– ದೇಶಾದ್ಯಂತ ವಂದೇ ಮಾತರಂ ಪ್ರತಿಧ್ವನಿ
ನವದೆಹಲಿ: ದೇಶಾದ್ಯಂತ ಸೆ.25ರಂದು 1 ಕೋಟಿಗೂ ಅಧಿಕ ಜನರಿಂದ ಏಕಕಾಲದಲ್ಲಿ ಸಂಪೂರ್ಣ ವಂದೇ ಮಾತರಂ (Vande Mataram) ಗೀತೆ ಮೊಳಗಲಿದೆ.
ವಿದ್ಯಾಭಾರತಿ ಅಖಿಲ ಭಾರತೀಯ ಶಿಕ್ಷಾ ಸಂಸ್ಥಾನದ `ನಮಾಮಿ ಭಾರತಮ್’ (Namami Bharatam) ಅಭಿಯಾನದಡಿಯಲ್ಲಿ ವಂದೇ ಮಾತರಂ 150ನೇ ವರ್ಷಾಚರಣೆಯ ಅಂಗವಾಗಿ `ಒಂದು ಧ್ವನಿ – ಒಂದು ಸಂಕಲ್ಪ – ಒಂದು ಭಾರತ’ ಎಂಬ ಥೀಮ್ನಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ನಾಳೆ (ಸೆ.25) ಒಟ್ಟು 25,000ಕ್ಕೂ ಹೆಚ್ಚು ಸ್ಥಳಗಳಲ್ಲಿ 1 ಕೋಟಿಗೂ ಅಧಿಕ ವಿದ್ಯಾರ್ಥಿಗಳು, ಶಿಕ್ಷಕರು, ಪೋಷಕರು ಮತ್ತು ನಾಗರಿಕರು ಏಕಕಾಲದಲ್ಲಿ ಸಂಪೂರ್ಣ ವಂದೇ ಮಾತರಂ ಗೀತೆಯನ್ನು ಹಾಡಲಿದ್ದಾರೆ. ಇದನ್ನೂ ಓದಿ: ದ್ವಿಚಕ್ರ ವಾಹನಕ್ಕೆ ಸಿಮೆಂಟ್ ಲಾರಿ ಡಿಕ್ಕಿ – ವಿದ್ಯಾರ್ಥಿನಿ ದಾರುಣ ಸಾವು
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ (Delhi) ಈ ಅಭಿಯಾನದಲ್ಲಿ ಹೆಚ್ಚಿನ ಜನರು ಭಾಗವಹಿಸುವ ನಿರೀಕ್ಷೆಯಿದ್ದು, ಸುಮಾರು 300 ಸ್ಥಳಗಳಲ್ಲಿ 1 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು, ಶಿಕ್ಷಕರು, ಪೋಷಕರು ಮತ್ತು ನಾಗರಿಕರು ಭಾಗವಹಿಸುವ ಸಾಧ್ಯತೆಯಿದೆ.
ಏಕಕಾಲದಲ್ಲಿ ವಂದೇ ಮಾತರಂ ಹಾಡುವುದಲ್ಲದೇ, ವಿದ್ಯಾರ್ಥಿಗಳು ಮತ್ತು ಯುವ ಪೀಳಿಗೆಗೆ ವಂದೇ ಮಾತರಂನ ಐತಿಹಾಸಿಕ ಪ್ರಯಾಣ ಹಾಗೂ ಭಾರತದ ಸ್ವಾತಂತ್ರ್ಯ ಹೋರಾಟದೊಂದಿಗೆ ಅದಕ್ಕಿರುವ ನಂಟನ್ನು ತಿಳಿಸಿಕೊಡುವುದು ಈ ಅಭಿಯಾನದ ಮುಖ್ಯ ಉದ್ದೇಶವಾಗಿದೆ. ಈಗಾಗಲೇ ಈ ಕಾರ್ಯಕ್ರಮದ ಅಂಗವಾಗಿ ಶಾಲೆಗಳಲ್ಲಿ ವಂದೇ ಮಾತರಂಗೆ ಸಂಬಂಧಿಸಿದ ಪ್ರದರ್ಶನಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಚಟುವಟಿಕೆಗಳನ್ನು ನಡೆಸಲಾಗಿದೆ.ಇದನ್ನೂ ಓದಿ: ಪರಪ್ಪನ ಅಗ್ರಹಾರ ಜೈಲಿನ ವಾರ್ಡರ್ನಿಂದ ಹಲ್ಲೆ – ಡಾಬಾ ಮಾಲೀಕ ಸಾವು
ಸ್ವಾತಂತ್ರ್ಯದ ನಂತರ, `ಜನ ಗಣ ಮನ’ವನ್ನು ರಾಷ್ಟ್ರಗೀತೆಯಾಗಿ ಅಂಗೀಕರಿಸಿದರೆ, ವಂದೇ ಮಾತರಂಗೆ ಭಾರತದ ರಾಷ್ಟ್ರೀಯ ಗೀತೆಯ ಸ್ಥಾನವನ್ನು ನೀಡಲಾಯಿತು. `ನಮಾಮಿ ಭಾರತಮ್’ ಮೂಲಕ, ವಂದೇ ಮಾತರಂನ 150 ವರ್ಷಗಳ ಪಯಣವನ್ನು ಗುರುತಿಸಲು, ಸ್ವಾತಂತ್ರ್ಯ ಹೋರಾಟದೊಂದಿಗೆ ಅದರ ಐತಿಹಾಸಿಕ ಒಡನಾಟವನ್ನು ಮತ್ತು ಸಾರ್ವಜನಿಕ ಜೀವನದಲ್ಲಿ ಅದರ ಮುಂದುವರಿದ ಮಹತ್ವವನ್ನು ಎತ್ತಿ ತೋರಿಸಲು ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಈ ರಾಷ್ಟ್ರವ್ಯಾಪಿ ಕಾರ್ಯಕ್ರಮದಲ್ಲಿ ಏಕಕಾಲದಲ್ಲಿ ಅತಿ ಹೆಚ್ಚು ಜನರು ವಂದೇ ಮಾತರಂ ಹಾಡುವುದರ ಮೂಲಕ ಹೊಸ ದಾಖಲೆ ನಿರ್ಮಿಸಲು ಹೊರಟಿದೆ. ಇದಕ್ಕಾಗಿ `ಏಷ್ಯಾ ಬುಕ್ ಆಫ್ ರೆಕಾರ್ಡ್ಸ್’ (Asia Book Of Records) ಮತ್ತು `ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್’ (India Book of Records) ಸಂಸ್ಥೆಗಳಿಗೆ ಅರ್ಜಿ ಸಲ್ಲಿಸಲಾಗಿದೆ.ಇದನ್ನೂ ಓದಿ: ಜ್ಞಾನೇಶ್ ಕುಮಾರ್ ವಿರುದ್ಧ ಮಹಾಭಿಯೋಗ ನಿರ್ಣಯಕ್ಕೆ ಮುಂದಾದ INDIA ಒಕ್ಕೂಟ

