– ಅಕ್ಟೋಬರ್ ಮೊದಲ ವಾರದಲ್ಲಿ ಕೇಂದ್ರಕ್ಕೆ ಅಂತಿಮ ಮನವಿ ಸಲ್ಲಿಕೆ
– ಬರ ಪರಿಹಾರ ಬಿಡುಗಡೆ ಮಾಡುವಂತೆ ಕೇಂದ್ರದ ಮೇಲೆ ಮತ್ತಷ್ಟು ಒತ್ತಡ
ಬೆಂಗಳೂರು: ರಾಜ್ಯ ಸರ್ಕಾರದ ಮನವಿ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಮೂರು ತಂಡಗಳು ಕರ್ನಾಟಕಕ್ಕೆ ಆಗಮಿಸಿ ಬರ (Droght) ಪರಿಸ್ಥಿತಿಯ ಕುರಿತು ಅಧ್ಯಯನ ನಡೆಸಲಿವೆ. ತುಮಕೂರು, ಚಿತ್ರದುರ್ಗ, ದಾವಣಗೆರೆ ಭಾಗದಲ್ಲಿ ಒಂದು ತಂಡ, ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಮತ್ತೊಂದು ತಂಡ ಹಾಗೂ ಮಂಡ್ಯ, ಮೈಸೂರು, ಚಾಮರಾಜನಗರ ಸೇರಿದಂತೆ ಮೈಸೂರು ಭಾಗದಲ್ಲಿ ಮೂರನೇ ತಂಡ ಅಧ್ಯಯನ ನಡೆಸಲಿದೆ ಎಂದು ಉಪಮುಖ್ಯಮಂತ್ರಿಗಳು ಹಾಗೂ ಕಂದಾಯ ಸಚಿವರಾದ ಡಾ.ಜಿ.ಪರಮೇಶ್ವರ್ (G Parameshwar) ಅವರು ತಿಳಿಸಿದರು.
ಸದಾಶಿವನಗರದ ನಿವಾಸದ ಬಳಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೇಂದ್ರದ ತಂಡಗಳು ಬರಪೀಡಿತ ಪ್ರದೇಶಗಳಲ್ಲಿ ಅಧ್ಯಯನ ನಡೆಸಿ ತಮ್ಮ ವರದಿಯನ್ನು ಸಲ್ಲಿಸಲಿವೆ. ರಾಜ್ಯ ಸರ್ಕಾರ ಈಗಾಗಲೇ ಕೇಂದ್ರಕ್ಕೆ ಮೆಮೊರಾಂಡಂ ಸಲ್ಲಿಸಿದ್ದು, ಅದರ ಆಧಾರದ ಮೇಲೆಯೇ ಕೇಂದ್ರದ ತಂಡಗಳು ಪರಿಶೀಲನೆ ನಡೆಸಲಿವೆ. ಇದರ ಜೊತೆಗೆ ರಾಜ್ಯ ಸರ್ಕಾರದಿಂದ ಮತ್ತೊಂದು ಮೆಮೊರಾಂಡಂ ಕೂಡ ಸಲ್ಲಿಸಲಾಗುವುದು ಎಂದು ಹೇಳಿದರು. ಇದನ್ನೂ ಓದಿ: ಬೇರೆ ಕೋರ್ಟ್‌ನಲ್ಲಿ ಇತ್ತು, ನಮಗೆ ಯಾಕಿಲ್ಲ – ವಿಡಿಯೋ ರಿವ್ಯೂ ಇರದ್ದಕ್ಕೆ ಸಿಂಧು ಆಕ್ರೋಶ
ರಾಜ್ಯದಲ್ಲಿ ಬರ ಎಂದು ಘೋಷಿಸಲಾಗಿರುವ ಎಲ್ಲ ತಾಲೂಕುಗಳ ಬಗ್ಗೆಯೂ ಕೇಂದ್ರದ ತಂಡಗಳು ಮಾಹಿತಿಯನ್ನು ಸಂಗ್ರಹಿಸುವ ಸಾಧ್ಯತೆಯಿದೆ. ಕೆಲವು ತಾಲೂಕುಗಳಿಗೆ ತಂಡಗಳು ಖುದ್ದಾಗಿ ಭೇಟಿ ನೀಡಿ ಜಿಲ್ಲಾಧಿಕಾರಿಗಳು ಹಾಗೂ ಸ್ಥಳೀಯ ಅಧಿಕಾರಿಗಳೊಂದಿಗೆ ಚರ್ಚಿಸಿ ಮಾಹಿತಿ ಪಡೆದುಕೊಳ್ಳಲಿವೆ. ರಾಜ್ಯ ಸರ್ಕಾರ ಸಲ್ಲಿಸಿರುವ ವರದಿಯಲ್ಲಿನ ಅಂಶಗಳು ಹಾಗೂ ಕೇಂದ್ರದ ತಂಡಗಳು ಸ್ಥಳದಲ್ಲೇ ನಡೆಸುವ ಪರಿಶೀಲನೆಯಲ್ಲಿನ ವಾಸ್ತವಾಂಶಗಳ ನಡುವೆ ಯಾವುದೇ ವ್ಯತ್ಯಾಸವಿದೆಯೇ ಎಂಬುದನ್ನೂ ಅವರು ಪರಿಶೀಲಿಸಲಿದ್ದಾರೆ ಎಂದು ವಿವರಿಸಿದರು.
ರಾಜ್ಯದ ಬರ ಪೀಡಿತ ತಾಲೂಕುಗಳ ಘೋಷಣೆ ಕೇಂದ್ರದ ಮಾರ್ಗಸೂಚಿ ಆಧಾರಿತ:
ಕೇಂದ್ರದ ಮಾರ್ಗಸೂಚಿಗಳ ಪ್ರಕಾರವೇ ಗ್ರೌಂಡ್ ಟ್ರೂಥಿಂಗ್ ನಡೆಯಲಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಕೇಂದ್ರದ ತಂಡಗಳಿಗೆ ತಮ್ಮದೇ ಆದ ಮಾರ್ಗಸೂಚಿಗಳಿವೆ. ರಾಜ್ಯ ಸರ್ಕಾರವೂ ಬರ ತಾಲೂಕುಗಳನ್ನು ಘೋಷಿಸುವ ಸಂದರ್ಭದಲ್ಲಿ ಇದೇ ಮಾರ್ಗಸೂಚಿಗಳನ್ನು ಅನುಸರಿಸಿದೆ ಎಂದರು.
ಮಾರ್ಗಸೂಚಿಗಳಲ್ಲಿರುವ ಮಾನದಂಡಗಳನ್ನು ಆಧರಿಸಿಯೇ ಬರಪೀಡಿತ ತಾಲೂಕುಗಳನ್ನು ಘೋಷಿಸಲಾಗಿದೆ. ಮಾರ್ಗಸೂಚಿಗಳ ವ್ಯಾಪ್ತಿಗೆ ಬರದ ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಘೋಷಿಸಿಲ್ಲ. ಹೀಗಾಗಿ ಕೇಂದ್ರದ ತಂಡಗಳು ಪರಿಶೀಲನೆ ನಡೆಸಿದಾಗ ರಾಜ್ಯ ಸರ್ಕಾರದ ವರದಿ ಹಾಗೂ ಅವರ ಪರಿಶೀಲನೆಯ ನಡುವೆ ಹೆಚ್ಚಿನ ವ್ಯತ್ಯಾಸ ಕಂಡುಬರುವ ಸಾಧ್ಯತೆ ಇಲ್ಲ ಎಂದು ಹೇಳಿದರು. ಇದನ್ನೂ ಓದಿ: 16 ಲಕ್ಷ ಫಾಲೋವರ್ಸ್ ಹೊಂದಿದ್ದ ಇನ್‌ಫ್ಲುಯೆನ್ಸರ್ ನಿಧಿ ತಿವಾರಿ ಆತ್ಮಹತ್ಯೆ
ಅಕ್ಟೋಬರ್ ಮೊದಲ ವಾರದಲ್ಲಿ ಅಂತಿಮ ಮೆಮೊರಾಂಡಂ:
ಸದ್ಯ ಇನ್ನಷ್ಟು ಗ್ರೌಂಡ್ ಟ್ರೂಥಿಂಗ್ ನಡೆಯುತ್ತಿದೆ. ಅದು ಪೂರ್ಣಗೊಂಡ ಬಳಿಕ ಅಂತಿಮ ಮೆಮೊರಾಂಡಂ ಸಿದ್ಧಪಡಿಸಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಸೆಪ್ಟೆಂಬರ್ 30ಕ್ಕೆ ಮುಂಗಾರು ಅವಧಿ ಮುಕ್ತಾಯವಾಗಲಿದ್ದು, ಅದರ ನಂತರ ಅಕ್ಟೋಬರ್ ಮೊದಲ ವಾರದಲ್ಲೇ ಅಂತಿಮ ಮೆಮೊರಾಂಡಂ ಸಲ್ಲಿಸಲು ಉದ್ದೇಶಿಸಲಾಗಿದೆ. ರಾಜ್ಯದ ನಷ್ಟ ಹಾಗೂ ಅಗತ್ಯವಿರುವ ಪರಿಹಾರದ ಕುರಿತು ಸಮಗ್ರ ಮಾಹಿತಿಯನ್ನು ಒಳಗೊಂಡ ವರದಿಯನ್ನು ಕೇಂದ್ರದ ಮುಂದೆ ಮಂಡಿಸಲಾಗುವುದು ಎಂದು ಹೇಳಿದರು.
ಬರ ಯಾವುದೇ ಪಕ್ಷದ ಸಮಸ್ಯೆಯಲ್ಲ:
ಬರ ಪರಿಹಾರದ ವಿಚಾರದಲ್ಲಿ ಸರ್ವಪಕ್ಷ ನಿಯೋಗದ ಅಗತ್ಯವನ್ನು ಪುನರುಚ್ಚರಿಸಿದ ಡಾ.ಜಿ.ಪರಮೇಶ್ವರ ಅವರು, ಬರ ಯಾವುದೇ ಪಕ್ಷಕ್ಕೆ ಸೀಮಿತವಾದ ಸಮಸ್ಯೆಯಲ್ಲ. ಪ್ರಕೃತಿ ವಿಕೋಪಕ್ಕೆ ಪಕ್ಷದ ಬೇಧವಿಲ್ಲ. ಕೇಂದ್ರ ಸರ್ಕಾರದ ಮುಂದೆ ಎಲ್ಲರೂ ಒಟ್ಟಾಗಿ ರಾಜ್ಯದ ಪರವಾಗಿ ಮನವಿ ಸಲ್ಲಿಸಿದರೆ ಹೆಚ್ಚಿನ ನೆರವು ಪಡೆಯಲು ಅನುಕೂಲವಾಗಲಿದೆ ಎಂಬ ಉದ್ದೇಶದಿಂದಲೇ ಮುಖ್ಯಮಂತ್ರಿ ಸರ್ವಪಕ್ಷ ನಿಯೋಗ ಕರೆದೊಯ್ಯುವುದಾಗಿ ಹೇಳಿದ್ದಾರೆ ಎಂದು ತಿಳಿಸಿದರು.
ಬಿಜೆಪಿ ನಾಯಕರು ನಿಯೋಗದಲ್ಲಿ ಭಾಗವಹಿಸುವುದಿಲ್ಲ ಎಂದು ಹೇಳಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಅವರ ಪಕ್ಷವೇ ಕೇಂದ್ರದಲ್ಲಿ ಅಧಿಕಾರದಲ್ಲಿದೆ. ಅವರು ನಮ್ಮೊಂದಿಗೆ ಬಂದರೆ ಕೇಂದ್ರ ಸರ್ಕಾರವನ್ನು ಮನವರಿಕೆ ಮಾಡಿಕೊಡಲು ಇನ್ನಷ್ಟು ಸಹಕಾರಿಯಾಗುತ್ತದೆ ಎಂಬುದು ರಾಜ್ಯ ಸರ್ಕಾರದ ಉದ್ದೇಶ. ಆದರೆ, ಅವರು ಬರದಿದ್ದರೂ ಆಡಳಿತ ಪಕ್ಷವಾಗಿ ರಾಜ್ಯದ ಹಿತಾಸಕ್ತಿಗಾಗಿ ಕೇಂದ್ರ ಸರ್ಕಾರದ ಗಮನಕ್ಕೆ ವಿಷಯವನ್ನು ತರುವ ಜವಾಬ್ದಾರಿಯನ್ನು ರಾಜ್ಯ ಸರ್ಕಾರ ನಿರ್ವಹಿಸಲಿದೆ ಎಂದು ಹೇಳಿದರು. ಇದನ್ನೂ ಓದಿ: ಶಿಕಾರಿಪುರದಲ್ಲಿ ಸೆ.30 ರಂದು ಭಾರತ್ ಜೋಡೋ ನೆನಪಿನಯಾತ್ರೆ: ಮಧು ಬಂಗಾರಪ್ಪ
ಬರ ಯಾವುದೇ ಪಕ್ಷದ ಸಮಸ್ಯೆಯಲ್ಲ. ಇದು ಕರ್ನಾಟಕದ ಜನರ ಹಿತಾಸಕ್ತಿಗೆ ಸಂಬಂಧಿಸಿದ ವಿಷಯ. ಆದ್ದರಿಂದ ಎಲ್ಲರೂ ತಮ್ಮ ಜವಾಬ್ದಾರಿಯನ್ನು ಹಂಚಿಕೊಳ್ಳಬೇಕು. ಕೇಂದ್ರಕ್ಕೆ ಮನವಿ ಸಲ್ಲಿಸುವ ಸಂದರ್ಭದಲ್ಲಿ ಬಿಜೆಪಿಯವರೂ ನಮ್ಮೊಂದಿಗೆ ಬರಬೇಕು ಎಂದು ಮತ್ತೊಮ್ಮೆ ಮನವಿ ಮಾಡುವುದಾಗಿ ತಿಳಿಸಿದರು.
ಕೇಂದ್ರ ಸರ್ಕಾರ ಮತ್ತೊಮ್ಮೆ ಪರಿಹಾರಕ್ಕಾಗಿ ಮನವಿ ಸಲ್ಲಿಸಿದರೂ ಸ್ಪಂದಿಸದ ಪರಿಸ್ಥಿತಿ ಎದುರಾದರೆ ರಾಜ್ಯ ಸರ್ಕಾರ ತನ್ನ ಜವಾಬ್ದಾರಿಯಿಂದ ಹಿಂದೆ ಸರಿಯುವುದಿಲ್ಲ. ಕೇಂದ್ರ ಸರ್ಕಾರ ಪರಿಹಾರ ನೀಡುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದರೆ, ಕಳೆದ ವರ್ಷ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ರೀತಿಯಲ್ಲಿ ಮತ್ತೆ ನ್ಯಾಯಾಲಯದ ಮೊರೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಬಾರದು. ಕೇಂದ್ರ ಸರ್ಕಾರ ಹಾಗೂ ಸಂಬಂಧಪಟ್ಟವರು ಅಂತಹ ಅವಕಾಶವನ್ನು ನೀಡಬಾರದು ಎಂದು ಮನವಿ ಮಾಡಿದರು.
ಗ್ಯಾರಂಟಿಗಳ ಹಣಕಾಸಿನ ಹೊರೆ ನಿರ್ವಹಿಸುತ್ತೇವೆ:
ಗ್ಯಾರಂಟಿ ಯೋಜನೆಗಳ ಕುರಿತು ಪಕ್ಷದ ಸಚಿವರು ಹಾಗೂ ಶಾಸಕರಿಂದ ಬರುತ್ತಿರುವ ವಿಭಿನ್ನ ಅಭಿಪ್ರಾಯಗಳ ಬಗ್ಗೆ ಪ್ರತಿಕ್ರಿಯಿಸಿದ ಡಾ.ಜಿ.ಪರಮೇಶ್ವರ ಅವರು, ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುವ ಸಂದರ್ಭದಲ್ಲಿ ಅವುಗಳಿಗೆ ಹೆಚ್ಚಿನ ಹಣ ಅಗತ್ಯವಾಗುತ್ತದೆ ಎಂಬುದು ಸರ್ಕಾರಕ್ಕೆ ಮೊದಲಿನಿಂದಲೂ ತಿಳಿದಿತ್ತು ಎಂದು ಹೇಳಿದರು.
ಪ್ರಣಾಳಿಕೆ ಸಿದ್ಧಪಡಿಸುವಾಗಲೇ ಯೋಜನೆಗಳಿಗೆ ಎಷ್ಟು ಹಣ ಬೇಕಾಗಬಹುದು ಎಂಬುದರ ಕುರಿತು ಅಂದಾಜು ಮಾಡಲಾಗಿತ್ತು. ಆರಂಭದಲ್ಲಿ ಸುಮಾರು 40ರಿಂದ 45 ಸಾವಿರ ಕೋಟಿ ರೂ. ವೆಚ್ಚವಾಗಬಹುದು ಎಂಬ ಅಂದಾಜಿತ್ತು. ನಂತರ ವಾಸ್ತವಿಕ ವೆಚ್ಚ ಸುಮಾರು 50 ಸಾವಿರ ಕೋಟಿಗೂ ಹೆಚ್ಚಾಗಿದೆ. ಆದರೂ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸುವ ನಿರ್ಧಾರವನ್ನು ಪ್ರಜ್ಞಾಪೂರ್ವಕವಾಗಿಯೇ ಕೈಗೊಳ್ಳಲಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ಹೂವಿನಹಡಗಲಿ| ಮರುಪ್ರತಿಷ್ಠಾಪಿಸಿದ ಗಣಪತಿಗೆ ಮುಸ್ಲಿಂ ಬಾಂಧವರಿಂದ ಪೂಜೆ, ವಿವಾದಕ್ಕೆ ತೆರೆ
ಹಣಕಾಸಿನ ಮೇಲೆ ಒತ್ತಡ ಇರುವುದನ್ನು ಯಾರೂ ಮುಚ್ಚಿಡಲು ಸಾಧ್ಯವಿಲ್ಲ. ಆದರೆ, ಕಳೆದ ಮೂರು ವರ್ಷಗಳಿಂದ ಸರ್ಕಾರ ಈ ಹಣಕಾಸಿನ ಬದ್ಧತೆಯನ್ನು ನಿರ್ವಹಿಸಿಕೊಂಡು ಬಂದಿದೆ. ಮುಂದಿನ ಎರಡು ವರ್ಷಗಳಲ್ಲೂ ಅದನ್ನು ನಿರ್ವಹಿಸುವ ಸಾಮರ್ಥ್ಯ ಸರ್ಕಾರಕ್ಕಿದೆ ಎಂದರು.
ಪಿಂಚಣಿ ಫಲಾನುಭವಿಗಳ ಮರು ಸೇರ್ಪಡೆ:
ಪಿಂಚಣಿ ವಿಚಾರವಾಗಿ ಮಾತನಾಡಿದ ಅವರು, ಈ ಹಿಂದೆ 32 ಸಾವಿರ ರೂ. ಇದ್ದ ಆದಾಯದ ಮೇಲಿನ ಮಿತಿಯನ್ನು ಈಗ 1.20 ಲಕ್ಷ ರೂ.ಗೆ ಹೆಚ್ಚಿಸಲಾಗಿದೆ. ಇದರಿಂದ ಹಿಂದೆ ಪಿಂಚಣಿಯಿಂದ ಹೊರಗುಳಿದಿದ್ದ ಹಲವು ಅರ್ಹರು ಮತ್ತೆ ಯೋಜನೆಯ ವ್ಯಾಪ್ತಿಗೆ ಬರಲಿದ್ದಾರೆ ಎಂದು ತಿಳಿಸಿದರು.
ಹಿಂದೆ ಸುಮಾರು 23 ಲಕ್ಷ ಜನರ ಪಿಂಚಣಿ ರದ್ದಾಗಿತ್ತು. ಈಗ ಆದಾಯದ ಮಿತಿಯನ್ನು ಹೆಚ್ಚಿಸಿರುವುದರಿಂದ ಅರ್ಹ ಫಲಾನುಭವಿಗಳಿಗೆ ಮತ್ತೆ ಪಿಂಚಣಿ ದೊರೆಯಲಿದೆ. ಅದೇ ಸಂದರ್ಭದಲ್ಲಿ ಸೂಕ್ತ ಪ್ರಮಾಣಪತ್ರ ಸಲ್ಲಿಸದವರು ಹಾಗೂ ವಯೋಮಿತಿ ಪೂರೈಸದವರ ಅರ್ಜಿಗಳನ್ನು ಪರಿಶೀಲಿಸಿ ಅನರ್ಹರನ್ನು ಹೊರಗಿಡುವ ಮೂಲಕ ವ್ಯವಸ್ಥೆಯಲ್ಲಿ ಶುದ್ಧೀಕರಣ ಮಾಡಲಾಗುವುದು ಎಂದು ಹೇಳಿದರು.
ಭೂಸುಧಾರಣೆ ಕಾಯ್ದೆ ಜಾರಿಗೆ ಇನ್ನೂ ಸಮಯವಿದೆ:
ಪ್ರಣಾಳಿಕೆಯಲ್ಲಿ ಭೂಸುಧಾರಣೆ ಕಾಯ್ದೆ ತಿದ್ದುಪಡಿ ಸೇರಿದಂತೆ ಹಲವು ವಿಚಾರಗಳನ್ನು ಪ್ರಸ್ತಾಪಿಸಲಾಗಿತ್ತು. ಅವುಗಳ ಜಾರಿಗೆ ಸಂಬಂಧಿಸಿದ ಪ್ರಶ್ನೆಗೆ ಉತ್ತರಿಸಿದ ಅವರು, ಇನ್ನೂ ಸರ್ಕಾರದ ಅವಧಿಯಲ್ಲಿ ಸುಮಾರು ಒಂದೂವರೆ ವರ್ಷ ಸಮಯವಿದೆ. ಈ ಅವಧಿ ಸಾಕಷ್ಟು ದೊಡ್ಡದಾಗಿದ್ದು, ಅಗತ್ಯವಿರುವ ಕ್ರಮಗಳನ್ನು ಕೈಗೊಳ್ಳಬಹುದು ಎಂದು ಹೇಳಿದರು. ಇದನ್ನೂ ಓದಿ: ಮಹಿಳಾ ಮೀಸಲಾತಿ ಸನ್ನಿಹಿತ – ತುಮಕೂರಿನಲ್ಲಿ ಪುತ್ರಿಯರನ್ನು ರಾಜಕೀಯ ಅಖಾಡಕ್ಕೆ ಅಣಿಗೊಳಿಸುತ್ತಿರುವ ನಾಯಕರು
ಕುಮಾರಸ್ವಾಮಿ ಹೋರಾಟಕ್ಕೆ ನಾವು ಅಡ್ಡಿಪಡಿಸುವುದಿಲ್ಲ:
ಮೈಸೂರು ಭಾಗದಲ್ಲಿ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಗ್ರಾಮಗಳಿಗೆ ಭೇಟಿ ನೀಡಿ ಜಮೀನು ಕಳೆದುಕೊಂಡವರ ಪರವಾಗಿ ಹೋರಾಟ ನಡೆಸುವುದಾಗಿ ಹೇಳಿರುವ ಕುರಿತು ಪ್ರತಿಕ್ರಿಯಿಸಿ, ಅವರು ಹೋರಾಟ ನಡೆಸುವುದಕ್ಕೆ ಯಾರೂ ಅಡ್ಡಿಪಡಿಸುವ ಪ್ರಶ್ನೆಯೇ ಇಲ್ಲ. ಅವರು ತಮ್ಮ ಹೋರಾಟವನ್ನು ಮಾಡಲಿ ಎಂದರು.
ಮುಖ್ಯಮAತ್ರಿ ಡಿ.ಕೆ.ಶಿವಕುಮಾರ್ ಅವರು ದೆಹಲಿಗೆ ತೆರಳಿರುವ ಕುರಿತು ಮಾತನಾಡಿದ ಅವರು, ಮುಖ್ಯಮಂತ್ರಿ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಭಾಗವಹಿಸಲು ತೆರಳಿದ್ದು, ಪಕ್ಷದ ನಾಯಕರನ್ನು ಭೇಟಿಯಾಗುವುದರ ಜೊತೆಗೆ ಕೇಂದ್ರದ ಕೆಲವು ಸಚಿವರನ್ನೂ ಭೇಟಿಯಾಗಲಿದ್ದಾರೆ ಎಂದು ಹೇಳಿದರು.
ಬರ ಪರಿಹಾರ ಹಾಗೂ ವಿಪತ್ತು ನಿರ್ವಹಣೆಯ ವಿಚಾರವಾಗಿ ಕೇಂದ್ರ ಗೃಹ ಸಚಿವರನ್ನು ಭೇಟಿ ಮಾಡುವ ಸಾಧ್ಯತೆಯಿದೆ. ಇದರ ಜೊತೆಗೆ ನೀರಾವರಿ, ಅರಣ್ಯ ಸೇರಿದಂತೆ ವಿವಿಧ ಇಲಾಖೆಗಳ ಕೇಂದ್ರ ಸಚಿವರನ್ನು ಭೇಟಿ ಮಾಡಿ ರಾಜ್ಯದ ಅಗತ್ಯಗಳನ್ನು ವಿವರಿಸುವ ಸಾಧ್ಯತೆಯಿದೆ ಎಂದು ತಿಳಿಸಿದರು.
ನಿಗಮ ಮಂಡಳಿಗೆ ಶೀಘ್ರ ನೇಮಕಾತಿ:
ನಿಗಮ ಮಂಡಳಿಗಳ ನೇಮಕಾತಿ ಕುರಿತು ಪ್ರತಿಕ್ರಿಯಿಸಿದ ಅವರು, ಪಕ್ಷದ ಕಾರ್ಯಾಧ್ಯಕ್ಷರು ಹಾಗೂ ಪದಾಧಿಕಾರಿಗಳ ನೇಮಕಾತಿ ಪ್ರಕ್ರಿಯೆ ಮತ್ತು ನಿಗಮ ಮಂಡಳಿ ಅಧ್ಯಕ್ಷರು ಹಾಗೂ ನಿರ್ದೇಶಕರ ನೇಮಕಾತಿ ಪ್ರಕ್ರಿಯೆ ಬೇರೆಬೇರೆ. ಈ ಸಂಬಂಧ ಈಗಾಗಲೇ ಪಕ್ಷದ ಪ್ರಧಾನ ಕಾರ್ಯದರ್ಶಿ, ಉಸ್ತುವಾರಿ ಪ್ರಧಾನ ಕಾರ್ಯದರ್ಶಿ, ಮುಖ್ಯಮಂತ್ರಿ ಹಾಗೂ ಮಾಜಿ ಮುಖ್ಯಮಂತ್ರಿ ಸೇರಿದಂತೆ ಪ್ರಮುಖರು ಸಭೆ ನಡೆಸಿ ಅಂತಿಮಗೊಳಿಸಿದ್ದಾರೆ ಎಂಬ ಮಾಹಿತಿ ಇದೆ. ಆದಷ್ಟು ಶೀಘ್ರದಲ್ಲಿ ನೇಮಕಾತಿ ನಡೆಯಬಹುದು ಎಂದು ಅವರು ಹೇಳಿದರು. ಇದನ್ನೂ ಓದಿ: ತೆರಿಗೆ ವಂಚನೆ ಆರೋಪ – ನಟಿ ರಕುಲ್ ಪ್ರೀತ್ ಸಿಂಗ್‌ಗೆ ಐಟಿ ಶಾಕ್

