ಬೆಂಗಳೂರು: ಕೆಪಿಎಸ್‌ಸಿ ಪಶುವೈದ್ಯಾಧಿಕಾರಿ ನೇಮಕಾತಿ ಅಕ್ರಮ (KPSC Scam) ಪ್ರಕರಣದಲ್ಲಿ ಆರೋಪಿ, ಐಎಎಸ್ ಅಧಿಕಾರಿ ಗ್ಯಾನೇಂದ್ರ ಕುಮಾರ್ (Gyanendra Kumar) ಅವರನ್ನು 8 ದಿನ ಇ.ಡಿ ಕಸ್ಟಡಿಗೆ ನೀಡಲಾಗಿದೆ.
ಕಸ್ಟಡಿ ಅಂತ್ಯ ಹಿನ್ನೆಲೆ ಸಿಬಿಐ ವಿಶೇಷ ನ್ಯಾಯಾಲಯದ ಮುಂದೆ ಆರೋಪಿ ಗ್ಯಾನೇಂದ್ರರನ್ನು ಹಾಜರುಪಡಿಸಲಾಯಿತು. ಮತ್ತೆ 8 ದಿನ ಇ.ಡಿ ಕಸ್ಟಡಿಗೆ ವಹಿಸಿ ಕೋರ್ಟ್ ಆದೇಶಿಸಿದೆ. ಇದನ್ನೂ ಓದಿ: IAS ಅಧಿಕಾರಿ ಗ್ಯಾನೇಂದ್ರ ಕುಮಾರ್ ಜಾಮೀನು ಅರ್ಜಿ ವಜಾ
ಕೋರ್ಟ್‌ನಲ್ಲಿ ಆರೋಪಿ ಗ್ಯಾನೇಂದ್ರ ಪರ ವಕೀಲರು, ಗ್ಯಾನೇಂದ್ರ ಕುಮಾರ್ ಅವರಿಗೆ ಬೆನ್ನು ನೋವಿನ ಸಮಸ್ಯೆ ಇದೆ. ಪಿಸಿಯೋಥೆರಪಿ ಅವಶ್ಯಕತೆ ಇದೆ. ವಿಚಾರಣೆ ಹೆಸರಿಗೆ ಅವರಿಗೆ ತೊಂದರೆ ನೀಡಲಾಗುತ್ತಿದೆ ಎಂದು ವಾದಿಸಿದರು.
ಇ.ಡಿ ಪರ ವಾದಿಸಿದ ವಕೀಲರು, 2026ರ ಜನವರಿ 9 ರಂದು ಪರೀಕ್ಷೆ ನಡೆದಿದೆ. ಪರೀಕ್ಷೆಗೂ 6 ತಿಂಗಳು ಮೊದಲಿನಿಂದಲೂ ಹಣ ಸಂಗ್ರಹಿಸಲಾಗಿದೆ. ಬಸವರಾಜ್ ಕನ್ನಾಳೆ ಜೊತೆಗೆ ಚಿನ್ನಾಭರಣ ಖರೀದಿಗೆ ಹಣದ ವ್ಯವಹಾರ ಪ್ರಸ್ತಾಪವಾಗಿತ್ತು. ಗ್ಯಾನೇಂದ್ರ ಸೋದರ ಸಂಬಂಧಿ ಬ್ಯಾಂಕ್ ಅಕೌಂಟ್ ಮೂಲಕ ಹಣ ವರ್ಗಾವಣೆ ಆಗಿದೆ ಎಂದು ಅಪಾರ ಪ್ರಮಾಣದ ಅಕ್ರಮ ಹಣಕಾಸು ವರ್ಗಾವಣೆ ಬಗ್ಗೆ ಕೋರ್ಟ್ ಗಮನ ಸೆಳೆದರು. ಇದನ್ನೂ ಓದಿ: ಪರೀಕ್ಷೆ ಮುಗಿದ ಐದೇ ದಿನಕ್ಕೆ ಕಾನ್ಸ್‌ಸ್ಟೇಬಲ್ ಪರೀಕ್ಷೆ ಫಲಿತಾಂಶ ಪ್ರಕಟ
ವಾದ-ಪ್ರತಿವಾದ ಆಲಿಸಿದ ನ್ಯಾಯಾಧೀಶರು, ಆರೋಪಿ ಗ್ಯಾನೇಂದ್ರರನ್ನು 8 ದಿನ ಇ.ಡಿ ಕಸ್ಟಡಿಗೆ ನೀಡಿ ಆದೇಶಿಸಿದ್ದಾರೆ. ಸೆ.26 ರಿಂದ ಅ.3ರ ವರೆಗೆ ಕಸ್ಟಡಿಗೆ ನೀಡಲಾಗಿದೆ. ಅ.3ರ ಮಧ್ಯಾಹ್ನ 3 ಗಂಟೆಗೆ ಮತ್ತೆ ಕೋರ್ಟ್ಗೆ ಹಾಜರುಪಡಿಸಲು ಸೂಚಿಸಲಾಗಿದೆ.

