿಕಾರಿಗಳು ಮೊದಲೇ ಹಂಚಿಕೊಂಡಿದ್ದರೂ, ಇಸ್ರೇಲ್ ಭದ್ರತಾ ಸಂಸ್ಥೆಗಳು ಯಾವುದೇ ಎಚ್ಚರಿಕೆ ನೀಡಿರಲಿಲ್ಲ ಎಂದು ಮೂಲಗಳು ತಿಳಿಸಿವೆ. ಈ ಬಗ್ಗೆ ಇಸ್ರೇಲ್ನ ಆಂತರಿಕ ಭದ್ರತಾ ಸಂಸ್ಥೆ ‘ಶಿನ್ ಬೆಟ್’ ಮತ್ತು ಸಾರಿಗೆ ಸಚಿವಾಲಯದ ನಡುವೆ ಜವಾಬ್ದಾರಿಯ ಕುರಿತು ಪರಸ್ಪರ ಆರೋಪ-ಪ್ರತ್ಯಾರೋಪಗಳು ಆರಂಭವಾಗಿವೆ.

