ಟೀಂ ಇಂಡಿಯಾದ ಮಾಜಿ ನಾಯಕ, ಲೆಜೆಂಡ್ ಎಂ.ಎಸ್. ಧೋನಿ (MS Dhoni) ಇಂಡಿಯನ್ ಪ್ರೀಮಿಯರ್ ಲೀಗ್ಗೆ (IPL) ವಿದಾಯ ಘೋಷಿಸಿದ್ದಾರೆ. ಇದರ ಬೆನ್ನಲ್ಲೇ ಚೆನ್ನೈ ಸೂಪರ್ ಕಿಂಗ್ಸ್ (CSK) ಫ್ರಾಂಚೈಸಿ ಧೋನಿಗೆ ಹೊಸ ಜವಾಬ್ದಾರಿ ನೀಡಿದ್ದು, ತಂಡದ ಮಾಜಿ ನಾಯಕನನ್ನ ಮೆಂಟರ್ ಆಗಿ ನೇಮಕ ಮಾಡಿಕೊಂಡಿದೆ. 2008ರಲ್ಲಿ ಐಪಿಎಲ್ನ ಮೊದಲ ಆವೃತ್ತಿಯಿಂದ ಆರಂಭವಾದ ಧೋನಿ ಮತ್ತು ಚೆನ್ನೈ ತಂಡದ ನಡುವಿನ ಸುದೀರ್ಘ ಬಾಂಧವ್ಯ ಇದೀಗ ಹೊಸ ರೂಪದಲ್ಲಿ ಮುಂದುವರಿಯಲಿದೆ.
5 ಬಾರಿ ಐಪಿಎಲ್ ಚಾಂಪಿಯನ್ ಪಟ್ಟ ಅಲಂಕರಿಸಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಯಶಸ್ಸಿನಲ್ಲಿ ಧೋನಿ ಪಾತ್ರ ಅಪಾರವಾದದ್ದು. ಮೈದಾನದಲ್ಲಿ ಆಟಗಾರನಾಗಿ ಮಾತ್ರವಲ್ಲದೇ, ನಾಯಕನಾಗಿ ಮತ್ತು ತಂಡದ ಮಾರ್ಗದರ್ಶಕನಾಗಿಯೂ ಅವರು ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಹಲವು ಹೊಸ ಪ್ರತಿಭೆಗಳನ್ನ ಬೆಳೆಸಿದ್ದಾರೆ.
ಐಪಿಎಲ್ ಇತಿಹಾಸದಲ್ಲೇ ಅತ್ಯಂತ ಯಶಸ್ವಿ ನಾಯಕರಲ್ಲಿ ಒಬ್ಬರಾಗಿರುವ ಧೋನಿ, ತಮ್ಮ ನಾಯಕತ್ವದಲ್ಲಿ ಚೆನ್ನೈ ತಂಡಕ್ಕೆ 2010, 2011, 2018, 2021 ಮತ್ತು 2023ರಲ್ಲಿ ಚಾಂಪಿಯನ್ ಪಟ್ಟ ತಂದುಕೊಟ್ಟಿದ್ದಾರೆ. ಈ ಮೂಲಕ 5 ಐಪಿಎಲ್ ಟ್ರೋಫಿಗಳನ್ನು ಗೆದ್ದ ನಾಯಕರ ಪಟ್ಟಿಯಲ್ಲಿ ರೋಹಿತ್ ಶರ್ಮಾ ಅವರೊಂದಿಗೆ ಅಗ್ರಸ್ಥಾನ ಹಂಚಿಕೊಂಡಿದ್ದಾರೆ.
ಧೋನಿ ನಾಯಕತ್ವದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ 10 ಬಾರಿ ಐಪಿಎಲ್ ಫೈನಲ್ ಪ್ರವೇಶಿಸಿದ್ದು, 12 ಸೀಸನ್ಗಳಲ್ಲಿ ಪ್ಲೇಆಫ್ಗೆ ಅರ್ಹತೆ ಪಡೆದಿದೆ. ಚೆನ್ನೈ ತಂಡವನ್ನು 235 ಪಂದ್ಯಗಳಲ್ಲಿ ಮುನ್ನಡೆಸಿರುವ ಧೋನಿ, 143 ಗೆಲುವು, 90 ಸೋಲು ಹಾಗೂ ಎರಡು ಪಂದ್ಯಗಳಲ್ಲಿ ಫಲಿತಾಂಶವಿಲ್ಲದ ದಾಖಲೆಯನ್ನು ಹೊಂದಿದ್ದಾರೆ.
ಒಟ್ಟಾರೆ ಐಪಿಎಲ್ನಲ್ಲಿ 226 ಪಂದ್ಯಗಳಲ್ಲಿ ನಾಯಕತ್ವ ವಹಿಸಿ 136 ಗೆಲುವುಗಳನ್ನ ದಾಖಲಿಸಿದ್ದಾರೆ. ಈ ಮೂಲಕ ಐಪಿಎಲ್ನಲ್ಲಿ ಅತಿ ಹೆಚ್ಚು ಪಂದ್ಯಗಳನ್ನು ಮುನ್ನಡೆಸಿದ ಹಾಗೂ ಅತ್ಯಂತ ಯಶಸ್ವಿ ನಾಯಕರಲ್ಲಿ ಅಗ್ರಸ್ಥಾನದಲ್ಲಿದ್ದಾರೆ.
ಬ್ಯಾಟಿಂಗ್ನಲ್ಲೂ ಧೋನಿ ದಾಖಲೆಗಳ ಸಾಧನೆ
45 ವರ್ಷದ ಧೋನಿ ಬ್ಯಾಟಿಂಗ್ನಲ್ಲೂ ಗಮನಾರ್ಹ ಸಾಧನೆ ಮಾಡಿದ್ದಾರೆ. ಐಪಿಎಲ್ನಲ್ಲಿ ಒಟ್ಟು 5,439 ರನ್ ಗಳಿಸಿರುವ ಅವರು, 38.30ರ ಸರಾಸರಿ ಮತ್ತು 138.20ರ ಸ್ಟ್ರೈಕ್ರೇಟ್ ಹೊಂದಿದ್ದಾರೆ. ಇದರಲ್ಲಿ 24 ಅರ್ಧಶತಕಗಳು, 375 ಬೌಂಡರಿಗಳು ಹಾಗೂ 264 ಸಿಕ್ಸರ್ಗಳು ಸೇರಿವೆ. ಅಜೇಯ 84 ರನ್ ಐಪಿಎಲ್ನಲ್ಲಿನ ಅವರ ಗರಿಷ್ಠ ವೈಯಕ್ತಿಕ ಸ್ಕೋರ್ ಆಗಿದೆ.
2013ರ ಐಪಿಎಲ್ನಲ್ಲಿ 461 ರನ್ ಗಳಿಸಿದ್ದು, ರನ್ ಗಳಿಕೆಯ ದೃಷ್ಟಿಯಿಂದ ಧೋನಿಯ ಅತ್ಯುತ್ತಮ ವೈಯಕ್ತಿಕ ಸೀಸನ್ ಆಗಿದೆ. ಇನ್ನು 2018ರಲ್ಲಿ ಚೆನ್ನೈ ತಂಡ ಐಪಿಎಲ್ಗೆ ಭರ್ಜರಿ ಕಮ್ಬ್ಯಾಕ್ ಮಾಡಿ ಪ್ರಶಸ್ತಿ ಗೆದ್ದ ಸಂದರ್ಭದಲ್ಲಿ ಧೋನಿ 75.83ರ ಸರಾಸರಿಯಲ್ಲಿ 455 ರನ್ ಗಳಿಸಿದ್ದರು. 2019ರ ಆವೃತ್ತಿಯಲ್ಲೂ ಧೋನಿ ಅದ್ಭುತ ಪ್ರದರ್ಶನ ನೀಡಿದ್ದರು. ಈ ಸೀಸನ್ನಲ್ಲಿ 83.20ರ ಸರಾಸರಿಯಲ್ಲಿ 416 ರನ್ ಗಳಿಸಿ ಮಿಂಚಿದ್ದರು.
ಚೆನ್ನೈ ಸೂಪರ್ ಕಿಂಗ್ಸ್ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ ಧೋನಿ 2ನೇ ಸ್ಥಾನದಲ್ಲಿದ್ದಾರೆ. ಒಟ್ಟಾರೆ ಐಪಿಎಲ್ ರನ್ ಗಳಿಕೆಯ ಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದ್ದು, ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಶಿಖರ್ ಧವನ್, ಡೇವಿಡ್ ವಾರ್ನರ್, ಕೆ.ಎಲ್ ರಾಹುಲ್ ಮತ್ತು ಸುರೇಶ್ ರೈನಾ ಅವರ ನಂತರದ ಸ್ಥಾನದಲ್ಲಿದ್ದಾರೆ.
ವಿಕೆಟ್ ಕೀಪಿಂಗ್ನಲ್ಲೂ ಮುರಿಯಲಾಗದ ದಾಖಲೆ
ಧೋನಿಯ ವಿಕೆಟ್ ಕೀಪಿಂಗ್ ಸಾಧನೆಯೂ ಅವರ ಶ್ರೇಷ್ಠತೆಗೆ ಸಾಕ್ಷಿಯಾಗಿದೆ. ಐಪಿಎಲ್ನಲ್ಲಿ ವಿಕೆಟ್ ಕೀಪರ್ ಆಗಿ 158 ಕ್ಯಾಚ್ಗಳು ಹಾಗೂ 47 ಸ್ಟಂಪಿಂಗ್ಗಳನ್ನು ಮಾಡಿದ್ದಾರೆ. ಈ ಮೂಲಕ ಒಟ್ಟು 205 ವಿಕೆಟ್ಗಳನ್ನ ಪಡೆದುಕೊಂಡಿದ್ದಾರೆ. ಕ್ಯಾಚ್ ಮತ್ತು ಸ್ಟಂಪಿಂಗ್ ಎರಡೂ ವಿಭಾಗಗಳಲ್ಲಿ ಐಪಿಎಲ್ ವಿಕೆಟ್ ಕೀಪರ್ಗಳ ಪೈಕಿ ಧೋನಿ ಅಗ್ರ ದಾಖಲೆ ಹೊಂದಿದ್ದಾರೆ.


