ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ಕೆಎಸ್ಆರ್ಪಿ (KSRP), ಕೆಎಸ್ಐಎಸ್ಎಫ್ (KSISF) ಹಾಗೂ ಐಆರ್ಬಿ (IRB) ಪೊಲೀಸ್ ಕಾನ್ಸ್ಟೇಬಲ್ ನೇಮಕಾತಿಗೆ(Constable Exams) ಸಂಬಂಧಿಸಿದಂತೆ ನಡೆಸಲಾಗಿದ್ದ ಲಿಖಿತ ಪರೀಕ್ಷೆಯ ತಾತ್ಕಾಲಿಕ ಫಲಿತಾಂಶವನ್ನು ದಾಖಲೆ ಅವಧಿಯಲ್ಲಿ, ಅಂದರೆ ಪರೀಕ್ಷೆ ನಡೆದ ಕೇವಲ ಐದು ದಿನಗಳಲ್ಲೇ ಶುಕ್ರವಾರ ಪ್ರಕಟಿಸಿದೆ.
ಸೆಪ್ಟೆಂಬರ್ 20 ರಂದು ನಡೆದಿದ್ದ ಈ ಲಿಖಿತ ಪರೀಕ್ಷೆಯ ಫಲಿತಾಂಶದ ಬಗ್ಗೆ ಮಾಹಿತಿ ನೀಡಿರುವ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್. ಪ್ರಸನ್ನ ಅವರು, ಇಷ್ಟು ಕಡಿಮೆ ಅವಧಿಯಲ್ಲಿ ಫಲಿತಾಂಶ ಬಿಡುಗಡೆ ಮಾಡಿರುವುದು ಪ್ರಾಧಿಕಾರದ ಮಹತ್ವದ ಸಾಧನೆ ಎಂದು ತಿಳಿಸಿದ್ದಾರೆ.
ಪ್ರಕಟಿಸಲಾಗಿರುವ ತಾತ್ಕಾಲಿಕ ಫಲಿತಾಂಶಕ್ಕೆ ಸಂಬಂಧಿಸಿದಂತೆ ಅಭ್ಯರ್ಥಿಗಳಿಗೆ ಯಾವುದೇ ಆಕ್ಷೇಪಣೆಗಳಿದ್ದರೆ, ಪ್ರಾಧಿಕಾರ ಒದಗಿಸಿರುವ ಅಧಿಕೃತ ಲಿಂಕ್ ಮೂಲಕ ಸೆಪ್ಟೆಂಬರ್ 27ರ ಒಳಗೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಇದನ್ನೂ ಓದಿ: ಸರ್ಕಾರದಿಂದ ಮಕ್ಕಳಿಗೆ ಕಳಪೆ ಶೂಭಾಗ್ಯ – ವಿತರಣೆಗೂ ಮುನ್ನವೇ ಕಿತ್ತುಹೋದ ಶೂ, ಸಾಕ್ಸ್
ಪರೀಕ್ಷಾ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುವ ನಿಟ್ಟಿನಲ್ಲಿ, ಪರೀಕ್ಷೆ ನಡೆದ ದಿನವೇ ಎಲ್ಲಾ ಅಭ್ಯರ್ಥಿಗಳ ಒಎಂಆರ್ (OMR) ಉತ್ತರ ಪತ್ರಿಕೆಗಳನ್ನು ಸ್ಕ್ಯಾನ್ ಮಾಡಿ ಕೆಇಎ ಅಧಿಕೃತ ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡಲಾಗಿತ್ತು ಎಂದು ಹೆಚ್. ಪ್ರಸನ್ನ ಅವರು ಮಾಧ್ಯಮ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದ್ದಾರೆ.

