– ಕೆರೆಯಂತಾದ ರಸ್ತೆಗಳು; ಟ್ರಾಫಿಕ್ನಲ್ಲಿ ಸಿಲುಕಿ ವಾಹನ ಸವಾರರು ಪರದಾಟ
ಬೆಂಗಳೂರು: ಕಳೆದ ಮೂರು ದಿನಗಳಿಂದ ಸಿಲಿಕಾನ್ ಸಿಟಿಯಲ್ಲಿ ವರುಣನ ಅಬ್ಬರ ಜೋರಾಗಿದ್ದು, ಜನರು ಹಾಗೂ ವಾಹನ ಸವಾರರು ಹೈರಾಣಾಗಿದ್ದಾರೆ. ನಗರದಲ್ಲಿ ರಸ್ತೆಗಳೆಲ್ಲ ಜಲಾವೃತಗೊಂಡಿವೆ. 10-12 ಕಿಮೀ ಸಂಚಾರಕ್ಕೆ 3 ಗಂಟೆ ಟ್ರಾಫಿಕ್ನಲ್ಲಿ ಸಿಲುಕಿ ವಾಹನ ಸವಾರರು ಒದ್ದಾಡುತ್ತಿದ್ದಾರೆ.
ಮಳೆಯಿಂದಾಗಿ ಬೆಂಗಳೂರು ಟ್ರಾಫಿಕ್ ಪರದಾಟದ ಕರಾಳತೆಯನ್ನು ವಾಹನ ಸವಾರರು ಬಿಚ್ಚಿಟ್ಟಿದ್ದಾರೆ. ಕೆಲಸ ಮುಗಿಸಿ ಮಹದೇವಪುರದಿಂದ ಹೊರಟಿದ್ದು 5 ಗಂಟೆಗೆ, ವರ್ತೂರು ತಲುಪಿದ್ದು 8 ಗಂಟೆಗೆ ಎಂದು ಸವಾರರೊಬ್ಬರು ಹೇಳಿಕೊಂಡಿದ್ದಾರೆ. 10-12 ಕಿಮೀ ಸಂಚಾರಕ್ಕೆ 3 ಗಂಟೆಗಳು ಕಾದು ವಾಹನ ಸವಾರರು ಸುಸ್ತಾಗಿದ್ದಾರೆ. ಇದನ್ನೂ ಓದಿ: ಮುಂದಿನ 3 ಗಂಟೆಗಳಲ್ಲಿ ರಾಜ್ಯದ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ – 17 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್
ರಸ್ತೆಯಲ್ಲಿ ನೀರು ತುಂಬಿ ವಾಹನ ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ ಎಂದು ಸರ್ಕಾರ, ಜಿಬಿಎ ವಿರುದ್ಧ ಜನರು ಆಕ್ರೋಶ ಹೊರಹಾಕಿದ್ದಾರೆ. ಟ್ರಾಫಿಕ್ನಲ್ಲಿ ಸಿಲುಕಿದ ಸಂಕಷ್ಟವನ್ನು ಆಟೋ ಚಾಲಕರು ಬಿಚ್ಚಿಟ್ಟಿದ್ದಾರೆ.
ನಗರದಲ್ಲಿ ಮಿಂಚು-ಗುಡುಗು ಸಹಿತ ಮಳೆ ಸುರಿಯುತ್ತಿದೆ. ಜಿಟಿಜಿಟಿ ಮಳೆಯಿಂದಾಗಿ ವಾಹನ ಸವಾರರ ಪರದಾಡುವಂತಾಗಿದೆ. ಬೆಂಗಳೂರು ಉತ್ತರ ಭಾಗದಲ್ಲಿ ಜೋರು ಮಳೆಯಾಗಿದೆ. ಯಲಹಂಕ, ರಾಜಾನುಕುಂಟೆ, ಥಣಿಸಂದ್ರ, ಸಂಪಿಗೆಹಳ್ಳಿ ಸುತ್ತಮುತ್ತ ಜೋರು ಮಳೆ ಸುರಿದಿದೆ. ಮಳೆಯಿಂದಾಗಿ ರಸ್ತೆ, ಅಂಡರ್ಪಾಸ್ಗಳಲ್ಲಿ ನೀರು ನಿಂತಿದೆ. ಇದನ್ನೂ ಓದಿ: ಬೆಂಗಳೂರಲ್ಲಿ ಧಾರಾಕಾರ ಮಳೆಗೆ ಹಲವೆಡೆ ಅವಾಂತರ; ಥಿಯೇಟರ್ ಮೇಲ್ಛಾವಣಿ ಕುಸಿದು ಪ್ರೇಕ್ಷಕನಿಗೆ ಗಾಯ
ಜಕ್ಕೂರು ಬಳಿಯ ರೈಲ್ವೆ ಅಂಡರ್ಪಾಸ್ ಜಲಾವೃತಗೊಂಡಿದೆ. ಕೆಲವು ಕಡೆ ಅಪಾರ್ಟ್ಮೆಂಟ್ಗಳಿಗೆ ನೀರು ನುಗ್ಗಿದೆ. ಮಳೆ ನೀರಿನಲ್ಲಿ ಕಾರುಗಳು ಸಹ ಮುಳುಗಿವೆ. ಬಿಟ್ಟು ಬಿಡದೇ ಸುರಿಯುತ್ತಿರುವ ಮಳೆಗೆ ರಾಜಕಾಲುವೆ ಪಕ್ಕದಲ್ಲಿರುವ ನಾಗವಾರ ಮುಖ್ಯ ರಸ್ತೆ ಕೆರೆಯಂತಾಗಿದೆ. ಮಾಲ್ ಆಫ್ ಏಷಿಯಾ, ಹೊರಮಾವು, ಜಕ್ಕೂರು ರಸ್ತೆಯ ಅಂಡರ್ ಪಾಸ್ನಲ್ಲಿ ನೀರು ನಿಂತು ಸವಾರರು ಪರದಾಡುವಂತಾಗಿದೆ.

