– SIR ವಿಚಾರದಲ್ಲಿ ಚುನಾವಣಾ ಆಯೋಗದ ಭಿನ್ನಾಭಿಪ್ರಾಯ ವರದಿ ಬೆನ್ನಲ್ಲೇ ವಾಗ್ದಾಳಿ
ನವದೆಹಲಿ: ನೀವು ಮಾಡಿರುವುದು ದೇಶದ್ರೋಹ, ನಾನು ಚುನಾವಣಾ ಆಯೋಗ ಮತ್ತು ಅದರ ಅಧಿಕಾರಿಗಳಿಗೆ ಸ್ಪಷ್ಟವಾಗಿ ಹೇಳುತ್ತಿದ್ದೇನೆ. ಸಮಯ ಬಂದೇ ಬರುತ್ತೆ, ನೀವು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ, ನಿಮ್ಮನ್ನ ಹಿಡಿಯುತ್ತೇನೆ ಎಂದು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ (Rahul Gandhi) ಎಚ್ಚರಿಕೆ ನೀಡಿದ್ದಾರೆ.
ʻಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR) ವಿಚಾರದಲ್ಲಿ ಚುನಾವಣಾ ಆಯೋಗದೊಳಗೆ (Election Commission) ಆಂತರಿಕ ಭಿನ್ನಮತ ಉಂಟಾಗಿದೆʼ ಎನ್ನುವ ವರದಿ ಬೆನ್ನಲ್ಲೇ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ, ಎಕ್ಸ್ ಖಾತೆಯಲ್ಲಿ ವಿಡಿಯೋ ಪೋಸ್ಟ್ ಹಂಚಿಕೊಂಡಿದ್ದು ಆಯೋಗದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
Vote chori is a crime against the Indian people and a direct attack on our constitution.
The BJP, RSS and EC who organised it have committed an act of treason.
Justice will be served. pic.twitter.com/30kX06CBiH
— Rahul Gandhi (@RahulGandhi) September 23, 2026
ಚುನಾವಣಾ ಆಯೋಗದ ಕ್ರಮಗಳು ಜನರ ಹಿತಾಸಕ್ತಿಗೆ ವಿರುದ್ಧವಾಗಿವೆ. ಆಯೋಗ ಕೈಗೊಳ್ಳುತ್ತಿರುವ ಕ್ರಮಗಳು ತಪ್ಪು. ಈ ಪ್ರಕ್ರಿಯೆ ‘ಮತ ಕಳ್ಳತನ’ಕ್ಕೆ ಸಮಾನವಾಗಿದ್ದು, ದೇಶದ ಸಂವಿಧಾನಾತ್ಮಕ ವ್ಯವಸ್ಥೆಯ ಮೇಲಿನ ನೇರ ದಾಳಿಯಾಗಿದೆ ಎಂದು ಆರೋಪಿಸಿದ್ದಾರೆ.
ಅಲ್ಲದೇ ಭಾರತದಲ್ಲಿ ಮತಗಳ್ಳತನವು (Vote Chori) ದೇಶದ ಜನರ ವಿರುದ್ಧದ ಕೃತ್ಯ ಮತ್ತು ನಮ್ಮ ಸಂವಿಧಾನದ ಮೇಲಿನ ನೇರ ದಾಳಿ. ಇದನ್ನು ನಡೆಸಿರುವ ಬಿಜೆಪಿ, ಆರ್‌ಎಸ್‌ಎಸ್ ಮತ್ತು ಚುನಾವಣಾ ಆಯೋಗ ದೇಶದ್ರೋಹ ಎಸಗಿವೆ, ನ್ಯಾಯ ದೊರೆಯಲಿದೆ ಎಂದು ಬರೆದುಕೊಂಡಿದ್ದಾರೆ.
ನೀವು ಮಾಡಿದ್ದು ದೇಶ ವಿರೋಧಿ ಕೃತ್ಯ
ಇನ್ನೂ 15 ಸೆಕೆಂಡುಗಳ ವಿಡಿಯೋವನ್ನೂ ಹಂಚಿಕೊಂಡಿರುವ ರಾಗಾ, ʻನಾನು ಚುನಾವಣಾ ಆಯೋಗ ಮತ್ತು ಚುನಾವಣಾಧಿಕಾರಿಗಳಿಗೆ ಸ್ಪಷ್ಟವಾಗಿ ಹೇಳುತ್ತಿದ್ದೇನೆ, ನೀವು ಮಾಡುತ್ತಿರುವುದು ತಪ್ಪು. ಇದು ದೇಶದ್ರೋಹ, ಇದು ದೇಶ ವಿರೋಧಿ ಕೃತ್ಯ. ಇದನ್ನ ಮರೆಯಬೇಡಿ. ಸಮಯ ಬರುತ್ತದೆ, ನಾವು ನಿಮ್ಮನ್ನು ಹಿಡಿಯುತ್ತೇವೆ, ನಿಮ್ಮನ್ನು ಬಿಡೋದಿಲ್ಲʼ ಎಂದು ಎಚ್ಚರಿಕೆ ಕೊಟ್ಟಿದ್ದಾರೆ.
ಎಸ್‌ಐಆರ್ ಕುರಿತ ಮಾಧ್ಯಮ ವರದಿ ಇದೀಗ ಮತ್ತೊಮ್ಮೆ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದ್ದು, ಪ್ರತಿಪಕ್ಷ ನಾಯಕರು ಚುನಾವಣಾ ಆಯೋಗದ ಕಾರ್ಯವೈಖರಿ ಕುರಿತು ಪ್ರಶ್ನೆಗಳನ್ನ ಎತ್ತಿದ್ದಾರೆ. ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನೂ ಪ್ರತಿಪಕ್ಷ ನಾಯಕರು ಗುರಿಯಾಗಿಸಿಕೊಂಡಿದ್ದಾರೆ.

10 ತಿಂಗಳಲ್ಲಿ 14 ಬಾರಿ ಆಯೋಗದ ನಿರ್ಧಾರಕ್ಕೆ ಆಕ್ಷೇಪ
ಎಸ್‌ಐಆರ್ ಪ್ರಕ್ರಿಯೆಗೆ ಸಂಬಂಧಿಸಿದಂತೆ ಚುನಾವಣಾ ಆಯೋಗದೊಳಗೆ ಭಿನ್ನಾಭಿಪ್ರಾಯವಿದೆ ಎಂದು ಮಾಧ್ಯಮವೊಂದು ವರದಿ ಮಾಡಿತ್ತು. 2025ರ ನವೆಂಬರ್ ತಿಂಗಳಿನಿಂದ 2026ರ ಆಗಸ್ಟ್ ವರೆಗೆ ದಾಖಲಾದ ಲಿಖಿತ ಆಕ್ಷೇಪಣೆಗಳನ್ನ ಪರಿಶೀಲಿಸಿದ ನಂತರ ಈ ವರದಿ ಪ್ರಕಟಿಸಲಾಗಿದೆ ಎಂದು ಮಾಧ್ಯಮದ ವರದಿಯಲ್ಲಿ ಉಲ್ಲೇಖಿಸಲಾಗಿತ್ತು.
ಚುನಾವಣಾ ಆಯುಕ್ತರಾದ ಸುಖ್ಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಅವರು ಕಳೆದ 10 ತಿಂಗಳಲ್ಲಿ ಕನಿಷ್ಠ 14 ಬಾರಿ ಆಯೋಗದ ನಿರ್ಧಾರಗಳು ಮತ್ತು ಆದೇಶಗಳ ಕುರಿತು ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಆಕ್ಷೇಪಣೆಗಳು SIR ಪ್ರಕ್ರಿಯೆ ಮಾತ್ರವಲ್ಲದೆ, ಫಾರ್ಮ್-6ನಲ್ಲಿ ಬದಲಾವಣೆ, ಹೊಸ ಮತದಾರರ ಸೇರ್ಪಡೆ, ಮತದಾರರ ಹೆಸರುಗಳ ಅಳಿಸುವಿಕೆ, ಮತದಾರರ ಪಟ್ಟಿಗೆ ಸಂಬಂಧಿಸಿದ ಮೇಲ್ಮನವಿ ಹಾಗೂ ಚುನಾವಣಾ ಪಟ್ಟಿಯ ದತ್ತಾಂಶಕ್ಕೆ ಪ್ರವೇಶ ಸೇರಿದಂತೆ ಹಲವು ವಿಚಾರಗಳನ್ನು ಒಳಗೊಂಡಿದ್ದವು ಎಂದು ವರದಿ ತಿಳಿಸಿತ್ತು.
ಕೆಲವು ನಿರ್ಧಾರಗಳು ಮತ್ತು ಆದೇಶಗಳು ತಮ್ಮ ಗಮನಕ್ಕೆ ಬಾರದೇ ಹೊರಡಿಸಲಾಗುತ್ತಿದೆ ಎಂಬ ಪ್ರಶ್ನೆಯನ್ನೂ ಇಬ್ಬರು ಚುನಾವಣಾ ಆಯುಕ್ತರು ಎತ್ತಿದ್ದರು. ಈ ಆಕ್ಷೇಪಣೆಗಳನ್ನ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ಗಮನಕ್ಕೂ ತರಲಾಗಿತ್ತು ಎಂದು ವರದಿಯಲ್ಲಿ ಹೇಳಲಾಗಿತ್ತು.

