ಮುಂಬೈ: ಮಹಾರಾಷ್ಟ್ರದ ಥಾಣೆಯಲ್ಲಿ (Thane) ಶಿವಸೇನೆಯ ನಾಯಕ ಪ್ರದೀಪ್ ಪುರ್ಣೇಕರ್ (Pradeep Purnekar) ಅವರನ್ನು ಇಬ್ಬರು ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.
ಮಂಗಳವಾರ (ಸೆ.29) ರಾತ್ರಿ 9 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ಶಿವಸೇನೆಯ ಉದ್ಧವ್ ಠಾಕ್ರೆ ಬಣದ ಮಾನಪಾಡ ಉಪವಿಭಾಗದ ಮುಖ್ಯಸ್ಥ ಪ್ರದೀಪ್ ಪುರ್ಣೇಕರ್ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಏಕಾಏಕಿ ಇಬ್ಬರು ಅಪರಿಚಿತ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ತರಬೇತಿ ವೇಳೆ ರಷ್ಯಾದ ದೀರ್ಘ-ಶ್ರೇಣಿಯ Tu-95 ಬಾಂಬರ್ ಪತನ; 6 ಸಿಬ್ಬಂದಿ ಸಾವು
ಪ್ರಾಥಮಿಕ ಮಾಹಿತಿಯ ಪ್ರಕಾರ, ಪ್ರದೀಪ್ ತಮ್ಮ ಮಾನಪಾಡ ಕಚೇರಿಯಲ್ಲಿರುವಾಗ ಇಬ್ಬರು ಅಪರಿಚಿತ ವ್ಯಕ್ತಿಗಳು ಬಂದು, ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಬಳಿಕ ಎರಡಕ್ಕಿಂತ ಹೆಚ್ಚು ಸುತ್ತು ಗುಂಡು ಹಾರಿಸಿದ್ದಾರೆ. ಇದರಿಂದ ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ವೈದ್ಯರ ತುರ್ತು ಚಿಕಿತ್ಸೆ ಬಳಿಕವೂ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.
ಕಪುರ್‌ಬಾವಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಗುಂಡಿನ ದಾಳಿ ನಡೆದಿದೆ. ಘಟನೆಯ ಬಗ್ಗೆ ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಧಾವಿಸಿ, ಪರಿಶೀಲನೆ ನಡೆಸಿದ್ದಾರೆ. ಸದ್ಯ ದುಷ್ಕರ್ಮಿಗಳ ಪತ್ತೆಗಾಗಿ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ. ಥಾಣೆಯ ಪ್ರಮುಖ ನಿರ್ಗಮನ ಮಾರ್ಗಗಳಲ್ಲಿ ಚೆಕ್‌ಪೋಸ್ಟ್ ಸ್ಥಾಪಿಸಿದ್ದಾರೆ.
ವಿಧಿವಿಜ್ಞಾನ ತಂಡವು ಸ್ಥಳಕ್ಕೆ ಭೇಟಿ ನೀಡಿ, ಸಾಕ್ಷ್ಯಗಳನ್ನು ಸಂಗ್ರಹಿಸುತ್ತಿದೆ. ದುಷ್ಕರ್ಮಿಗಳ ಬಗ್ಗೆ ಹಾಗೂ ಈ ಹತ್ಯೆಯ ಹಿಂದಿನ ಉದ್ದೇಶ ಇನ್ನುಷ್ಟೇ ತಿಳಿದುಬರಬೇಕಿದೆ.ಇದನ್ನೂ ಓದಿ: ಬಸವನ ಬಾಗೇವಾಡಿಯಲ್ಲಿ 3.5 ತೀವ್ರತೆಯ ಭೂಕಂಪನ

